Kantara 2: ಕಾಂತಾರ ಪ್ರೀಕ್ವೆಲ್​ ಮುಹೂರ್ತಕ್ಕೆ ಡೇಟ್ ಫಿಕ್ಸ್​!

Kantara 2: Date Fix for Kantara Prequel Muhurta! Puja at Anegudde temple in Keradi

ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು, ಕೇವಲ 17 ಕೋಟಿಯಲ್ಲಿ ತಯಾರಾದ ‘ಕಾಂತಾರ’ ವಿಶ್ವದಾದ್ಯಂತ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಕಾಂತಾರ ಸಿನಿಮಾದ ರಿಶಬ್ ನಟನೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಸೂಪರ್ ಸ್ಟಾರ್ ರಜನಿಕಾಂತ್ ಕೂಡ ರಿಶಬ್ ಅವರನ್ನು‌ ಮನೆಗೆ ಕರೆಸಿ ಅಭಿನಂದಿಸಿದ್ದರು. ಸದ್ಯ, ರಿಶಬ್ ಶೆಟ್ಟಿ ಕಾಂತಾರ-2 ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

ಈಗಾಗಲೇ ರಿಶಬ್ ಮತ್ತು ತಂಡ ಕಾಂತಾರ-2 ಸಿನಿಮಾದ ಕಥೆ ಬರೆಯಲು ನಿಗೂಢ ಸ್ಥಳಕ್ಕೆ ತೆರಳಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಈ ನಡುವೆ ಸಿನಿಮಾದ ಮುಹೂರ್ತಕ್ಕೆ ಸದ್ದಿಲ್ಲದೆ ತಯಾರಿ ನಡೆದಿದೆ. ಸಕಲ ತಯಾರಿಗಳೊಂದಿಗೆ ನವೆಂಬರ್ 27 ರಂದು ‘ಕಾಂತಾರ-2’ ಸಿನಿಮಾದ ಮುಹೂರ್ತ ಸರಳವಾಗಿ ನಡೆಯಲಿದೆ ಎಂದು ರಿಶಬ್ ಆಪ್ತ ಬಳಗ ತಿಳಿಸಿದೆ ಎನ್ನಲಾಗಿದೆ. ಮುಹೂರ್ತದ ಬಳಿಕ ಡಿಸೆಂಬರ್ ನಲ್ಲಿ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿ 2024ರ ಆರಂಭಕ್ಕೆ ಶೂಟಿಂಗ್ ಆರಂಭವಾಗಲಿದೆಯಂತೆ.

ರಿಶಬ್ ಶೆಟ್ಟಿ ಈ ಹಿಂದೆ ಕಾಂತಾರ-2 ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಎಂದಿದ್ದರು. ಅದೇ ಪ್ರಕಾರ ಇದೀಗ ರಿಶಬ್ ಚಿತ್ರಕ್ಕಾಗಿ ಇತಿಹಾಸದ ಆಳ ಅಧ್ಯಯನದಲ್ಲಿ ತೊಡಗಿದ್ದು, 14ನೇ ಶತಮಾನದ ಕಥೆಯನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ರಿಶಬ್ ಹೇಳ ಹೊರಟಿದ್ದು, ಇದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಬರೋಬ್ಬರಿ 110 ಕೋಟಿ ಬಜೆಟ್ ಕೂಡಿಕೆ ಮಾಡಲಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಥಿಯೇಟರ್‌ಗಳಲ್ಲಿ ಪಂಜುರ್ಲಿ ದೈವದ ವೈಭವವನ್ನು ಸಿನಿ ಪ್ರೇಕ್ಷಕ ಕಣ್ತುಂಬಿಕೊಳ್ಳಬಹುದು.

ಸಿನಿಮಾ ವಿಚಾರದಲ್ಲಿ ರಿಶಬ್ ಶೆಟ್ಟಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಇದೀಗ ಕಾಂತಾರ-2 ಚಿತ್ರ ತಯಾರಾಗುತ್ತಿದ್ದು. ಇದಕ್ಕಾಗಿ ರಿಶಬ್ ಕುದುರೆ ಸವಾರಿ, ಕಳರಿ ಕಲಿಯುತ್ತಿದ್ದಾರೆ. ಜೊತೆಗೆ ರಿಶಬದ ಲುಕ್ ಕೂಡ ಚೇಂಜ್ ಆಗಲಿದೆಯಂತೆ. ಈಗಾಗಲೇ ಚಿತ್ರತಂಡ ಅನುಮತಿಗಾಗಿ ಪಂಜುರ್ಲಿ ಹಾಗೂ ಗುಳಿಗ ದೈವದ ಮೊರೆ ಹೋಗಿದ್ದು ಸಿನಿಮಾ ಮಾಡಲು ದೈವಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ‘ಕಾಂತಾರ’ ಸಿನಿಮಾ ಮಾಡಿದ ದಾಖಲೆ, ಮೋಡಿಯನ್ನು ಯಾವ ರೀತಿ ರಿಶಬ್ ‘ಕಾಂತಾರ-2’ ಸಿನಿಮಾದಲ್ಲೂ ಮುಂದುವರೆಸಿಕೊಂಡು‌ ಹೋಗಲಿದ್ದಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!