ದಾವಣಗೆರೆಯಲ್ಲಿ 18 ಜನರಿಗೆ ಕೊವಿಡ್ ಸೊಂಕು: ಶಾಲೆಯ ನಾಲ್ವರಿಗೂ ಕೊವಿಡ್.!
ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ 18 ಜನರಿಗೆ ಸೋಂಕು ತಗುಲುವ ಮೂಲಕ ಕರೋನಾ ಸ್ಪೋಟಗೊಂಡಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಪ್ರತಿದಿನ ಎರಡ್ಮೂರು ಪ್ರಕರಣಗಳಿಗೆ ಸೀಮಿತಗೊಂಡಿದ್ದ ಪ್ರಕರಣಗಳು ಇಂದು ಒಂದೇ ದಿನಕ್ಕೆ 18ಕ್ಕೆ ಏರಿಕೆ ಕಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 39 ಕ್ಕೆ ಏರಿಕೆ ಕಂಡಿರುವುದು ಜಿಲ್ಲೆಯ ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ.
ಈ ದಿನ ಜಿಲ್ಲೆಯ ದಾವಣಗೆರೆ ತಾಲ್ಲೂಕಿನಲ್ಲಿ 16 ಮತ್ತು ಜಗಳೂರಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ಕರೋನಾದ ಎರಡು ಅಲೆಗಳಲ್ಲಿ 50,418 ಜನರಿಗೆ ಕರೋನಾ ತಗುಲಿತ್ತು. ಸೋಂಕಿಗೆ 608 ಜನರು ಬಲಿಯಾಗಿದ್ದರು.
ಶಾಲಾ/ಕಾಲೇಜು, ನರ್ಸಿಂಗ್, ಅರೆ ವೈದ್ಯಕೀಯ ಒಟ್ಟು 10,023 ವಿದ್ಯಾರ್ಥಿಗಳಿಗೆ ಕರೋನಾ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 9,509 ಜನರ ವರದಿ ನೆಗೆಟಿವ್ ಬಂದಿದೆ. ನವೋದಯ ಶಾಲೆ, ದೇವರಹಳ್ಳಿ, ಚನ್ನಗಿರಿಯ ನಾಲ್ವರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ತಿಳಿಸಿದ್ದಾರೆ.