Hunasodu blast : ಹುಣಸೋಡು ಬ್ಲಾಸ್ಟ್ ನಲ್ಲಿ ನಾಪತ್ತೆಯಾದ, ಆ ಮೂವರ ಬಗ್ಗೆ ಕುಟುಂಬಸ್ಥರಿಗೆ ಸಿಕ್ಕ ಮಾಹಿತಿ ಎಷ್ಟು?

Shivamogga : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೈಗೆ ಕೆಲಸವಿಲ್ಲದೆ ಪರ್ಯಾಯ ಕೆಲಸ ಹುಡಿಕಿಕೊಂಡು ಬಂದಿದ್ದ ಮೂವರು ಯುವಕರು ಇಂದಿಗೂ ಸಹ ಎಲ್ಲಿದ್ದಾರೆ ಎಂದು ಯಾರಿಗೂ ಗೊತ್ತಾಗಿಲ್ಲ. ಶಿವಮೊಗ್ಗ ಸೇರಿ ನಾಲ್ಕೈದು ಜಿಲ್ಲೆಗಳಲ್ಲಿ ಭೂಮಿಯನ್ನ ನಡುಗಿಸಿದ್ದ ಹುಣಸೋಡು ಸ್ಪೋಟದಲ್ಲಿ ಅವರು ಕಾಣೆಯಾದರಾ? ಅಥವಾ ಬದುಕಿದ್ದಾರಾ ? ಈ ಪ್ರಶ್ನೆಗಳಿಗೆ ಪೊಲೀಸರು ನೀಡಬೇಕಿದೆ ತಾರ್ಕಿಕ ಅಂತ್ಯ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮಧ್ಯಮವರ್ಗದ ಕುಟುಂಬಗಳ ಪರಿಸ್ಥಿತಿ ತೀರಾ ಹದಗಟ್ಟಿತ್ತು . ಹಾಗಾಗಿ ಸಿಕ್ಕ ದುಡಿಮೆಯನ್ನೆಲ್ಲಾ ಆಶ್ರಯಿಸೋದು ಅನಿವಾರ್ಯವೆ ಆಗಿತ್ತು . ಹಾಗಾಗಿ ಭದ್ರಾವತಿ ಅಂತರಗಂಗೆಯ ಕೆ.ಹೆಚ್ ಕಾಲೊನಿಯ ಯುವಕರು ಯಾವುದೇ ಕೆಲಸ ಸಿಕ್ಕರೂ ಹೋಗುತ್ತಿದ್ದರು. ಅದೇ ರೀತಿ ಆಟೋ ಚಾಲನೆ ಮಾಡುತ್ತಿದ್ದ ಶಶಿ, ಟಾಟಾ ಏಸ್ ಓಡಿಸುತ್ತಿದ್ದ ಪುನೀತ್ ಹಾಗು ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್ ದುಡಿಮೆಗಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಆದರೆ ಮುಂದಾದದ್ದೆ ಬೇರೆ . ಅವರ ಬದುಕೆ ನಾಶವಾದಂತಾಯಿತು.
ಕ್ವಾರಿಗಳಿಗೆ ಸ್ಫೋಟಕಗಳನ್ನು ಸರಬರಾಜು ಮಾಡುತ್ತಿದ್ದ ಪ್ರವೀಣ್ ಎಂಬ ವ್ಯಕ್ತಿ ಪುನೀತ್ , ನಾಗರಾಜ್ ಹಾಗೂ ಶಶಿಯನ್ನು ತನ್ನ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ. ಆ ಕೆಲಸದ ಯಾವುದೆ ಸಣ್ಣ ಜ್ಞಾನವಿಲ್ಲದ ಯುವಕರು ಸ್ಫೋಟಕಗಳನ್ನು ಕೈಯಲ್ಲಿಡಿದು ಸಾಗಿಸಲು ರೆಡಿಯಾಗಿದ್ದರು. ವಾರದಲ್ಲಿ ಒಂದು ದಿನ ಕೆಲಸ ಮಾಡಿದರೆ , ಕೈತುಂಬಾ ಹಣ ಸಿಗುತ್ತೆ ಎಂಬ ಆಸೆಯಿಂದ ಬೊಲೊರೋ ವಾಹನಗಳಲ್ಲಿ ಸ್ಪೋಟಕ ತುಂಬಿಕೊಂಡು ನಿಗದಿತ ಕ್ವಾರಿಗಳಿಗೆ ತಲುಪಿಸುತ್ತಿದ್ದರು.
