ದಾವಣಗೆರೆ: ಸಭೆಗೆ ಜನ ಸೇರಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಂಗಳವಾರ ರಾತ್ರಿ ವಾಗ್ವಾದ ನಡೆದಿದೆ. ಸಭೆಯ ಬಳಿಕ ಕಾರ್ಯಕರ್ತರಿಬ್ಬರು ನಡುವೆ ಜಗಳವಾಗಿದ್ದು, ಒಬ್ಬಾತ ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾನೆ.
ಮಂಗಳವಾರ ರಾತ್ರಿ ದುರ್ಗಾಂಬಿಕಾ ದೇವಾಲಯದ ಬಳಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರೇ ಜಟಾಪಟಿ ನಡೆಯಿತು.
ಮಹಾನಗರ ಪಾಲಿಕೆ ಸದಸ್ಯ ಆಕ್ಷಾಂಕ್ಷಿ ಬಾಬುರಾವ್ ಸೋಳಂಕಿ ಹಾಗೂ ಕಾರ್ಯಕರ್ತ ರಮೇಶ್ ಎಂಬವರು ‘ಕಾಂಗ್ರೆಸ್ ಸಭೆಗೆ ನಾವು ಹೆಚ್ಚಿನ ಜನ ಸೇರಿಸಿದ್ದೇವೆ’ ಎಂದರು. ಸಭೆಯಲ್ಲೇ ಮತ್ತೊಬ್ಬ ಆಕ್ಷಾಂಕ್ಷಿಯಾದ ಹನುಮತಂಪ್ಪ ಹಾಗೂ ಸಂತೋಷ್ ‘ನಾವೇ ಉತ್ತಮ ಕೆಲಸ ಮಾಡಿ ಜಾಸ್ತಿ ಜನರನ್ನು ಸೇರಿಸಿದ್ದೇವೆ’ ಎಂದು ಹೇಳಿದಾಗ ಈ ಎರಡು ತಂಡಗಳ ನಡುವೆ ವಾಗ್ವಾದವಾಯಿತು. ಸ್ಥಳೀಯ ಸಬ್ ಇನ್‌ಸ್ಪೆಕ್ಟರ್ ಸ್ಥಳಕ್ಕೆ ಹೋಗುವುದನ್ನು ಅರಿತು ಸಭೆ ತಿಳಿಗೊಂಡಿತು. ಕಾಂಗ್ರೆಸ್ ಅಭ್ಯರ್ಥಿ ಎರಡು ತಂಡಗಳಿಗೂ ಬುದ್ಧಿವಾದ ಹೇಳಿ ಕಳುಹಿಸಿದರು.
ಇದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದುರ್ಗಾಂಬ ದೇವಸ್ಥಾನದ ಬಳಿಯ ಶಿವಾಜಿ ಸರ್ಕಲ್ ಬಳಿ ಕುಳಿತಿದ್ದ ಸಂತೋಷ್ ಬಳಿ ರಮೇಶ್ ಎಂಬಾತ ಎಂದು ‘ನಿನು ದೊಡ್ಡವರ ಮುಂದೆಯೇ ಹಿಂಗೆಲ್ಲಾ ಮಾಡಿದ್ದೀಯಾ’ ಎಂದು ಧಮಕಿ ಹಾಕಿ ಚಾಕುವಿನಿಂದ ಬೆದರಿಸಿದ್ದಾನೆ.
‘ಈ ವಿಚಾರ ಕುರಿತು ದೂರು ದಾಖಲಿಸುವಂತೆ ಗಾಂಧಿನಗರ ಠಾಣೆಯ ಎಸ್‌ಐಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದರು.
