ಮಾಯಕೊಂಡ ಕ್ಷೇತ್ರ ಮಾದರಿಯನ್ನಾಗಿಸಿ ರಾಜ್ಯವೇ ತಿರುಗಿ ನೋಡುವಂತೆ ಮಾಡುವಾಸೆ: ಜಿ. ಎಸ್. ಶ್ಯಾಮ್

ಮಾಯಕೊಂಡ ಕ್ಷೇತ್ರ ಮಾದರಿಯನ್ನಾಗಿಸಿ ರಾಜ್ಯವೇ ತಿರುಗಿ ನೋಡುವಂತೆ

ದಾವಣಗೆರೆ: ಮಾಯಕೊಂಡ ಕ್ಷೇತ್ರಾದ್ಯಂತ ಈಗಾಗಲೇ ನಾಲ್ಕೈದು ಬಾರಿ ಸಂಚಾರ ಮಾಡಿದ್ದೇನೆ.ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಷೇತ್ರದ ಜನತೆ ಮನೆಮಗನಂತೆ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಅವರ ಸಂಕಷ್ಟಗಳನ್ನು ಅರಿಯುವ ಕೆಲಸ ಮಾಡಿದ್ದೇನೆ. ಈಗಾಗಲೇ 240 ಬೂತ್ ಗಳು ಹಾಗೂ 148 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಜನರ ಸಂಕಷ್ಟ ಅರಿತಿದ್ದೇನೆ ಎಂದು ಮಾಯಕೊಂಡ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಜಿ. ಎಸ್. ಶ್ಯಾಮ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಯಕೊಂಡ ಕ್ಷೇತ್ರದಲ್ಲಿ ಭಾರೀ ಮಳೆ ಸುರಿದ ಕಾರಣ ರೈತರು, ಜನರು ಸಂಕಷ್ಟದ ಸುಳಿಗೆ ಸಿಲುಕಿದ್ದರು. ರಸ್ತೆಗಳು ಬಿರುಕು ಬಿಟ್ಟಿದ್ದವು. ಗದ್ದೆಗಳಿಗೆ ನೀರು ನುಗ್ಗಿತ್ತು. ಮನೆಗಳಲ್ಲಿ ವಾಸ ಮಾಡುತ್ತಿದ್ದವರ ಸಂಕಟ ನೋಡಿ ಮನಸ್ಸಿಗೆ ಬೇಸರವಾಯಿತು. ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರ ಸಿಕ್ಕರೆ ಈ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಲು ಎಲ್ಲಾ ರೀತಿಯಲ್ಲಿಯೂ ಶ್ರಮ ವಹಿಸುತ್ತೇನೆ. ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು, ಜಿಲ್ಲಾ ನಾಯಕರು ಹಾಗೂ ಮಾಯಕೊಂಡ ಕ್ಷೇತ್ರದ ಜನರ ಆಶೀರ್ವಾದ ಬೇಕಿದೆ ಎಂದರು.

ನನ್ನ ತಂದೆ ಬಿ. ಟಿ. ಸಿದ್ದಪ್ಪ ಅವರು ನಾಲ್ಕು ದಶಕಗಳ ಕಾಲ ಬಿಜೆಪಿಗಾಗಿ ದುಡಿದಿದ್ದಾರೆ. ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಿಂತು ಸ್ವಲ್ಪ ಅಂತರದಲ್ಲಿ ಪರಾಜಯ ಹೊಂದಿದರು. ಸೋತರೂ ಜನರ ಸಂಪರ್ಕ, ಪ್ರೀತಿ, ವಿಶ್ವಾಸ ಕಡಿಮೆ ಆಗಿಲ್ಲ. ಈಗಲೂ ಹಾಗೆಯೇ ಇದೆ. ಆರ್ ಎಸ್ ಎಸ್ ನ ಪ್ರಮುಖ ಉದ್ದೇಶ ಗೋವುಗಳಿಗೆ ಪೂಜೆ, ಉಳಿಸಬೇಕೆಂಬುದು. ಇದರಂತೆ ಗೋವು ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾಗಿ ನನ್ನ ತಂದೆ ಸಿದ್ದಪ್ಪ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. 1992 ರ ರಾಮಜ್ಯೋತಿ ಯಾತ್ರೆಯಿಂದಲೂ ಬಿಜೆಪಿ ಪಕ್ಷವನ್ನು ನಮ್ಮ ಕುಟುಂಬ ಬೆಂಬಲಿಸುತ್ತಾ ಬಂದಿದೆ ಎಂದು ತಿಳಿಸಿದರು.

