ಬಿಜೆಪಿಗೆ ಗುಜರಾತ್ ಮಾದರಿ, ಕಾಂಗ್ರೆಸ್‌ಗೆ ‘ಕರ್ನಾಟಕವೇ ಮಾದರಿ’; ಡಿಕೆಶಿ

ಬಾಗಲಕೋಟೆ: ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಗುಜರಾತ್ ಮಾದರಿ, ಕಾಂಗ್ರೆಸ್‌ಗೆ ‘ಕರ್ನಾಟಕವೇ ಮಾದರಿ’ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ  ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಚುನಾವಣಾ ತಯಾರಿ ಬಗ್ಗೆ ಮಾಹಿತಿ ಹಂಚಿಕೊಂಡರು. ರಾಜ್ಯದ ಜನರ ಅಭಿಪ್ರಾಯ ಪಡೆದು, ಅವರ ನೋವು, ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ. ನಂತರ ನಾನು ಹಾಗೂ ಸಿದ್ಧರಾಮಯ್ಯನವರು ಎರಡು ತಂಡಗಳಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳ ವಿಧಾನಸಭಾ ಕ್ಷೇತ್ರ ಭಾಗಗಳಲ್ಲಿ ಪ್ರವಾಸ ಮಾಡಲಾಗುವುದು ಎಂದರು.

ಮಹದಾಯಿ, ಕೃಷ್ಣಾ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ, ಮಹಿಳೆಯರ ಸಮಾವೇಶವನ್ನು ಮಾಡಿದ್ದೇವೆ. ಬೆಲೆ ಏರಿಕೆಯಿಂದ ರಾಜ್ಯದ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಲು ಅವರಿಂದಲೇ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, 9 ಸಾವಿರಕ್ಕೂ ಹೆಚ್ಚು ಮಹಿಳೆಯರು ತಮ್ಮ ಸಲಹೆ ನೀಡಿದ್ದರು. ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಹಿಳೆಯರು ಅನುಭವಿಸುತ್ತಿರುವ ನೋವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡಿದ್ದೇವೆ. ಅಮೂಲಕ ಮನೆಯ ಜವಾಬ್ದಾರಿ ವಹಿಸಿಕೊಂಡಿರುವ ಮಹಿಳೆಯಗೆ ವಾರ್ಷಿಕವಾಗಿ 24 ಸಾವಿರ ನೀಡಲು ಪಕ್ಷ ಕಾರ್ಯಕ್ರಮ ನೀಡಿದೆ. ಇದು ಕಾಂಗ್ರೆಸ್ ಪಕ್ಷದ ಎರಡನೇ ಗ್ಯಾರಂಟಿ ಯೋಜನೆಯಾಗಿದೆ. ಇನ್ನು ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ ನೀಡುವ ಗ್ರಹಜ್ಯೋತಿ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ಕುಟುಂಬ ಪ್ರತಿ ವರ್ಷ 18 ಸಾವಿರ ರೂ. ಉಳಿತಾಯ ಮಾಡಬಹುದಾಗಿದೆ ಎಂದವರು ತಿಳಿಸಿದರು.

ಈ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ, ಜನರ ಆದಾಯ ಡಬಲ್ ಮಾಡಲು ಆಗಲಿಲ್ಲ ಹೀಗಾಗಿ ಈ ಸಮಸ್ಯೆಗಳು ಉದ್ಭವಿಸಿದ್ದು, ಇವುಗಳಿಗೆ ಪರಿಹಾರ ನೀಡಲು ಈ ಯೋಜನೆಗಳನ್ನು ಘೋಷಿಸಲಾಗಿದೆ. ನಾವು ಈ ಹಿಂದೆ ಕೊಟ್ಟ ಮಾತಿನಂತೆ ನಡೆದಿದ್ದೇವೆ. ಈಗಲೂ ಅದೇ ರೀತಿ ಕೊಟ್ಟ ಮಾತಿನಂತೆ ನಡೆಯುತ್ತೇವೆ. ಈ ಯೋಜನೆಗಳ ಜಾರಿ ಬಗ್ಗೆ ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ನಾನು ಅಧಿಕಾರದಿಂದ ಇಳಿಯುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ 21 ಸಾವಿರ ಮೆ.ವ್ಯಾ ಗೆ ಏರಿಕೆ ಮಾಡಲಾಗಿತ್ತು ಎಂದ ಡಿಕೆಶಿ, ಮಾಧ್ಯಮಗಳು ವೇದಿಕ ಸಿದ್ಧ ಮಾಡಿದರೆ ಅಶೋಕ್‌ ಅವರ ಜತೆಗಾಗಲಿ, ಇಂದನ ಸಚಿವ ಸುನೀಲ್‌ ಕುಮಾರ್ ಅವರ ಜತೆಗಾಗಲಿ ಈ ಯೋಜನೆ ಹೇಗೆ ಜಾರಿ ಮಾಡಲಾಗುವುದು, ಎಲ್ಲಿ ಹಣ ಉಳಿತಾಯ ಮಾಡಿ, ಸಂಪನ್ಮೂಲ ಕ್ರೂಡೀಕರಣಗೊಳಿಸಿ ಸರ್ಕಾರಕ್ಕೆ ಹೊರೆಯಾಗದ ರೀತಿ ಈ ಯೋಜನೆ ಜಾರಿ ಮಾಡಬಹುದು ಎಂಬುದರ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದರು.

