ಪ್ರಸ್ತುತ ದಿನಮಾನದಲ್ಲಿ ಕಾರ್ಮಿಕ ಸಂಘಟನೆಯನ್ನು ಮುನ್ನಡೆಸುವುದು ಸವಾಲಿನ ಕೆಲಸ – ಹೆಚ್.ಜಿ.ಉಮೇಶ್

ದಾವಣಗೆರೆ: ಅನ್ಯಾಯಕ್ಕೆ ಹಾಗೂ ಶೋಷಣೆಗೆ ಒಳಗಾದ ಸದಸ್ಯರಿಗೆ ನ್ಯಾಯ ಕೊಡಿಸುವ ಬಹು ದೊಡ್ಡ ಜವಾಬ್ದಾರಿ ಕಾರ್ಮಿಕ ಸಂಘಟನೆಗಳ ಮೇಲಿದೆ‌. ಅವರದನ್ನು ಪ್ರತಿಫಲಾಪೇಕ್ಷೆಯಿಲ್ಲದೇ ಯಶಸ್ವಿಯಾಗಿ ನಿಭಾಯಿಸಿದಾಗ ಮಾತ್ರ ಸಂಘಟನೆ ಹಾಗೂ ಕಾರ್ಮಿಕ ಮುಖಂಡರ ಮೌಲ್ಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ‌ ಕೆ.ರಾಘವೇಂದ್ರ ನಾಯರಿಯವರು ಪ್ರಶ್ನಾತೀತವಾಗಿ ಸದಸ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಅವರ ಸಂಘಟನಾ ಬದ್ಧತೆ ಇತರರಿಗೆ ಮಾದರಿಯಾಗಿದೆ ಎಂದು ಕೆನರಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಹೆಚ್.ರಘುರಾಜ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಂದು ನಗರದ ಚೇತನಾ ಹೋಟೆಲ್ ಸಭಾಂಗಣದಲ್ಲಿ ನಡೆದ ಕೆ.ರಾಘವೇಂದ್ರ ನಾಯರಿ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಮಿಕ ಸಂಘಟನೆಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು, ಅಶಕ್ತರಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕು. ಉದ್ಯೋಗಿಗಳು ಹಾಗೂ ಆಡಳಿತ ಮಂಡಳಿಯ ನಡುವೆ ಸೌಹಾರ್ದಯುತವಾಗಿ ಮತ್ತು ಸೇತುವೆಯ ರೀತಿಯಲ್ಲಿ ಕೆಲಸ ಮಾಡಬೇಕು. ರಾಘವೇಂದ್ರ ನಾಯರಿಯವರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ನಾಯಕರಾಗಿ ಕೆಲಸ ಮಾಡುವ ಅವಕಾಶ ಒದಗಿ ಬರಲಿ ಎಂದು ಸಹಾಯಕ ಮಹಾ ಪ್ರಬಂಧಕ ಹೆಚ್.ರಘುರಾಜ ಶುಭ ಹಾರೈಸಿದರು.