21-01-2021 ರ ಜನವರಿ ರಾತ್ರಿ 10.20 ಕ್ಕೆ ಹುಣಸೋಡಿನಲ್ಲಿ ಕ್ವಾರಿಗೆ ಸಾಗಿಸಬೇಕಿದ್ದ ಸ್ಫೋಟಕ ಸಿಡಿದಿತ್ತು. ಎಷ್ಟರಮಟ್ಟಿಗೆ ಎಂದರೇ, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭೂಕಂಪನದ ಶಬ್ಧ ಕೇಳಿಸಿತ್ತು. ಏನಾಯ್ತು ಎಂದು ನೋಡುವಷ್ಟರಲ್ಲಿ ಅಂದು ಇಡೀ ದೇಶ ಅಚ್ಚರಿಯಿಂದ ಶಿವಮೊಗ್ಗದ ಕಡೆಗೆ ನೋಡುತ್ತಿತ್ತು. ಅವತ್ತು ಸಂಭವಿಸಿದ ಹುಣಸೋಡು ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು.
ಆ ಘಟನೆಯಲ್ಲಿ ಎಸ್.ಎಸ್ ಕ್ರಷರ್ ಕ್ವಾರಿ ಬಳಿ ಕ್ಯಾಂಟರ್ ಲಾರಿಯಿಂದ ಬೊಲೊರೊ ವಾಹನಕ್ಕೆ ಸ್ಪೋಟಕವನ್ನು ಶಿಫ್ಟ್ ಮಾಡುತ್ತಿದ್ದಾಗ ಅಲ್ಲಿ ದೊಡ್ಡ ಸ್ಫೋಟ ಸಂಭವಿಸಿತ್ತು ಎನ್ನುತ್ತಾರೆ. ಅದರ ಬಗ್ಗೆ ಹೀಗೆ ಆಯ್ತು ಅಂತಾ ಸಾಕ್ಷಿ ಹೇಳೋದಕ್ಕೆ ಅಲ್ಲಿ ಯಾರು ಉಳಿದಿರಲಿಲ್ಲ. ಆದರೆ ಈ ಘಟನೆಯಲ್ಲಿ ಶಶಿ ಪುನೀತ್, ನಾಗರಾಜ್ ಸಹ ಇದ್ದರು ಎಂದು ಅವರ ಕುಟುಂಬಸ್ಥರು ಹೇಳುತ್ತಾರೆ. ಈ ಪೈಕಿ ಪೊಲೀಸ್ ವರದಿಯಲ್ಲಿ ಡಿ ಎನ್ಎ ವರದಿ ಆಧಾರವಾಗಿಟ್ಟುಕೊಂಡು ಶಶಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಂತೆ.
ಆದರೆ ಪೊಲೀಸರ ಚಾರ್ಚ್ಶೀಟ್ ನಲ್ಲಿ ಎಲ್ಲೂ ಪುನೀತ್ ಹಾಗೂ ನಾಗರಾಜ್ ಹೆಸರು ಉಲ್ಲೇಖವಾಗಿಲ್ಲ ಎನ್ನಲಾಗಿದೆ. ಘಟನೆ ದಿನ ಶಶಿ ಪುನೀತ್ ನಾಗರಾಜ್ ರನ್ನು ಪ್ರವೀಣ್ ಎಂಬಾತನೇ ಕರೆದೊಯ್ದಿದ್ದ. ಸ್ಪೋಟ 10.20 ಕ್ಕೆ ಸಂಭವಿಸಿದ ನಂತರ ಶಶಿ ತನ್ನ ತಂದೆ ಹಾಗು ಪತ್ನಿಯ ಜೊತೆ ಮಾತನಾಡಿರುವುದಾಗಿ ಕುಟುಂಬಸ್ಥರು ಹೇಳುತ್ತಾರೆ.