ಸಂಸದ ಜಿ. ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಜನಪ್ರಿಯತೆ, ಮಾಡಿರುವ ಕೆಲಸ, ಜನರು ಅವರ ಮೇಲಿಟ್ಟಿರುವ ವಿಶ್ವಾಸ ನೋಡಿ ನನಗೂ ರಾಜಕಾರಣದಲ್ಲಿ ಬೆಳೆಯಬೇಕೆಂಬ ಆಸೆ ಬಂತು. ಇಂದಿಗೂ ಸಿದ್ದೇಶ್ವರ ಅವರು ಚಿರಯುವಕನಂತೆ ಓಡಾಡುತ್ತಾರೆ. ಜನರ ಸಮಸ್ಯೆ ಆಲಿಸುತ್ತಾರೆ. ಸಂಕಷ್ಟಕ್ಕೆ ಸ್ಪಂದಿಸುತ್ತಾರೆ. ಅವರ ಗುಣಗಳು ಅಚ್ಚುಮೆಚ್ಚು ಎಂದು ಹೇಳಿದರು.

ಸಿದ್ದೇಶ್ವರ ಅವರು ಸರ್ವಜನಾಂಗದ ನಾಯಕರು. ಎಲ್ಲರೂ ಇಷ್ಟಪಡುತ್ತಾರೆ. ಅವರ ಕಾರ್ಯವೈಖರಿ ಪಕ್ಷದ ಕಾರ್ಯಕರ್ತರಿಂದ ಹಿಡಿದು ಮುಖಂಡರವರೆಗೂ ಗೌರವ ನೀಡುತ್ತಾರೆ. ಜಿ. ಎಂ. ಕುಟುಂಬ ದಾವಣಗೆರೆ ರಾಜಕಾರಣದಲ್ಲಿ ಅಚ್ಚಳಿಯದೇ ಉಳಿಯುವಂಥದ್ದು. ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿದ್ದಾರೆ. ಮಾತ್ರವಲ್ಲ ಬಿಜೆಪಿ ಜಿಲ್ಲೆಯಲ್ಲಿ ಇಷ್ಟೊಂದು ಶಕ್ತಿಶಾಲಿಯಾಗುವಲ್ಲಿ ಸಿದ್ದೇಶ್ವರ ಹಾಗೂ ಶಾಸಕ ಎಸ್. ಎ. ರವೀಂದ್ರನಾಥ್ ಅವರ ಶ್ರಮವೇ ಕಾರಣ. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಜಿ. ಮಲ್ಲಿಕಾರ್ಜುನಪ್ಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಅವರು ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ವಿಮಾನ ನಿಲ್ದಾಣ ಸ್ಥಾಪನೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದಾರೆ. ಇದು ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಿದ್ದೇಶ್ವರ ಅವರ ಕಾಳಜಿಗೆ ಸಾಕ್ಷಿ ಎಂದು ಹೇಳಿದರು.

ಕಳೆದ ಎಂಟೂವರೆ ವರ್ಷದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ. ರೈತರ ಅಕೌಂಟ್ ಹಾಗೂ ಜನಸಾಮಾನ್ಯರಿಗೆ ನೇರವಾಗಿ ಸರ್ಕಾರದ ಸೌಲಭ್ಯ ದೊರೆಯುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಜೀ ಅವರ ಕಾರ್ಯಪರತೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ರಿಯಾಯಿತಿ ನೀಡಿದ್ದಾರೆ. ರೈತರಿಗಾಗಿ ಸಾಕಷ್ಟು ಯೋಜನೆ ರೂಪಿಸಿದ್ದಾರೆ. ಮುದ್ರಾಂಕ ಯೋಜನೆಯ ಮೂಲಕ ನಿರುದ್ಯೋಗಿ ಯುವಕರು ಸೇರಿದಂತೆ ಸ್ವಉದ್ಯೋಗ ಕಲ್ಪಿಸಿಕೊಡಲು ಕ್ರಮ ವಹಿಸಿದ್ದಾರೆ. ರಾಜ್ಯದ 8 ಲಕ್ಷ
ಜನ್ ಧನ್ ಖಾತೆ ತೆರೆಯಲಾಗಿದೆ. ಇದು ಸಹ ಒಂದು ದೊಡ್ಡ ಸಾಧನೆ. ಇಷ್ಟು ವರ್ಷ ದೇಶ ಆಳಿದವರಿಗೆ ರಾಮಮಂದಿರ ನಿರ್ಮಾಣ ಮಾಡಲು ಆಗಲಿಲ್ಲ. ಪ್ರಧಾನಿ ಅವರು ನುಡಿದಂತೆನಡೆದಿದ್ದಾರೆ. ರಾಮಮಂದಿರ ಇನ್ನೊಂದು ಅಥವಾ ಎರಡು ವರ್ಷಗಳಲ್ಲಿ ಪೂರ್ಣವಾಗಲಿದೆ. ಇದು ದೇಶದ ಜನತೆಗೆ ಮೋದಿ ಕೊಟ್ಟ ದೊಡ್ಡ ಉಡುಗೊರೆ ಎಂದು ವಿವರಿಸಿದರು.

