ಕನ್ನಡಭಾಷೆಗೆ ಕುತ್ತು ಬಂದರೆ ಉಗ್ರ ಹೋರಾಟ: ಬಿ.ವಾಮದೇವಪ್ಪ ಎಚ್ಚರಿಕೆ

ದಾವಣಗೆರೆ : ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತಾದ್ಯಂತ 2021 -22 ನೇ ಸಾಲಿನಿಂದ ಜಾರಿಯಾಗಬೇಕೆಂದು ಆಯೋಗದ ಅಧ್ಯಕ್ಷರಾದ ಕರ್ನಾಟಕದವರೇ ಆಗಿರುವ ಡಾ. ಕಸ್ತೂರಿರಂಗನ್ ವರದಿಯಲ್ಲಿ ತಿಳಿಸಲಾಗಿತ್ತು ಎಂಬ ವಿಷಯ ಎಲ್ಲರಿಗೂ ವೇದ್ಯವಾಗಿದೆ.

ಶಿಕ್ಷಣ ನೀತಿಗೆ ಸಂಬಂಧಿಸಿದ ಆಯೋಗದಲ್ಲಿರುವ ಅಂಶಗಳನ್ನು ಜಾರಿಗೊಳಿಸುವಾಗ, ದೇಶ ಮತ್ತು ರಾಜ್ಯಗಳಲ್ಲಿ ಶಿಕ್ಷಣ ಪದ್ಧತಿಯ ಕಾನೂನುಗಳನ್ನು ರೂಪಿಸುವಾಗ ಇದು ಭಾರತದ ಸಂವಿಧಾನದ ನಿಯಮದ ಪ್ರಕಾರ ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯವಾಗಿದ್ದು ಈ ವಿಚಾರದ ಬಗ್ಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಸ್ತೃತವಾಗಿ ಚರ್ಚೆಯಾಗಿ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅನುಮೋದನೆ ಗೊಂಡ ನಂತರ ರಾಷ್ಟ್ರಪತಿ ಸಹಿ ಪಡೆದ ನಂತರ ಈ ನೂತನ ಶಿಕ್ಷಣ ನೀತಿ ಜಾರಿಯಾಗ ಬೇಕಾಗಿದೆ. ಯಾವ ಚರ್ಚೆಗಳು ನಡೆಯದೆ ಏಕಾಏಕಿ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿರುವುದು ಅತ್ಯಂತ ದುರದೃಷ್ಟಕರವಾಗಿದೆ ಎಂದು ಕನ್ನಡಪರ ಚಿಂತಕ ಕನ್ನಡ ಪರಿಚಾರಕ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಬಿ. ವಾಮದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳನ್ನು ಅದರಲ್ಲೂ ಕನ್ನಡ ಭಾಷಾ ಶಿಕ್ಷಣಕ್ಕೆ ಪದವಿಯಲ್ಲಿ ಆಗುವ ಅನ್ಯಾಯಕ್ಕೆ ಪ್ರತಿಯೊಬ್ಬ ಕನ್ನಡಿಗನು ಖಂಡಿಸುತ್ತಾನೆ ಮತ್ತು ಸಿಡಿದೆದ್ದು ಗೋಕಾಕ್ ಮಾದರಿಯ ಉಗ್ರ ಚಳುವಳಿಯನ್ನೇ ಮಾಡುತ್ತೇವೆಂದು  ಮುಖ್ಯ ಮಂತ್ರಿಗಳು ಮತ್ತು  ಉನ್ನತ ಶಿಕ್ಷಣ ಸಚಿವರು ಕೂಡಲೇ ಈ ಬಗ್ಗೆ ಸ್ಪಷ್ಟೀಕರಣ ನೀಡುವುದರ ಮೂಲಕ ಗೊಂದಲವನ್ನು ಬಗೆಹರಿಸಬೇಕು ಇಲ್ಲದಿದ್ದರೆ, ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆ ಜಿಲ್ಲೆಯಿಂದಲೇ ಗೋಕಾಕ್ ಮಾದರಿಯ ಉಗ್ರ ಹೋರಾಟವನ್ನು ಎಲ್ಲಾ ಕನ್ನಡಪರ ಸಂಘಟನೆಗಳು, ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು, ವಿವಿಧ ಸಂಘಟನೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿ ನಿಂತು ಉಗ್ರ ಹೋರಾಟಕ್ಕೆ ಶೀಘ್ರದಲ್ಲಿಯೇ ಇಳಿಯುತ್ತದೆ ಎಂಬ ಎಚ್ಚರಿಕೆಯನ್ನು ಎಲ್ಲಾ ಕನ್ನಡದ ಮನಸ್ಸುಗಳ ಪರವಾಗಿ ನೀಡುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!