ಕರ್ನಾಟಕ ಪ್ರದೇಶ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ಗೆ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕೆ.ರಾಘವೇಂದ್ರ ನಾಯರಿ ದಂಪತಿಗಳನ್ನು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅವರಗೆರೆ ಹೆಚ್.ಜಿ.ಉಮೇಶ್ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಕಾರ್ಮಿಕ ಸಂಘಟನೆಗಳನ್ನು ಮುನ್ನಡೆಸುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ. ಸರಕಾರಗಳು ದಿನ ನಿತ್ಯವೆಂಬಂತೆ ಕಾರ್ಮಿಕ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿವೆ. ಕಾರ್ಮಿಕರ ಪರವಾಗಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಾತನಾಡುವವರ ಸಂಖ್ಯೆ ಅತೀ ವಿರಳವಾಗಿದೆ. ಈ ಹಿನ್ನಲೆಯಲ್ಲಿ‌ ಕಾರ್ಮಿಕ ಸಂಘಟನೆಗಳು ವಿರೋಧ ಪಕ್ಷದ ನೆಲೆಯಲ್ಲಿ ನಿಂತು ಹೋರಾಟದ ಮೂಲಕವಾಗಿಯೇ ಸರಕಾರಕ್ಕೆ ಪ್ರತಿರೋಧವನ್ನು ತೋರಿಸಬೇಕಾಗಿದೆ. ದೇಶದಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ನಡೆಯುತ್ತಿರುವ ಬಲಿಷ್ಠ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬ್ಯಾಂಕುಗಳ ವಿಲೀನ, ಖಾಸಗೀಕರಣ, ಬ್ಯಾಂಕಿಂಗ್ ಆಕ್ಟ್‌ಗೆ ತಿದ್ದುಪಡಿ ಮುಂತಾದ ರಾಷ್ಟ್ರೀಕರಣ ವಿರೋಧಿ ನೀತಿಗಳನ್ನು ತರುವುದರ ಮೂಲಕ ಬ್ಯಾಂಕುಗಳನ್ನು ದುರ್ಬಲಗೊಳಿಸಲು ಯತ್ನಿಸಲಾಗಿತ್ತಿದೆ. ಇದನ್ನು ಬ್ಯಾಂಕ್ ಕಾರ್ಮಿಕ ಸಂಘಟನೆಗಳು‌ ವಿರೋಧಿಸಿ ಈಗಾಗಲೇ ಅನೇಕ ಮುಷ್ಕರಗಳನ್ನು ನಡೆಸಿವೆ. ಈ ಹೋರಾಟ ಇನ್ನೂ ತೀವ್ರಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಹೋರಾಟದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳೂ ಭಾಗಿಯಾಗಲಿವೆ. ಬ್ಯಾಂಕುಗಳ ವಿಲೀನದ ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಈ ರೀತಿಯ ಹಲವಾರು ಸಮಸ್ಯೆಗಳು ನಮ್ಮ ಮುಂದಿರುವಾಗ ನಮ್ಮ ಜಿಲ್ಲೆಯ ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿಯವರನ್ನು ರಾಜ್ಯ ಮಟ್ಟದಲ್ಲಿ ಕೆಪಿಬಿಇಎಫ್‌ನ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಳಿಸಿರುವುದು ದಾವಣಗೆರೆ ಭಾಗದ ಕಾರ್ಮಿಕ ಹೋರಾಟಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ‌. ಕೆ.ರಾಘವೇಂದ್ರ ನಾಯರಿಯವರು ರಾಜ್ಯ ಮಟ್ಟದ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದರ ಮೂಲಕವಾಗಿ ರಾಷ್ಟ್ರ ಮಟ್ಟದ ನಾಯಕರಾಗಿ ಹೊರಹೊಮ್ಮುವಂತಾಗಲಿ ಎಂದು ಹೆಚ್.ಜಿ.ಉಮೇಶ್ ಅವರು ಆಶಯ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಕೆ.ರಾಘವೇಂದ್ರ ನಾಯರಿ ಮಾತನಾಡಿ ಅಖಿಲ ಭಾರತ ಬ್ಯಾಂಕ್ ‌ನೌಕರರ ಸಂಘ ಹಾಗೂ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ನನ್ನನ್ನು ಇಲ್ಲಿಯವರೆಗೆ ಹಲವಾರು ಅವಕಾಶಗಳನ್ನು ನೀಡಿ ಈ ಹಂತದವರೆಗೆ ಬೆಳೆಸಿದೆ. ಅನೇಕ ಹಿರಿಯ ಕಾರ್ಮಿಕ ಮುಖಂಡರು ನನಗೆ ಮಾರ್ಗದರ್ಶನ ಮಾಡಿ ನನ್ನಲ್ಲಿ ಹೋರಾಟ ಮಾಡುವ ಚೈತನ್ಯವನ್ನು ತುಂಬಿದ್ದಾರೆ. ಅವರಿಗೆಲ್ಲ ನಾನು ಚಿರ ಋಣಿಯಾಗಿದ್ದೇನೆ. ಸಮಾಜವು ನನ್ನನ್ನು ಬೆಳೆಸಿದೆ ಹಾಗೂ ನಾನು ಸಾಮಾಜಿಕ ಕಾರ್ಯಗಳಿಗಾಗಿ ನನ್ನನ್ನು ಸಮರ್ಪಿಸಿಕೊಂಡು ಕಾರ್ಯನಿರ್ವಹಿಸುವೆ ಎಂದರು.

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಸುಶೃತ್ ಶಾಸ್ತ್ರಿ, ಹೋಟೆಲ್ ಉದ್ಯಮಿ ಮಲ್ಯಾಡಿ ಪ್ರಭಾಕರ ಶೆಟ್ಟಿ, ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಂಗಸ್ವಾಮಿ, ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಕೆ.ಎನ್‌‌.ಗಿರಿರಾಜ್ ಭಾಗವಹಿಸಿದ್ದರು.

ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಜಿಲ್ಲಾ ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ ಮಾತನಾಡಿದರು. ಆರ್ ಆಂಜನೇಯ ಕಾರ್ಯಕ್ರಮ ನಿರೂಪಿಸಿದರು ಹಾಗೂ ಹೆಚ್.ಎಸ್.ತಿಪ್ಪೇಸ್ವಾಮಿ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಜಿ.ಜಿ.ದೊಡ್ಡಮನಿ, ಗಿರೀಶ್ ಶಾನುಭಾಗ್, ವಿಜಯ ಶಂಕರ್, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಅಜಿತ್ ಕುಮಾರ್ ನ್ಯಾಮತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಎಸ್.ಟಿ.ಶಾಂತ ಗಂಗಾಧರ್, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಬಿ‌.ಆನಂದಮೂರ್ತಿ
ಅಧ್ಯಕ್ಷರು
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ
ದಾವಣಗೆರೆ
ಮೊ: 9880319322

Leave a Reply

Your email address will not be published. Required fields are marked *

error: Content is protected !!