ಸೇನೆಯ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಿದ್ದಾರೆ. ಈ ಮೂಲಕ ದೇಶಕ್ಕಾಗಿ ಪ್ರಾಣ ಅರ್ಪಿಸುವ ಯೋಧರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಶತ್ರು ರಾಷ್ಟ್ರಗಳು ತುಟಿಕ್ ಪಿಟಿಕ್ ಎನ್ನದಂತೆ ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಸರ್ಜಿಕಲ್ ಸ್ಟ್ರೈಕ್ ಉತ್ತಮ ಉದಾಹರಣೆ. ದೇಶದ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿರುವ ಮೋದಿ ಅವರು ಕೊರೊನಾ ಸಂಕಷ್ಟಕ್ಕೆ ಇಡೀ ವಿಶ್ವಕ್ಕೆ ನಲುಗಿ ಹೋಗಿದೆ. ದೇಶದ ಪ್ರತಿಯೊಬ್ಬರಿಗೂ ಉಚಿತ ವ್ಯಾಕ್ಸಿನ್, ಸೌಲಭ್ಯಗಳನ್ನು ನೀಡುವ ಮೂಲಕ ಜನರ ಹಿತ ಕಾಪಾಡಿದ್ದಾರೆ. ಹಣದುಬ್ಬರ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಶ್ರಮಿಸುತ್ತಿದ್ದಾರೆ. ದಿನಕ್ಕೆ 16 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಅವರು ಮಾತ್ರ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ನೀಡಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದೆ. ಇದೇ ರೀತಿಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಎಲ್ಲೆಲ್ಲಿ ನೀರಾವರಿ ಇಲ್ಲವೋ ಅಲ್ಲಿ ಕಲ್ಪಿಸುವ ಕನಸು ಇದೆ. ಉದ್ಯೋಗ ಸೃಷ್ಟಿ, ಕೈಗಾರಿಕೆ ತಂದು ಅಭಿವೃದ್ಧಿ,ಮೂಲಭೂತ ಸೌಲಭ್ಯಕ್ಕೆ ಆದ್ಯತೆ, ರೈತರ ಕಣ್ಣೀರು ಒರೆಸುವಂಥ ಯೋಜನೆ ಸೇರಿದಂತೆ ಹತ್ತು ಹಲವು ಕೆಲಸ ಮಾಡಬೇಕೆಂಬ ಗುರಿ ಹೊಂದಿದ್ದೇನೆ. ಇದು ಸಾಕಾರಗೊಳಿಸಲು ಅಧಿಕಾರ ಬೇಕು. ಇದು ಸಿಕ್ಕರೆ ರಾಜ್ಯವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮಾಜಿ ಸಿಎಂ ಯಡಿಯೂರಪ್ಪರು ಕೊಟ್ಟಿರುವ ಕೊಡುಗೆ ಅಪಾರ. ರೈತಾಪಿ ವರ್ಗದ ಬದುಕು ಹಸನುಗೊಳಿಸಿದವರು. ಭಾಗ್ಯಲಕ್ಷ್ಮಿ, ಮಕ್ಕಳಿಗೆ ಬೈಸಿಕಲ್, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಉತ್ತೇಜನ, 108 ಆ್ಯಂಬುಲೆನ್ಸ್ ಸೇರಿದಂತೆ
ಲೆಕ್ಕವಿಲ್ಲದಷ್ಟು ಕೊಡುಗೆ ನೀಡಿದ್ದಾರೆ. ಈಗಲೂ ಬಿಜೆಪಿಗೆ ಸಲಹೆ ನೀಡುತ್ತಾ, ಪಕ್ಷ ಅಧಿಕಾರಕ್ಕೆ ತರಲು ಓಡಾಡುತ್ತಿದ್ದಾರೆ. ಅವರ ಕಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಅನುದಾನ ನೀಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ರೈತರ ಅಕೌಂಟ್ ಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ವರ್ಷಕ್ಕೆ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡವರು. ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಎಂದರು.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ನೆರವು ನೀಡುವ ಕೆಲಸ ಮಾಡಿದ್ದಾರೆ. ಕಲ್ಬುರ್ಗಿಯಲ್ಲಿ ಲಂಬಾಣಿ ಸಮಾಜದ 50 ಸಾವಿರಕ್ಕೂ ಹೆಚ್ಚು ಸಮುದಾಯದ ಜನರಿಗೆ ಹಕ್ಕು ಪತ್ರ ನೀಡಿದ್ದಾರೆ. ಅದೇ ರೀತಿಯಲ್ಲಿ ದಾವಣಗೆರೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಬಂಜಾರ ಸಮುದಾಯದವರಿಗೆ ಮಾರ್ಚ್ ತಿಂಗಳಿನಲ್ಲಿ ಹಕ್ಕು ಪತ್ರ ನೀಡುವ ಘೋಷಣೆ ಮಾಡಲಾಗಿದೆ. ಮೀಸಲಾತಿ ಹೆಚ್ಚಳ, ಅನುದಾನ, ಅಭಿವೃದ್ಧಿ, ರೈತಪರ ಸರ್ಕಾರ ಇದು. ಹಾಗಾಗಿ ಜನರು ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಅಪೇಕ್ಷೆ ಪಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ನನಗೆ ಅವಕಾಶ ಸಿಕ್ಕರೆ ಮಾಯಕೊಂಡ ಕ್ಷೇತ್ರವು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಬೇಕೆಂಬ ಕನಸು ಇದೆ. ನಾನು ಸಹ ಎಂಜಿನಿಯರಿಂಗ್ ಓದಿದ್ದೇನೆ. ರಾಜಕಾರಣಕ್ಕೆ ವಿದ್ಯಾವಂತರು ಬರಬೇಕು ಎಂಬುದು ಹಿರಿಯರ, ಪ್ರಜ್ಞಾವಂತ ಮತದಾರರ ಬಯಕೆ. ಮಾಯಕೊಂಡ ಕ್ಷೇತ್ರದ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರ ಭೇಟಿ ಮತ್ತಷ್ಟು ಉತ್ಸಾಹ ತಂದಿದೆ. ಜೊತೆಗೆ ಮಾಯಕೊಂಡ ಕ್ಷೇತ್ರದ ಜನರು ತೋರುತ್ತಿರುವ ಪ್ರೀತಿಗೆ ಎಂದಿಗೂ ನಾನು ಋಣಿ ಆಗಿರುತ್ತೇನೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಜಿಲ್ಲಾ ಶೋಷಿತರ ಮುಖಂಡ ಬಾಡದ ಆನಂದರಾಜ್. ಮಾಜಿ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಕುರುಬ ಸಮಾಜದ ಮುಖಂಡ ಅಣಜಿ ತಿಪ್ಪೇಸ್ವಾಮಿ. ಲಿಂಗಾಯ್ತಾ ಸಮಾಜದ ಹಿರಿಯಾ ಮುಖಂಡ ರವೀಂದ್ರ.ತಾಲ್ಲೂಕು ಬಿಜೆಪಿ ಎಸ್ಟಿ ಮೋರ್ಚಾದ ಅದ್ಯಕ್ಷ ಪ್ಯಾಟಿ ಹನುಮಂತಪ್ಪ.ವಾಲ್ಮೀಕಿ ಸಮಾಜದ ಮುಖಂಡ ಲೋಕಿಕೆರೆ ರಾಮಸ್ವಾಮಿ.ಭೋವಿ ಸಮಾಜದ ಮುಖಂಡ ಎಸ್.ಜಿ.ಸೋಮಶೇಖರ್.ಲಿಂಗಾಯತ ಸಮಾಜದ ಹಿರಿಯಾ ಮುಖಂಡ ನಾಗರಾಜ್ ಹಿರಿಯಾ ಬಿಜೆಪಿ ಮುಖಂಡ ಬಿಟಿ.ಸಿದ್ದಪ್ಪ ಇನ್ನೂ ಮುಂತಾದವರಿದ್ದರು

Leave a Reply

Your email address will not be published. Required fields are marked *

error: Content is protected !!