ಅಂದು ನಾಗರಾಜ್, ಶಶಿ , ಪುನೀತ್ ಸ್ಟೋಟಕ ಸರಬರಾಜು ಮಾಡಲು ಹೋಗಿದ್ದು ನಿಜ..ಆದರೆ ಅವರಲ್ಲಿ ಶಶಿ ಹೊರತು ಪಡಿಸಿ ನಾಗರಾಜ್ ಪುನೀತ್ ಎಲ್ಲಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲದಂತಾಗಿದೆ. ನಮ್ಮ ಮಕ್ಕಳನ್ನು ಹುಡುಕಿ ಕೊಡಿ ಎಂದು ನೊಂದ ಕುಟುಂಬಗಳು ಪೊಲೀಸ್ ಇಲಾಖೆಯ ಬಳಿ ಅಳಲು ತೋಡಿಕೊಂಡಿವೆ.
ಶಶಿ ಸಾವನ್ನಪ್ಪಿದ್ದರೆ. ಈ ಹಿಂದೆ ಸಾವನ್ನಪ್ಪಿದ ಕಾರ್ಮಿಕರಿಗೆ ಸರ್ಕಾರ ಮಾನವೀಯತೆ ದೃಷ್ಟಿಯಲ್ಲಿ ನೀಡಿದ ಪರಿಹಾರವನ್ನು ನಮಗೆ ನೀಡಲಿ. ಎಂದು ಶಶಿ ಕುಟುಂಬಸ್ಧರು ಹೇಳುತ್ತಾರೆ. ಇಲ್ಲವಾದರೆ ನಮ್ಮ ಮಕ್ಕಳನ್ನು ಹುಡುಕಿಕೊಡಲಿ. ಮಕ್ಕಳು ಸತ್ತಿದ್ದಾರೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನಿಮ್ಮ ಮಕ್ಕಳು ಬದುಕಿದ್ದಾರೆ ಎಂದು ಹೇಳುತ್ತಾರೆ. ನಾವು ಯಾವುದನ್ನು ನಂಬಬೇಕು ಎಂಬ ಗೊಂದಲದಲ್ಲೆ ಬದುಕು ಜೀಕುವಂತಾಗಿದೆ ಎಂದು ಷೋಷಕರು ಹೇಳುತ್ತಾರೆ. ಪುನೀತ್ ನಾಗರಾಜ್ ಕಣ್ಮರೆ ಘಟನೆಗೆ ಪೊಲೀಸರೇ ತಾರ್ಕಿಕ ಅಂತ್ಯ ಹಾಡಬೇಕಿದೆ. ಹೀಗಾಗಿ ಪೊಲೀಸ್ ಇಲಾಖೆ ಈ ಗೊಂದಲವನ್ನು ಇತ್ಯರ್ಥ ಮಾಡಬೇಕಿದೆ.
ಕ್ರೈಂ ಪ್ರಕರಣಗಳಲ್ಲಿ, ಸ್ಫೋಟದಂತಹ ಘಟನೆಯಲ್ಲಿ ಸ್ಪೋಟದ ತೀವ್ರತೆಗೆ ವ್ಯಕ್ತಿಯು ಲವಶೇಷವೂ ಸಿಗದಂತಹ ಸಂದರ್ಭಗಳಿವೆ. ಅಂತಹ ಸನ್ನಿವೇಶದಲ್ಲಿ ವ್ಯಕ್ತಿಯು ಮಾಯವಾದ ಎಂದು ಪೊಲೀಸ್ ಇಲಾಖೆ ಉಲ್ಲೇಖಿಸುತ್ತದೆ. ಆದರೆ ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಯಾವುದೇ ರೀತಿಯ ಪದ ನಮೂದಿಸಿಲ್ಲ. ಹಾಗಾದರೆ, ಈ ಮೂವರು ಎಲ್ಲಿದ್ದಾರೆ? ಬದುಕಿದ್ಧಾರಾ? ಸತ್ತಿದ್ದಾರಾ? ಉತ್ತರ ವನ್ನು ಪೊಲೀಸ್ ಇಲಾಖೆಯೇ ಕೊಡಬೇಕಾಗಿದೆ.
ಕೃಪೆ : ಮಲೆನಾಡು ಟುಡೆ.