ಪಿಬಿ ರಸ್ತೆಯ ಹೂ ಕುಂಡಗಳಲ್ಲಿ ಮದ್ಯದ ಬಾಟೆಲ್; ಇದೇನಾ ಬಿಜೆಪಿ ಅಭಿವೃದ್ಧಿ: ಗಡಿಗುಡಾಳ್ ಪ್ರಶ್ನೆ 

ದಾವಣಗೆರೆ: ಪಿ. ಬಿ. ರಸ್ತೆಯಲ್ಲಿ ನಗರದ ಅಂದ ಹೆಚ್ಚಿಸುವ ಉದ್ದೇಶದಿಂದ ಹೂವು ಕುಂಡಗಳನ್ನು ಖರೀದಿ ಮಾಡಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ, ದೂರದೃಷ್ಟಿತ್ವ ಇಲ್ಲದ ಕಾರಣ ಈ ಯೋಜನೆ ಹಳ್ಳಹಿಡಿದಿದೆ. ಸ್ಮಾರ್ಟ್ ಸಿಟಿಯು ‘ಡಲ್ಟ್’ ಯೋಜನೆಯಡಿ ಈ ಕೆಲಸ ಕೈಗೆತ್ತಿಕೊಳ್ಳಲಾಗಿತ್ತಾದರೂ ಹಣ ಪೋಲಾಗಿದ್ದಷ್ಟೇ ಸಾಧನೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಆರೋಪಿಸಿದ್ದಾರೆ.

ಗಿಡಗಳನ್ನು ಹಾಕಲು ಒಂದು ಕುಂಡಕ್ಕೆ ಸಾಮಾನ್ಯವಾಗಿ 1200 ರೂಪಾಯಿ ತಗುಲುತ್ತದೆ. ಆದರೆ, ಸುಮಾರು 2 ಸಾವಿರ ಕುಂಡಗಳನ್ನು ಖರೀದಿಸಿದ್ದ ಕಾರಣ ಕುಂಡಗಳು ರಿಯಾಯಿತಿ ದರದಲ್ಲಿ ಖರೀದಿ ಮಾಡಲಾಗಿದೆ. ಈ ಯೋಜನೆಯಡಿ ಹೂ ಕುಂಡಗಳನ್ನು ಕೆಲವೆಡೆ ಅಳವಡಿಸಲಾಗಿತ್ತು. ಆದ್ರೆ, ಈಗ ಪಾಟ್ ಗಳನ್ನು ವಾಪಸ್ ಪಡೆಯವ ಪ್ರಕ್ರಿಯೆ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೇಳಿದರೆ ಹೂವು ಕುಂಡಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿತ್ತು. ಆದರೆ, ಇದು ಸಾಧ್ಯವಾಗದ ಕಾರಣ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನುತ್ತಿದ್ದಾರೆ. ಇದು ಬಿಜೆಪಿ ಆಡಳಿತದ ವೈಖರಿಗೆ ಸಾಕ್ಷಿ ಎಂದು ಹೇಳಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಹಣವು ಸರಿಯಾದ ರೀತಿಯಲ್ಲಿ ಸದ್ಭಳಕೆ ಆಗುತ್ತಿಲ್ಲ. ಹೂ ಕುಂಡಗಳಲ್ಲಿ ಗಿಡ, ಹೂವುಗಳನ್ನು ಬೆಳೆಸಿ ನಗರ ಅಂದಗಾಣಿಸುವ ಬದಲು ಕೋಟ್ಯಂತರ ರೂಪಾಯಿ ಪೋಲಾಗುವಂತೆ ಮಾಡುತ್ತಿರುವುದು ದುರದೃಷ್ಟಕರ. ಸಂಸದರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆಯ ಸದಸ್ಯರು ಸ್ಮಾರ್ಟ್ ಸಿಟಿ ಸದಸ್ಯರಾಗಿದ್ದಾರೆ. ಈ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಗಮನ ಹರಿಸದಿರುವುದು ಶೋಚನೀಯ ಎಂದು ಹೇಳಿದ್ದಾರೆ.

