ಪತ್ರಕರ್ತರು ಸಮಾಜದ ಸ್ವಾಸ್ತ್ಯ ಕಾಪಾಡುವ ಜೊತೆ ಆರೋಗ್ಯದ ಕಡೆಗೆ ಕಾಳಜಿ ಹರಿಸಿ : ಜಿಎಂಆರ್ ಆರಾಧ್ಯ

ದಾವಣಗೆರೆ: ಸುದ್ದಿಗಾರರು ಸುದ್ದಿ ನೀಡುವ ಧಾವಂತದಲ್ಲಿ ಸಮಾಜದ ಆಗು-ಹೋಗುಗಳ ಮಾಹಿತಿ ನೀಡುತ್ತಾ ಸ್ವಾಸ್ತ್ಯ ಕಾಪಾಡುವ ಜೊತೆಗೆ ತಮ್ಮ ಆರೋಗ್ಯದ ಕಾಳಜಿಯನ್ನು ಮರೆಯಬಾರದು ಎಂದು ಹಿರಿಯ ಪತ್ರಕರ್ತರು ಹಾಗೂ ಜಿಲ್ಲಾ ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಪತ್ರಕರ್ತರಿಗೆ ತಿಳಿಸಿದರು.
ನಗರದ ಕೆಬಿ ಬಡಾವಣೆಯಲ್ಲಿರುವ ಜಿಲ್ಲಾ ವರದಿಗಾರರ ಕೂಟದಿಂದ ಹಮ್ಮಿಕೊಂಡಿದ್ದ 77 ನೇ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪತ್ರಕರ್ತರು ಸದಾ ಒತ್ತಡದ ನಡುವೆ ಕಾರ್ಯನಿರ್ವಹಣೆ ಮಾಡುತ್ತಾ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಏಕಾಏಕಿ ಆರೋಗ್ಯ ಹದಗೆಡುವ ಸನ್ನಿವೇಶ ಎದರಾಗಬಹುದು. ಆದ್ದರಿಂದ ಮುಂಜಾಗ್ರತೆಯಾಗಿ ಪ್ರತಿ ದಿನ ವ್ಯಾಯಾಮ, ವಾಯುವಿಹಾರದಂತಹ ಆರೋಗ್ಯಪೂರ್ಣ ಚಟುವಟಿಕೆಗಳ ಮುಖೇನ ಒತ್ತಡ ನಿವಾರಣೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿರಿ. ನಿಮ್ಮನ್ನೇ ನಂಬಿರುವ ಕುಟುಂಬಗಳು ಆತಂಕಕ್ಕೆ ಒಳಗಾಗುತ್ತವೆ. ಆದ್ದರಿಂದ ಮುಂಜಾಗ್ರತೆ ವಹಿಸಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕೂಟದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರು ಮಾತನಾಡಿ, ಕೂಟದ ಎಲ್ಲರು ಎಲ್ಲಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಪ್ರತಿ ಸ್ವಾತಂತ್ರ‍್ಯೋತ್ಸವ ದಿನದಂದು ಮಾಜಿ ಅಧ್ಯಕ್ಷರಿಂದ ಧ್ವಜಾರೋಹಣ ನೆರವೇರಿಸುತ್ತಾ ಬರುತ್ತಿರುವ ಪದ್ಧತಿ ಆಶಾದಾಯಕ. ಈ ವರ್ಷ ಅನಾರೋಗ್ಯದ ನಡುವೆಯು ಮಾಜಿ ಅಧ್ಯಕ್ಷರಾಗಿರುವ ಜಿಎಂಆರ್ ಆರಾಧ್ಯ ಅವರನ್ನು ಕರೆಸಿ ಧ್ವಜಾರೋಹಣ ಮಾಡಿಸಿದ್ದು ಸಂತಸದ ಸಂಗತಿ ಎಂದು ಹರುಷ ವ್ಯಕ್ತಪಡಿಸಿದರು.
ಕೂಟದ ಪ್ರಧಾನ ಕಾರ್ಯದರ್ಶಿ ಸಿ. ವರದರಾಜ್ ಮಾತನಾಡಿ, ಇನ್ನು ಮೂರು ದಶಕಗಳು ಕಳೆದರು ಪತ್ರಿಕೋದ್ಯಮವು ನಶಿಸುವುದಿಲ್ಲ. ಪ್ರಜಾಪ್ರಭುತ್ವ ಇರುವವರೆಗೂ ಪತ್ರಿಕೋದ್ಯಮಕ್ಕೆ ಅಳಿವಿಲ್ಲ. ಪ್ರಸ್ತುತ ಅಡ್ವಾನ್ಸ್ ಪತ್ರಿಕೋದ್ಯಮಕ್ಕೆ ಅಡ್ಜೆಸ್ಟ್ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಅವರು ಮಾತನಾಡುತ್ತಾ, ಕೂಟದ ಹಳೆಯ ಪದ್ದತಿಯಂತೆ ಮಾಜಿ ಅಧ್ಯಕ್ಷರಿಂದ ಧ್ವಜಾರೋಹಣ ಮಾಡಿಸಲು ನಿರ್ಧರಿಸಲಾಯಿತು. ಜಿಎಂ ಆರ್ ಆರಾಧ್ಯ ಅವರು ನಿತ್ಯ ಆರೋಗ್ಯದ ಕಾಳಜಿ ವಹಿಸುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆ ಹೈಸ್ಕೂಲ್ ಮೈದಾನ, ಕುಂದುವಾಡ ಕೆರೆ ಕಡೆ ವಾಕ್, ವ್ಯಾಯಮ ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ ಅವರಿಗೆ ಏಕಾಏಕಿ ಆರೋಗ್ಯ ಹದಗೆಡುವಂತಾಗಿದೆ. ಪತ್ರಕರ್ತರು ತಮ್ಮ ಕಾರ್ಯದ ನಡುವೆ ಆರೋಗ್ಯದ ಕಡೆ ಜಾಗೃತಿ ವಹಿಸಬೇಕು ಎಂದರು.
ಕೂಟದ ಮಾಜಿ ಖಜಾಂಚಿ ತಾರಾನಾಥ್, ಮಾಜಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ, ಖಜಾಂಚಿ ಮಧುನಾಗರಾಜ್, ಪಿ.ಆರ್.ಒ ಡಿ. ರಂಗನಾಥ ರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದಿನ್, ಖಜಾಂಚಿ ಬದ್ರೀನಾಥ್, ಪದಾಧಿಕಾರಿಗಳಾದ ರಾಮ್‌ಪ್ರಸಾದ್, ನೂರುಲ್ಲಾ, ಕಿರಣಕುಮಾರ್, ಎ.ಎನ್. ನಿಂಗಪ್ಪ, ವಂಸತ್ ಕುಮಾರ್, ಚೆನ್ನಬಸವ ಶೀಲವಂತ್, ಶಿವಕುಮಾರ್, ಕಲ್ಲೇಶಪ್ಪ ಹಾಗೂ ಪತ್ರಕರ್ತರಾದ ಎಂ.ವೈ. ಸತೀಶ್, ವೇದಮೂರ್ತಿ, ಕರಿಬಸವರಾಜ್, ಅಜಯ್, ಎಂ. ಗುರುಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕ ಎ.ಕೆ. ರಾಮಪ್ಪ ಸೇರಿದಂತೆ ಮತ್ತಿತರರಿದ್ದರು.