ಹೊಸ ಶಿಕ್ಷಣ ನೀತಿಯಲ್ಲಿ ಸೂಕ್ತ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ – ಕೆ.ರಾಘವೇಂದ್ರ ನಾಯರಿ

ದಾವಣಗೆರೆ: ನೂತನ ಶಿಕ್ಷಣ ‌ನೀತಿಯಲ್ಲಿ ಕನ್ನಡ ಭಾಷೆಯ ಅವಗಣನೆ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಕನ್ನಡಪರ ಸಂಘಟಕ ಕೆ‌.ರಾಘವೇಂದ್ರ ನಾಯರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೂತನ ಶಿಕ್ಷಣ ನೀತಿಯ ಭಾಗವಾಗಿ ‌ರಾಜ್ಯ ಸರಕಾರವು ಮೂರು ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯನ್ನು ನಾಲ್ಕು ವರ್ಷಕ್ಕೆ ವಿಸ್ತರಣೆ ಮಾಡಿದೆ. ಇದು ಸ್ವಾಗತಾರ್ಹ ಹೌದಾದರೂ ಇಲ್ಲಿ ಗಮನಿಸಬೇಕಾದ ಆತಂಕದ ವಿಷಯವೆಂದರೆ ಈ ಮೊದಲು ಇದ್ದಂತಹ ಮೂರು ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಎರಡು ವರ್ಷ ಕಡ್ಡಾಯವಾಗಿ ಭಾಷಾ ಕಲಿಕೆಯ ನಿಬಂಧನೆಯಿತ್ತು.

ಆದರೆ, ಈ ಹೊಸ ವ್ಯವಸ್ಥೆಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಒಂದು ವರ್ಷ ಮಾತ್ರ ಭಾಷಾ ಕಲಿಕೆಗೆ ಅವಕಾಶವಿದೆ. ಈ ರೀತಿಯಾಗಿ ಭಾಷಾ ಕಲಿಕೆಯನ್ನು ಮೊಟಕುಗೊಳಿಸಿರುವುದು ಸರ್ವಥಾ ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಇದೇ ಜೂ. 17 ರಂದು ಈಗಾಗಲೇ ತನ್ನ ಆಕ್ಷೇಪಣೆಯನ್ನು ಸರಕಾರಕ್ಕೆ ಸಲ್ಲಿಸಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ಕನ್ನಡ ಭಾಷೆಗೆ ಅತ್ಯಂತ ಭವ್ಯವಾದ ಮತ್ತು ಶ್ರೀಮಂತವಾದ ಪರಂಪರೆಯಿದೆ, ಇತಿಹಾಸವಿದೆ. ಅತ್ಯಂತ ಆಳವಾಗಿ ಕನ್ನಡ ಭಾಷೆಯ ಅಧ್ಯಯನವಾಗಬೇಕಾಗಿರುವುದು ಪದವಿ ಶಿಕ್ಷಣ ವ್ಯವಸ್ಥೆಯಲ್ಲಿಯೇ ಹೊರತು ಪ್ರಾಥಮಿಕ ಅಥವಾ ಪ್ರೌಡ ಶಿಕ್ಷಣ ಹಂತದಲ್ಲಿ ಅಲ್ಲ‌. ಆದರೆ ಬಹುಮುಖ್ಯವಾದ ಈ ಪದವಿ ಶಿಕ್ಷಣದ ಹಂತದಲ್ಲಿ ಕನ್ನಡ ಭಾಷಾ ಕಲಿಕೆಯ ಅವಕಾಶವನ್ನು ಮೊಟಕುಗೊಳಿಸುವುದರಿಂದ ಕನ್ನಡ ಭಾಷೆಯನ್ನು ಸಮಗ್ರವಾಗಿ ಕಲಿಯುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತವಾಗುವ ಸಾಧ್ಯತೆ ಇದೆ ಎಂದು‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಎಂಟು ಬಾರಿ ಕನ್ನಡ ಭಾಷಾ ಸಾಹಿತ್ಯಕ್ಕೆ ಜ್ಞಾನ ಪೀಠ ಪ್ರಶಸ್ತಿ ಬಂದಿರುವುದನ್ನು ಸರಕಾರ ಮರೆಯಬಾರದು. ಕನ್ನಡ ಭಾಷೆಯ ಆಳವಾದ ಅಧ್ಯಯನ ಮಾಡಲು ಅವಕಾಶವಾಗುವಂತೆ ಕನ್ನಡ ಭಾಷೆಯನ್ನು ನಾಲ್ಕು ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ಷ ಕಡ್ಡಾಯವಾಗಿ ಕನ್ನಡ ಭಾಷೆಯನ್ನೇ ಕಲಿಯುವ ಅವಕಾಶವಿರುವಂತೆ ಹೊಸ ಶಿಕ್ಷಣ ನೀತಿಯಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಕೆ.ರಾಘವೇಂದ್ರ ನಾಯರಿ ಸರಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.

ಸರಕಾರವು ಅಗತ್ಯ ತಿದ್ದುಪಡಿಗೆ ಮುಂದಾಗದಿದ್ದಲ್ಲಿ ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಿಗರ ಮತ್ತು ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!