ಸಾಣೇಹಳ್ಳಿಯಲ್ಲಿ ಫೆ.26ರಂದು ಲಿಂಗಾಯತ ಧರ್ಮ ಸಮಾವೇಶ

ಲಿಂಗಾಯತ ಧರ್ಮ ಸಮಾವೇಶ
ದಾವಣಗೆರೆ: ಇದೇ ಫೆ.26ರಂದು ಸಾಣೇಹಳ್ಳಿ ಶ್ರೀಮಠದ ಆವರಣದಲ್ಲಿ ಲಿಂಗಾಯತ ಧರ್ಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಂಗಡಿ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಸಾಣೇಹಳ್ಳಿ, ರಾಷ್ಟ್ರೀಯ ಬಸವ ಪ್ರತಿಷ್ಠಾನ, ರಾಷ್ಟ್ರೀಯ ಬಸವತತ್ವ ಪರಿಷತ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಸಮಾವೇಶ ನಡೆಯಲಿದೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.30ಕ್ಕೆ ವಿಶ್ರಾಂತ ನ್ಯಾಯಮೂರ್ತಿ ನ್ಯಾ.ನಾಗಮೋಹನದಾಸ್ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಯ ಪ್ರಥಮ ಗೋಷ್ಠಿಯ ಸಾನ್ನಿಧ್ಯವನ್ನು ಶ್ರೀ ನಿಜಗುಣಾನಂದ ತೋಂಟದಾರ್ಯ ಸ್ವಾಮೀಜಿ ವಹಿಸಲಿದ್ದು, ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಡಾ.ಎಸ್.ಎಂ. ಶಿವಾನಂದ ಚಾಮದಾರ್ ವಿಷಯ ಮಂಡನೆ ಮಾಡಲಿದ್ದಾರೆ. ವಚನಗಳ ಗ್ರಹಿಕೆ ಕುರಿತು ಎಸ್.ಜಿ. ಸಿದ್ದರಾಮಯ್ಯ ವಿಷಯ ಮಂಡಿಸಲಿದ್ದಾರೆ ಎಂದರು
ಮಧ್ಯಾಹ್ನ 2ಕ್ಕೆ ನಡೆಯುವ ಗೋಷ್ಠಿಯ ಸಾನ್ನಿಧ್ಯವನ್ನು ಮಾತೆ ಗಂಗಾದೇವಿಯವರು ವಹಿಸಲಿದ್ದು, ನಡೆ-ನುಡಿ ಸಿದ್ಧಾಂತ ಕುರಿತು ರಂಜಾನ್ ದರ್ಗಾ ಹಾಗೂ ಮನೆ-ಮಠ-ಧರ್ಮ ಕುರಿತು ವಿಶ್ವಾರಾಧ್ಯ ಸತ್ಯಂಪೇಟೆ ವಿಷಯ ಮಂಡಿಸಲಿದ್ದಾರೆ ಎಂದು ಹೇಳಿದರು. ಸಮಾಶಕ್ಕೆ ದಾವಣಗೆರೆಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಡದ ಆನಂದರಾಜು, ಆವರಗೆರೆ ರುದ್ರಮುನಿ, ವಿನೋದ ಅಜಗಣ್ಣನವರ್, ವೀಣಾ ಮಂಜುನಾಥ್, ರುದ್ರಗೌಡು, ಸಿದ್ಧರಾಮಣ್ಣ, ಕೊಟ್ರೇಶಪ್ಪ, ಮಂಜುನಾಥ್, ಶಿವಮೂರ್ತಿ, ಮಲ್ಲನಗೌಡ್ರು, ಮರುಳಸಿದ್ದಯ್ಯ ಬಸವನಾಳು ಉಪಸ್ಥಿತರಿದ್ದರು.