ಇಚ್ಛಾಶಕ್ತಿ ಕೊರತೆ ಕಾರಣ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ. ದಾವಣಗೆರೆಗೆ ಬಂದಾಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಉತ್ತಮ ರಸ್ತೆಗಳಿವೆ. ಸ್ಮಾರ್ಟ್ ಸಿಟಿಗೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದರು ಎಂದು ಹೇಳಿ ಹೋಗಿದ್ದರು. ಕೇವಲ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಬಂದರೆ ಸಾಲದು. ಪಾಲಿಕೆ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಗುಂಡಿಗಳು ಕಾಣ ಸಿಗುತ್ತವೆ. ಜಲಸಿರಿ ಯೋಜನೆಯಡಿ ಅರ್ಧಂಬರ್ಧ ಕೆಲಸ ಮಾಡಿ ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಬಿಜೆಪಿ ನಾಯಕರು ಹೇಳಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಪಿ.ಬಿ ರಸ್ತೆಯಲ್ಲಿನ ಮಧ್ಯದಲ್ಲಿ ಅಳವಡಿಸಿರುವ ಲೈಟ್ ಕಂಬಗಳ ನಿರ್ವಹಣೆಯೂ ಉತ್ತಮವಾಗಿಲ್ಲ. ಅದೇ ರೀತಿಯಲ್ಲಿ ಅಲ್ಲಿರುವ ಹೂವು ಕುಂಡಗಳಲ್ಲಿ ಕೆಲ ಪುಂಡ ಪೋಕರಿಗಳು ಮದ್ಯದ ಬಾಟೆಲ್ ಎಸೆದಿದ್ದಾರೆ. ಆದರೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಸಂಸದರು ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ಇದು ಯಾವ ಸೀಮೆ ಅಭಿವೃದ್ಧಿ ಎಂಬುದನ್ನು ಅರ್ಥಮಾಡಿಕೊಳ್ಳಲಿ. ಅಭಿವೃದ್ಧಿ ಬಿಟ್ಟು ಉಳಿದೆಲ್ಲವನ್ನೂ ಮಾಡುವ ಬಿಜೆಪಿ ನಾಯಕರು ಚುನಾವಣೆಯಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಜನರ ಹಿತಕ್ಕಿಂತ ಅಧಿಕಾರವೇ ಇವರಿಗೆ ಮುಖ್ಯ. ಇದಕ್ಕಾಗಿ ಏನು ಬೇಕದಾರೂ ಮಾಡುತ್ತಾರೆ. ಹೂ ಕುಂಡಗಳ ಅಳವಡಿಕೆ ಯೋಜನೆಯಲ್ಲಿ ಕಮೀಷನ್ ಹಣ ಸಿಗದ ಕಾರಣ ಈ ರೀತಿ ಹಳ್ಳ ಹಿಡಿಸಲಾಗುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೇಳಿದರೆ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸುವ ಪ್ರಯತ್ನ ನಡೆದಿದೆ. ಮಳೆ ಬಂದಾಗ, ಚಳಿಗಾಲದಲ್ಲಿ ಗಿಡಗಳು ಬೆಳೆಯುವುದಿಲ್ಲ. ದುರ್ಗಾಂಬಿಕಾ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪಾಟ್ ಅಳವಡಿಸಲಾಗಿದೆ. ಫುಟ್ ಪಾತ್ ಗಳಲ್ಲಿ ಇಡುವ ಇರಾದೆ ಇತ್ತು. ಇದು ಯಶಸ್ವಿ ಆದರೆ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಬೇರೆ ಏನು ಮಾಡಬೇಕೆಂಬ ಚರ್ಚಿಸಲಾಗುತ್ತದೆ ಎನ್ನುತ್ತಾರೆ. ನಮ್ಮ ವಾರ್ಡ್ ಗಳಿಗೆ ಹೂ ಕುಂಡ ನೀಡಿದರೆ ಪಾರ್ಕ್ ಹಾಗೂ ಸೂಕ್ತ ಸ್ಥಳದಲ್ಲಿ ನಿರ್ವಹಣೆ ಮಾಡುತ್ತೇವೆ ಎಂದು ಗಡಿಗುಡಾಳ್ ಮಂಜುನಾಥ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!