ದಾವಣಗೆರೆ :ಕರ್ನಾಟಕ ಲೋಕಸೇವಾ ಆಯೋಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಗ್ರೇಡ್-1 ಹುದ್ದೆಗಾಗಿ ಫೆಬ್ರವರಿ 25 ಹಾಗೂ 26 ರಂದು ಎರಡು ದಿನಗಳ ಕಾಲ ನಗರದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಸುಗಮವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ನಿಯೋಜಿತ ಅಧಿಕಾರಿಗಳು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ ಇಂಜನೀಯರ್ ಹುದ್ದೆ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತಾನಾಡಿದ ಅವರು, ಫೆ.25 ರಂದು ಜಿಲ್ಲೆಯ 15 ಹಾಗೂ ಫೆ.26 ರಂದು 04 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮಾರ್ಗಾಧಿಕಾರಿಗಳು ಮತ್ತು ವೀಕ್ಷಕರನ್ನು ನೇಮಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು 45 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಸಿದ್ಧತೆಗಳನ್ನು ಕೈಗೊಳ್ಳಬೇಕು. ಪರೀಕ್ಷೆ ಕೊಠಡಿಯೊಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. . ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು ಎಂದು ಸೂಚನೆ ನೀಡಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.
ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದರು.
ಪರೀಕ್ಷಾ ಕೇಂದ್ರಗಳು: ಫೆ.25 ರಂದು ಮಧ್ಯಾಹ್ನ 03 ರಿಂದ 05 ಗಂಟೆಯವರೆಗೆ ರವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜನೀಯರ್ ಗ್ರೇಡ-1 ಹುದ್ದೆಗಳಿಗೆ ಹಾಗೂ ವಿವಿಧ ಗ್ರೂಪ್ ಎ,ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಗರದ ಮೋತಿ ವೀರಪ್ಪ ಪದವಿಪೂರ್ವ ಕಾಲೇಜು, ಸೀತಮ್ಮ ಬಾಲಕಿಯರ ಪದವಿಪೂರ್ವ ಕಾಲೇಜು, ಎಕ್ಸ್ ಮುನ್ಸಿಪಾಲ್ ಕಾಲೇಜು ಮತ್ತು ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು,ಡಿ.ಜೆ.ವಿ ಸರ್ಕಾರಿ ಶಾಲೆ, ಆವರಗೆರೆಯ ಸರ್ಕಾರಿ ಶಾಲೆ, ಡಿ.ಆರ್‍ಆರ್ ಸರ್ಕಾರಿ ಶಾಲೆ, ಎಂ.ಎಸ್.ಬಿ ಕಾಲೇಜ್,ಮುದೇಗೌಡ ಮಲ್ಲಮ್ಮ ಮುರಿಗೆಪ್ಪ ಮಹಿಳಾ ಶಾಲೆ,ಮಹಿಳಾ ಸೇವಾ ಸಮಾಜ, ಎಸ್.ಟಿ.ಐ ಕಾಲೇಜ್,ಸೆಂಟ್ ಪಾಲ್ಸ್ ಕಾನ್ವಂಟ್ ಸ್ಕೂಲ್, ಡಿಆರ್‍ಎಂ ವಿಜ್ಞಾನ ಕಾಲೇಜ್ ಹಾಗೂ ಎಸ್.ಕೆ.ಎ.ಹೆಚ್ ಕಾಲೇಜ್‍ನಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು.
ಫೆ.26 ರಂದು ಬೆಳಿಗ್ಗೆ 10 ರಿಂದ 11.30ರವರೆಗೆ ಪತ್ರಿಕೆ-1 ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2.00 ರಿಂದ 4.00 ರವೆರೆಗೆ ಪತ್ರಿಕೆ-2 ನಿರ್ಧಿಷ್ಟ ಪತ್ರಿಕೆ ವಿಷಯ ಕುರಿತಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜನೀಯರ್ ಗ್ರೇಡ-1 ಹುದ್ದೆಗಳಿಗೆ ನಗರದ ಮೋತಿ ವೀರಪ್ಪ ಪದವಿಪೂರ್ವ ಕಾಲೇಜು, ಸೀತಮ್ಮ ಬಾಲಕಿಯರ ಪದವಿಪೂರ್ವ ಕಾಲೇಜು, ಎಕ್ಸ್ ಮುನ್ಸಿಪಾಲ್ ಕಾಲೇಜು ಮತ್ತು ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದ ಸುತ್ತಲು ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಪ್ಪೇಶಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಪವಾರ್‍ಶೆಟ್ಟರ್ ಶಿಕ್ಷಣಾಧಿಕಾರಿ ರಾಜಶೇಖರ್, ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.