ಇದೇ ವೇಳೆ, ಪಕ್ಷದ ಟಿಕೆಟ್ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ‘2ರಂದು ರಾಜ್ಯ ಚುನಾವಣಾ ಸಮಿತಿ ಬೆಂಗಳೂರಿನಲ್ಲಿ ಸಭೆ ನಡೆಸಲಿದೆ. ಅದಕ್ಕೂ ಮುನ್ನ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಿ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಸಿ ನೀಡಲು ತಿಳಿಸಿದ್ದೇವೆ’ ಎಂದವರು ತಿಳಿಸಿದರು.

ಗುಜರಾತ್ ಮಾದರಿ ಅನ್ವಯವಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಬಿಜೆಪಿಯವರು ಗುಜರಾತ್ ಮಾದರಿ ಮಾಡಬಹುದು. ನಾವು ಕರ್ನಾಟಕ ಮಾದರಿಯನ್ನೇ ಅನುಸರಿಸುತ್ತೇವೆ, ನಮಗೆ ನಮ್ಮ ಮಾದರಿಯೇ ಸಾಕು’ ಎಂದು ಹೇಳಿದರು.

ನಿಮ್ಮ ಪಕ್ಷದಲ್ಲಿ ಯಾರಿಗಾದರೂ 2 ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶವಿದೆಯೇ ಎಂದು ಕೇಳಿದಾಗ, ‘ಸಿದ್ದರಾಮಯ್ಯನವರು ಇತ್ತೀಚೆಗೆ ಬಹಿರಂಗವಾಗಿ ಒಂದು ಕಡೆ ಸ್ಪರ್ಧಿಸುವುದಾಗಿ ಹೇಳಿದ್ದು, ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ರಾಜ್ಯ ಪ್ರವಾಸ ಮಾಡುತ್ತಿರುವ ಬಗ್ಗೆ ಹೇಳಿದಾಗ, ‘ಅಮಿತ್ ಶಾ ಅವರು ಬಹಿರಂಗವಾಗಿ ಈಗಾಗಲೆ ಹೇಳಿದ್ದಾರೆ. ಅವರು ಮುಂಬರುವ ಚುನಾವಣೆಯನ್ನು ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎದುರಿಸುವುದಿಲ್ಲ. ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅವರ ಹೇಳಿಕೆ ಸ್ಪಷ್ಟಪಡಿಸುತ್ತಿದೆ. ರಾಜ್ಯ ನಡೆಸುತ್ತಿರುವ ಬೊಮ್ಮಾಯಿ ಅವರು ವಿಫಲರಾಗಿರುವುದಕ್ಕೆ ಅವರು ಪ್ರಧಾನಿಗಳ ಹೆಸರನ್ನು ಹೇಳುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರವನ್ನು ಅವರಿಂದ ನಡೆಸಲು ಆಗಿಲ್ಲ. ಈಗ ಅವರು ಮುಖ್ಯಮಂತ್ರಿ ಬಿಟ್ಟು ರಾಷ್ಟ್ರ ನಾಯಕರನ್ನು ಮುಂದೆ ಬಿಡುತ್ತಿದ್ದಾರೆ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!