ಅತ್ತು ಕರೆದಾದರೂ ಲಸಿಕೆ ಕೊಡಿಸುತ್ತೇನೆಂದು ಒಪ್ಪಿಕೊಂಡಿದ್ದೆ ಎಂಬುದಾಗಿ ಹೇಳಿರುವುದು ಸತ್ಯಕ್ಕೆ ದೂರ – ಮೇಯರ್ ಎಸ್ ಟಿ ವಿರೇಶ್ ಸ್ಪಷ್ಟನೆ

ದಾವಣಗೆರೆ: ತಾವು ಪ್ರತಿನಿಧಿಸುವ ವಾರ್ಡಿನಲ್ಲಿ ಕಾಂಗ್ರೆಸ್‍ನಿಂದ ಏರ್ಪಡಿಸಿದ್ದ ಕೊರೊನಾ ಲಸಿಕಾ ಶಿಬಿರಕ್ಕೆ ತಲುಪಬೇಕಿದ್ದ ಲಸಿಕೆಯನ್ನು ಸಂಸದ ಸಿದ್ದೇಶ್ವರ್ ಅವರಾಗಲೀ ಅಥವಾ ತಾವಾಗಲೀ ತಡೆದಿಲ್ಲ. ಲಸಿಕೆ ಹಂಚಿಕೆಯಲ್ಲಿ ಅಧಿಕಾರಿಗಳು ಮಾಡುತ್ತಿದ್ದ ಲೋಪ ಸರಿಪಡಿಸಿದ್ದೇವಷ್ಟೆ ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಸ್ಪಷ್ಟಪಡಿಸಿದರು.
ಸರ್ಕಾರದ ಲಸಿಕೆಯನ್ನು ಖಾಸಗಿ ಬ್ಯಾನರ್ ನಡಿ ಕಾಂಗ್ರೆಸ್‍ನಿಂದ ಕೊಡಲಾಗುತ್ತಿರುವ ಲಸಿಕೆಗೆ ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರಿ ಕೋಟಾದ ಲಸಿಕೆ ಖಾಸಗಿ ಬ್ಯಾನರ್‍ನಲ್ಲಿ ಕೊಡುವುದಕ್ಕೆ ಮಾತ್ರ ನಮ್ಮ ವಿರೋಧವಿದೆ ಎಂದು ಪರೋಕ್ಷವಾಗಿ ಶಾಮನೂರು ಕುಟುಂಬ ಸರ್ಕಾರಿ ಲಸಿಕೆಯನ್ನು ತಮ್ಮ ಹೆಸರಿನ ಬ್ಯಾನರ್ ನಲ್ಲಿ ನೀಡುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ನನಗೆ ಅಧಿಕಾರವಿದ್ದು, ನಾನು ಸಶಕ್ತನಾಗಿದ್ದೇನೆ. ಅತ್ತು ಕರೆದು ಲಸಿಕೆ ಕೊಡಿಸುವ ಸೀನೆ ಇಲ್ಲ. ಲಸಿಕೆ ಕೊಡಿಸುವ ಜವಾಬ್ದಾರಿ ನನಗೂ ಇದೆ ಎಂದು ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪದಲ್ಲಿ ಯಾವುದೇ ಹುರುಳಿಲ್ಲ.
-ಎಸ್ ಟಿ ವೀರೆಶ್ , ಮಹಾಪೌರರು – ದಾವಣಗೆರೆ ಮಹಾನಗರ ಪಾಲಿಕೆ
ಇತ್ತೀಚೆಗಷ್ಟೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಗರದ ಕೆ.ಬಿ ಬಡಾವಣೆಯ ಜನತೆಗೆ ಸಂಸದರ ಬಳಿ ಅತ್ತು ಕರೆದಾದರೂ 300 ಲಸಿಕೆ ತರುತ್ತೇನೆಂದು ಮೇಯರ್ ಹೇಳಿದ್ದರು ಎಂದು ಸ್ಪಷ್ಟನೆ ನೀಡಿದರು. ಕಾಂಗ್ರೆಸ್ ನವರು ನಾನು ಅತ್ತು ಕರೆದಾದರೂ ಲಸಿಕೆ ಕೊಡಿಸುತ್ತೇನೆಂದು ಒಪ್ಪಿಕೊಂಡಿದ್ದೆ ಎಂಬುದಾಗಿ ಹೇಳಿರುವುದು ಸತ್ಯಕ್ಕೆ ದೂರ. ನಾನು ಅತ್ತು ಕರೆದು ಲಸಿಕೆ ತರುವ ಸೀನೇ ಇಲ್ಲ. ನಾನು ಶಸಕ್ತನಿದ್ದೇನೆ, ಅಧಿಕಾರ ಇದೆ ವಾರ್ಡ್ ಜನರ ಸುರಕ್ಷತೆಗಾಗಿ ಲಸಿಕೆ ತರಿಸುವ ಜವಾಬ್ದಾರಿ ತಮಗೂ ಇದೆ ಎಂದು ತಿರುಗೇಟು ನೀಡಿದರು.
ನಾನು ಪ್ರತಿನಿಧಿಸುವ ಕ್ಷೇತ್ರವಾದ ಕೆ.ಬಿ. ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಏರ್ಪಡಿಸಿದ್ದ ಲಸಿಕಾ ಶಿಬಿರಕ್ಕೆ ನಾನು 300 ಡೋಸ್ ಲಸಿಕೆ ಕೊಡಿಸುತ್ತೇನೆಂದು ಒಪ್ಪಿರಲಿಲ್ಲ. ಆದರೆ, ಕಾಂಗ್ರೆಸ್ ನಾಯಕರು ತಪ್ಪು ಸಂದೇಶ ರವಾನೆ ಮಾಡಿ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಉಚಿತ ಲಸಿಕಾ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ. ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ, ಪರಸ್ಪರ ಕೆಸರೆರಚಾಟದಿಂದ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಲಿದೆ. ಹೀಗಾಗಿ, ಲಸಿಕೆ ನೀಡುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾಪ್ರಕಾಶ, ಎಲ್.ಡಿ.ಗೋಣೆಪ್ಪ, ಸದಸ್ಯರಾದ ಪ್ರಸನ್ನ ಕುಮಾರ್, ಗಾಯತ್ರಿಬಾಯಿ, ಸೋಗಿ ಶಾಂತಕುಮಾರ್, ಆರ್.ಶಿವಾನಂದ ಮತ್ತಿತರರಿದ್ದರು.