ಲಸಿಕೆ ರಿಮೋಟ್ ಸಂಸದರ ಕೈಯಲ್ಲಿ; ಕಾಂಗ್ರೆಸ್ ಸದಸ್ಯರ ಆರೋಪ

 

ದಾವಣಗೆರೆ.ಜೂ.೨೯;  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಸಿಕೆ ನೀಡಿಕೆ ವಿಚಾರದಲ್ಲಿ ಕೇವಲ ಜಾಹೀರಾತು ನೀಡಿ ಪ್ರಚಾರ ಮಾಡುತ್ತಿವೆ. ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಲಸಿಕೆಗಾಗಿ ಹೊಡೆದಾಟ ನಡೆಯುವ ಪ್ರಸಂಗಗಳು ಎದುರಾಗಲಿವೆ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಕ್ಕೊಮ್ಮೆ ಸರ್ಕಾರದಿಂದ ಜಿಲ್ಲೆಯ ಜನತೆಗೆ ನೀಡಲು ಸಾವಿರಗಟ್ಟಲೆ ಲಸಿಕೆ ಬರುತ್ತದೆ. ಆದರೆ ಅದು ಎಲ್ಲಿಗೆ ಹೋಗುತ್ತದೆ. ಯಾರಿಗೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲದಂತಾಗಿದೆ. ಸರ್ಕಾರದಿಂದ ಬಂದ ಲಸಿಕೆಯನ್ನೇ ತಾವೇ ಹಣ ಕೊಟ್ಟು ತರಿಸಿರುವ ರೀತಿಯಲ್ಲಿ ಸಂಸದ ಜಿ.ಎಂ.ಸಿದ್ಧೇಶ್ವರ್ ತಮಗೆ ಬೇಕಾದವರಿಗೆ ಮಾತ್ರ ನೀಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನಿಂದ ಎಸ್ಸೆಸ್ ಹಾಗೂ ಎಸ್ಸೆಸೆಂ ಅವರು ಮಹಾನಗರದ ಜನತೆಗೆ ಲಸಿಕೆ ಹಾಕಿಸಲು ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ. ಇದಕ್ಕೂ ಕೆಲವರು ತಡೆ ಒಡ್ಡುತ್ತಿದ್ದಾರೆ. ನಾವುಗಳು ಎಲ್ಲಾ ವಾರ್ಡುಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಹಾಕುತ್ತಿದ್ದೇವೆ. ಬಿಜೆಪಿಯವರಂತೆ ಜಿಎಂಐಟಿ ಕಾಲೇಜಿನಲ್ಲೋ, ಸೋಮೇಶ್ವರ ಶಾಲೆಯಲ್ಲೋ ತಮಗೆ ಬೇಕಾದವರಿಗೆ ಹಾಕುತ್ತಿಲ್ಲ. ಇದು ಸರಿಯಲ್ಲ. ಇದನ್ನು ಕಾಂಗ್ರೆಸ್ ಖಂಡಿಸುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರದಿಂದ ನೀಡಲಾಗುವ ಲಸಿಕೆ ಎಲ್ಲಾ ಜನಪ್ರತಿನಿಧಿಗಳ ಸೂಚನೆಯಂತೆ ಹಂಚಿಕೆ ಆಗಬೇಕು. ಆದರೆ ಸಂಸದರು ಜಿಲ್ಲೆಯ ಯಾವುದೇ ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಇದೇ ರೀತಿ ತಮಗೆ ಬೇಕಾದವರಿಗೆ ಲಸಿಕೆ ನೀಡಿದರೆ, ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಬಿಜೆಪಿ ಕಾರ್ಯಕರ್ತರಿಗಷ್ಟೇ ಲಸಿಕೆ ನೀಡುತ್ತಿರುವ ಕೇಂದ್ರಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎ.ನಾಗರಾಜ್, ಕೆ.ಚಮನ್‌ಸಾಬ್, ಅನಿತಾಬಾಯಿ, ಅಯೂಬ್ ಪೈಲ್ವಾನ್, ಆಶಾ ಮುರುಳಿ, ಐನಳ್ಳಿ ವೀರಣ್ಣ, ಯುವರಾಜ್ ಇತರರು ಇದ್ದರು.

 

 

Leave a Reply

Your email address will not be published. Required fields are marked *

error: Content is protected !!