ದಾವಣಗೆರೆ: ಮದ್ಯ ಸೇವಿಸಿದವರಿಗೆ ಮತಗಟ್ಟೆ ಪ್ರವೇಶ ದ್ವಾರದಲ್ಲಿಯೇ ಪ್ರವೇಶ ನಿಷೇಧಿಸುವ ಕಾನೂನನ್ನು ರೂಪಿಸಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಿಂದಲೇ ಜಾರಿಗೊಳಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್ ಒತ್ತಾಯಿಸಿದ್ದಾರೆ.
ವಾಹನ ಸವಾರರ ಮತ್ತು ಸುತ್ತ ಮುತ್ತಲಿನವರ ಸುರಕ್ಷತೆಯ ದೃಷ್ಠಿಯಿಂದ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಅಪರಾಧ ಎಂಬ ಕಾನೂನನ್ನು ಜಾರಿ ಮಾಡಲಾಗಿದೆ. ಆದರೆ, ಕೆಲವರು ಮದ್ಯ ಸೇವಿಸಿಯೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದು, ವಾಹನ ಸವಾರನೊಬ್ಬ ಪ್ರಜ್ಞೆಯಿಂದ ಇರುವುದು ಎಷ್ಟು ಮುಖ್ಯವೋ, ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಮತದಾರ ಮತದಾನ ಸಂದರ್ಭದಲ್ಲಿ ಗುರುತಿಸುವ ಮಟ್ಟಿಗಾದರೂ ಪ್ರಜ್ಞೆಯಲ್ಲಿರುವುದು ಅಷ್ಟೇ ಮುಖ್ಯ ಎಂದು ಅಭಿಪ್ರಾಯಿಸಿ ಅವರು ಜಿಲ್ಲಾಧಿಕಾರಿ ಮುಖಾಂತರ ಭಾರತದ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮತಗಟ್ಟೆಯ ಪ್ರವೇಶ ದ್ವಾರ ಬಳಿ ಮತದಾರ ಮಧ್ಯ ಸೇವಿಸಿದ್ದಾನೆಯೋ ಇಲ್ಲವೋ ಎಂದು ಪರೀಕ್ಷಿಸಿ ಮಧ್ಯ ಸೇವಿಸಿದ್ದಲ್ಲಿ ಮತಗಟ್ಟೆಯ ಪ್ರವೇಶವನ್ನು ನಿಷೇಧಿಸುವುದು ಕೂಡಾ ಅಗತ್ಯ ಎನ್ನಿಸುತ್ತದೆ. ಒಂದು ವೇಳೆ ಈ ಪದ್ಧತಿ ಅಳವಡಿಸಿದರೆ, ಮತದಾನದ ಸಂಖ್ಯೆಯ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಚರ್ಚೆಯು ಜರಗಬಹುದು. ಮತದಾನ ಎಷ್ಟು ಮುಖ್ಯವೋ ಪ್ರಜ್ಞಾಪೂರ್ವಕ ಮತದಾನ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ.
