ಕಾಂಬೋಡಿಯಾದಲ್ಲಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿರುವ ತೀರ್ಥಹಳ್ಳಿಯ ಇಂಜಿನಿಯರ್; ಬಿಡುಗಡೆಗೆ ಅರಗ ಕಸರತ್ತು

ಕಾಂಬೋಡಿಯಾದಲ್ಲಿ ಅಕ್ರಮ ನೇಮಕಾತಿ ಜಾಲ

ಬೆಂಗಳೂರು: ವಿದೇಶದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿ ಸಾಫ್ಟ್ವೇರ್ ಎಂಜಿನಿಯರ್ ಬಿಡುಗಡೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೇಂದ್ರದ ಜತೆ ಪ್ರಯತ್ನ ನಡೆಸಿದ್ದಾರೆ.
ಕಾಂಬೋಡಿಯ ದೇಶದಲ್ಲಿ ವಿದೇಶಿ ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಅಪಾಯದಲ್ಲಿರುವ ತೀರ್ಥಹಳ್ಳಿ ಪಟ್ಟಣದ ಸಾಫ್ಟ್ವೇರ್ ಇಂಜಿನಿಯರ್ ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರರವರು ಕೇಂದ್ರದ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿದ್ದಾರೆ.


ಥೈಲ್ಯಾಂಡ್ ದೇಶದಲ್ಲಿ ಹೆಚ್ಚಿನ ಸಂಬಳ ದೊರಕಿಸಿಕೊಡುವ ಆಮಿಷ ಒಡ್ಡಿದ ನೇಮಕಾತಿ ಏಜೆನ್ಸಿಯಿಂದ ಮೋಸಹೋಗಿ ಕಾಂಬೋಡಿಯಾ ದೇಶದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿರುವ ತೀರ್ಥಹಳ್ಳಿ ನಿವಾಸಿಯ ಬಿಡುಗಡೆ ಬಗ್ಗೆ ಸತತ ಪ್ರಯತ್ನ ನಡೆಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರ್ ಅವರ ಕಚೇರಿ ಜತೆ ಸಂಪರ್ಕಿಸಿ, ಬಿಡುಗಡೆ ಕುರಿತು ಮನವಿ ಮಾಡಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ, ಟೆಕ್ಕಿಯ ಸುರಕ್ಷಾ ಹಿಂದಿರುಗುವಿಕೆ ಬಗ್ಗೆ ಸಚಿವರು ಚರ್ಚಿಸಿದ್ದು, ತಮ್ಮ ಎಲ್ಲಾ ಕೈಲಾದ ಪ್ರಯತ್ನ ಮಾಡಲಾಗುತ್ತಿದ್ದು, ಪೋಷಕರು ಧೈರ್ಯ ಗುಂದಬಾರದು ಎಂದು ಸಾಂತ್ವನ ಹೇಳಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ಕಿರಣ್ ಶೆಟ್ಟಿಯವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ ಅವರ ಸಹೋದರ ಪವನ್ ಶೆಟ್ಟಿಯವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದರು. ಕಿರಣ್ ಶೆಟ್ಟಿಯವರಿಗೆ ನಾಲ್ಕು ತಿಂಗಳ ಮಗು ಹಾಗೂ ಪತ್ನಿಯಿದ್ದು ತೀರ್ಥಹಳ್ಳಿಯಲ್ಲಿ ಆತಂಕದಿಂದ ಪತಿಯ ಮರಳಿಕೆ ಬಗ್ಗೆ ಚಿಂತೆಗೊಳಗಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!