ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ, ಟ್ರಾಫಿಕ್ ಪೊಲೀಸರಿಗೆ ಹಬೆ ಯಂತ್ರ ವಿತರಣೆ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶನಿವಾರ ಹೈಸ್ಕೂಲ್ ಮೈದಾನ ಬಳಿಯಿರುವ ಬಡಾವಣೆ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಪೊಲೀಸರಿಗೆ ಹಬೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಕೋವಿಡ್ ಸೋಂಕಿನ ವಿರುದ್ಧ ಹೊರಾಡಲು ಯೋಗ ಒಂದು ಪ್ರಮುಖ ಅಸ್ತ್ರವಾಗಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವೈದ್ಯಕೀಯ ಇಲಾಖೆಯವರು ಕೊಡುವ ಮೆಡಿಸಿನ್ ಜತೆಗೆ, ಆಯುಷ್ ಇಲಾಖೆಯ ಕೆಲವು ಔಷಧಗಳು ಹಾಗೂ ಯೋಗಾಸನ ತುಂಬಾ ಉಪಯುಕ್ತವಾಗುತ್ತದೆ ಎಂದರು.

ಕೋವಿಡ್ ಸೋಂಕಿಗೆ ತುತ್ತಾದವರು ಧೃತಿಗೆಡದೆ ಆತ್ಮಸ್ಥೈರ್ಯ ಬೆಳೆಸಿಕೊಂಡು, ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿತ್ಯ ಯೋಗಾಸನ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯೋಗಾಸನ ಮಾಡುವುದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಾವು ಬಲಶಾಲಿಗಳಾತ್ತೇವೆ. ನಿತ್ಯ ಯೋಗ ಮಾಡುವುದರಿಂದ ರೋಗ-ರುಜಿನಗಳೊಂದಿಗೆ ಎಂತಹ ಸೋಂಕುಗಳನ್ನು ಕೂಡ ತಡೆಗಟ್ಟುವ ಸಾಮರ್ಥ್ಯ ಬೆಳೆಯುತ್ತದೆ. ಹೀಗಾಗಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ, ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಟ್ರಾಫಿಕ್ ಪೊಲೀಸರಿಗೆ ಅತ್ಯವಶ್ಯಕವಾಗಿರುವ ಹಬೆ ಯಂತ್ರ ಕಿಟ್ ನೀಡಿರುವುದು ಅಭಿನಂದನಾರ್ಹ ಎಂದರು.

ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಅವರು ಟ್ರಾಫಿಕ್ ಪೊಲೀಸರಿಗೆ ಹಬೆ ಯಂತ್ರ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಇದೀಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಪೊಲೀಸರು ಮಳೆಯಲ್ಲಿ ನಿಂತು ತಮ್ಮ ಕರ್ತವ್ಯ ನಿಭಾಯಿಸಬೇಕಾದ ಪರಿಸ್ಥಿತಿ ಇದೆ. ಟ್ರಾಫಿಕ್ ಪೊಲೀಸರಿಗೆ ಜಾಕೆಟ್ ವಿತರಣೆ ಮಾಡಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕಿಯಿಸಿದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆ ಉದ್ಯಮಿ ಬಿ.ಸಿ.ಉಮಾಪತಿ ಅವರು ಪೊಲೀಸರಿಗೆ ಉಪಯುಕ್ತವಾಗುವ ಜಾಕೆಟ್ ಖರೀದಿಗಾಗಿ ಒಂದು ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದಾವಣಗರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಬಡಾವಣೆ ಪೊಲೀಸ್ ಸಿಬ್ಬಂದಿಗಳು, ಟ್ರಾಫೀಕ್ ಪೋಲಿಸರು ಹಾಗೂ ಆಯುಷ್ ಇಲಾಖೆ ಮತ್ತು ಯೋಗ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!