ಓದಿದ ಶಾಲೆಗೆ ಶೈಕ್ಷಣಿಕ ಉಪಕರಣಗಳ ಕೊಡುಗೆ : ಮಾದರಿಯಾದ ಸುರೇಶ್ ಬಾಬು
ದಾವಣಗೆರೆ: ವಿದ್ಯೆ ಕಲಿತ ಶಾಲೆಯನ್ನಾಗಲೀ, ಜ್ಞಾನ ಧಾರೆ ಎರೆದ ಗುರುವನ್ನಾಲೀ ಎಂದಿಗೂ ಮರೆಯದೇ ಉನ್ನತ ಸ್ಥಾನ ಕಂಡರೂ ಶಾಲೆಗೆ ತಮ್ಮದೇ ಕೊಡುಗೆ ನೀಡುವವರು ವಿರಳ.
ಆದರೆ, ಕುಂದಾಪುರದ ಮೆಸ್ಕಾಂ ಸಹಾಯಕ ಇಂಜಿನಿಯರ್ ಆಗಿರುವ ಸುರೇಶ್ ಬಾಬು ಅವರು ತಾವು ವಿದ್ಯೆ ಕಲಿತ ಹೊಸ ಕುಂದುವಾಡದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ತಮ್ಮ ಅಚ್ಚು ಮೆಚ್ಚಿನ ಅಜ್ಜಿ ಹನುಮಕ್ಕ ಅವರ ಸ್ವರ್ಣಾರ್ಥವಾಗಿ ನಾವು-ನೀವು ಕಾರ್ಯಕ್ರಮದಡಿ 19 ಸಾವಿರ ರೂ. ಮೌಲ್ಯದ 5 ಟೇಬಲ್ ಗಳು ಮತ್ತು 35 ನಲಿ-ಕಲಿಗೆ ಚೇರುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅಲ್ಲದೇ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ್ ಬಾಬು, ಮಕ್ಕಳು ಉತ್ತಮ ಅಭ್ಯಾಸದ ಕಡೆಗೆ ಗಮನಹರಿಸಿ ಊರಿಗೆ, ಶಾಲೆಗೆ, ಪೋಷಕರಿಗೆ, ಶಿಕ್ಷಕರಿಗೆ ಒಳ್ಳೆಯ ಹೆಸರು ಕೀರ್ತಿಯನ್ನು ತನ್ನಿ. ನಮ್ಮ ಊರಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ ಸರ್ಕಾರಿ ನೌಕರಿ ಹಾಗೂ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು ಇದ್ದಾರೆ. ಖಾಸಗಿ ಶಾಲೆಯಲ್ಲಿ ಓದಿದವರು ಬೆರಳೆಣಿಕೆಯಷ್ಟು ಜನರು ಮಾತ್ರ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ ಹಾಗಾಗಿ ಸರ್ಕಾರಿ ಶಾಲೆ ಎಂಬ ತತ್ಸರ ಮನೋಭಾವನೆಯನ್ನು ಕಿತ್ತು ಹಾಕಿ ಎಂದು ತಿಳಿಸಿದರು.ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ ಉನ್ನತ ಸ್ಥಾನವನ್ನು ಪಡೆಯಬಹುದೆಂದು ಮನೋಭಾವನೆಯನ್ನು ಬೆಳೆಸಿಕೊಳ್ಳಿ.
ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಅವರು ಹೇಳುವಂತಹ ಪಾಠ ಪ್ರವಚನಗಳನ್ನು ಸರಿಯಾಗಿ ಆಲಿಸಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮುಂದಿನ ದಿನಗಳಲ್ಲಿ ನಮ್ಮ ಸಂಘಟಿತ ಗೆಳೆಯರ ಬಳಗದಿಂದ ಶಾಲೆ ಮಕ್ಕಳಿಗೆ ಕುಂದು ಕೊರತೆಗಳು ಇದ್ದಂತಹ ಸಂದರ್ಭದಲ್ಲಿ ಅವುಗಳನ್ನು ಬಗೆಹರಿಸುವುದಕ್ಕಾಗಿ ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಕೆ ಸಿದ್ದಪ್ಪ, ಶಿಕ್ಷಕರಾದ ಮೋಹನ್ ಕುಮಾರ್, ಮಲ್ಲಿಕಾರ್ಜುನಪ್ಪ, ಚಂದ್ರಾಕ್ಷಿ, ಲತಾ, ನಿಂಗಮ್ಮ, ಮಂಜುಳಾ ಪಾಟೀಲ್, ಸವಿತಾ ಬಾನು,ಹಾಗೂ ಗ್ರಾಮಸ್ಥರಾದ ಸೋಮಶೇಖರ್, ಪತ್ರಕರ್ತರಾದ ಅಣ್ಣಪ್ಪ ಬಿ. ಕುಂದುವಾಡ, ರಾಘವೇಂದ್ರ ಇದ್ದರು.