Lingayat; ಶಾಮನೂರು ಶಿವಶಂಕರಪ್ಪ ಮಾತಿಗೆ ಧ್ವನಿಗೂಡಿಸಿದ ಜಯ ಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ, ಅ.04: ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಆಡಿದ ಮಾತಿನ ಕಿಡಿ ಇಡೀ ರಾಜ್ಯಾದ್ಯಂತ ಪಸರಿಸಿದ್ದು, ಇದೀಗ ಸ್ವಾಮೀಜಿಗಳು ಶಾಸಕ ಶಾಮನೂರು ಶಿವಶಂಕರಪ್ಪ ಪರ ಬ್ಯಾಟಿಂಗ್ ಬೀಸಿದ್ದು, ಅವರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತ (Lingayat) ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಹೇಳಿಕೆ ನೀಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪನವರ ಬಳಿ ವೀರಶೈವ ಲಿಂಗಾಯತ ಅಧಿಕಾರಿಗಳು ಹೋಗಿ, ಸರಕಾರದಲ್ಲಿ ಕಡೆಗಣನೆಯಾಗುತ್ತಿರುವ ಬಗ್ಗೆ ಹೇಳಿಕೊಂಡಿರಬೇಕು. ನಮ್ಮ ಬಳಿಯೂ ಸಾಕಷ್ಟು ಅಧಿಕಾರಿಗಳು ಈಗಿನ ಸರಕಾರದಲ್ಲಿ ಹಾಗಾಗಿದೆ, ಹೀಗಾಗಿದೆಯೆಂಬುದಾಗಿ ಅಳಲು ತೋಡಿಕೊಂಡಿದ್ದಾರೆ ಎಂದರು.

ಸರ್ಕಾರದ ಆಡಳಿತದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಸರ್ಕಾರಕ್ಕೆ ಒಂದು ಮಾತನ್ನಂತೂ ಹೇಳುತ್ತೇವೆ, ಯಾವುದೇ ಜಾತಿ, ಜನಾಂಗದ ಅಧಿಕಾರಿಗಳಾಗಿದ್ದರೂ, ಅಂತಹವರ ಪ್ರಾಮಾಣಿಕತೆ, ದಕ್ಷತೆ ಆಧರಿಸಿ, ಆಯಕಟ್ಟಿನ ಹುದ್ದೆಗಳನ್ನು ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅಧಿಕಾರಿಗಳನ್ನು ಜಾತಿಯ ಆಧಾರದಲ್ಲಿ ಹುದ್ದೆ ನೀಡುವುದಲ್ಲ ಎಂದು ಅವರು ತಿಳಿಸಿದರು.

Loksabha Election; ದಾವಣಗೆರೆ ಲೋಕಸಭೆಗೆ ಹೊಸ ಮುಖಗಳು ಎಂಟ್ರಿ

ಯಾವುದೇ ಸರ್ಕಾರ ಬದಲಾದಂತೆ ಆ ಜನಾಂಗ, ಈ ಜನಾಂಗವೆಂದು ಅಧಿಕಾರಿಗಳನ್ನು ದೂರವಿಡುವುದು, ಹುದ್ದೆ ನೀಡದಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಅಖಿಲ ಭಾರತ ವೀರಶೈವ ಮಹಾಸಭಾ ನಾಯಕರಾದ ಶಾಮನೂರು ಶಿವಶಂಕರಪ್ಪ ಯಾವ ನೋವಿನಿಂದ ಇಂತಹ ಗಂಭೀರ ವಿಚಾರದ ಬಗ್ಗೆ ಧ್ವನಿಯೆತ್ತಿದ್ದಾರೆಂಬ ಬಗ್ಗೆ ಸರ್ಕಾರವೂ ಗಮನ ಹರಿಸಬೇಕು. ಆಗಿರುವ ನೋವನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಅವರು ಸಲಹೆ ನೀಡಿದರು.

ಎಲ್ಲಾ ಜಾತಿ, ಜನಾಂಗದಲ್ಲೂ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಎಸ್ಪಿ, ಡಿಸಿಯಂತಹ ಹುದ್ದೆಯಿಂದ ಕೆಎಎಸ್, ಐಎಎಸ್, ಐಪಿಎಸ್ ನಂತಹ ಹುದ್ದೆಗಳವರೆಗೆ ಸರ್ಕಾರ ಬದಲಾದಾಗಲೆಲ್ಲಾ ಇಂತಹ ತಾರತಮ್ಯ ಆಗುತ್ತಲೇ ಇರುತ್ತವೆ. ಅವೆಲ್ಲಾ ಸಹಜ. ಆದರೆ, ಈಗಿನ ಸರ್ಕಾರದಲ್ಲಿ ಇದೆಲ್ಲಾ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆಯೆಂಬುದಾಗಿ ಶಾಮನೂರು ಶಿವಶಂಕರಪ್ಪನವರು ಹೇಳಿದ್ದಾರೆ. ಹಾಗೇನಾದರೂ ಆಗಿದ್ದರೆ, ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸರಿಪಡಿಸುವ ಕೆಲಸ ಮಾಡಲಿ ಎಂದು ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!