ದಾವಣಗೆರೆಯ ಬಾತಿ, ಕುಂದುವಾಡ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮೇಯರ್ ಭೇಟಿ
ದಾವಣಗೆರೆ: ನಗರದ ಕುಡಿಯುವ ನೀರಿನ ಸೆಲೆಯಾದ ಬಾತಿ ಶುದ್ಧ ನೀರಿನ ಘಟಕ ಹಾಗೂ ಕುಂದುವಾಡ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಆಡಳಿತ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಾಲಿಕೆಯ ಹಿರಿಯ ಸದಸ್ಯ ಕೆ. ಚಮನ್ ಸಾಬ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಉಮೇಶ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರ ವಹಿಸುವಂತೆ ಮೇಯರ್ ವಿನಾಯಕ್ ಪೈಲ್ವಾನ್ ಸೂಚನೆ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಪೂರೈಕೆಯಾಗುವ ನೀರಿನ ವಿಚಾರದಲ್ಲಿ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಿ. ಬಾತಿ ಹಾಗೂ ಕುಂದುವಾಡ ಶುದ್ಧ ಕುಡಿಯು ನೀರಿನ ಘಟಕದಲ್ಲಿ ಸಣ್ಣ ಪುಟ್ಟ ಲೋಪವಾದರೂ ಗಮನಕ್ಕೆ ತನ್ನಿ ಎಂದರು.
ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಿ:
ಯಾವುದೇ ಕಾರಣಕ್ಕೂ ಮುಚ್ಚಿಡಬಾರದು. ಮಳೆಗಾಲ ಇದ್ದರೂ ಸಂಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹ ಇಲ್ಲ. ಈ ವೇಳೆ ಮೋಟಾರ್ ಸೇರಿದಂತೆ ಘಟಕದಲ್ಲಿ ಯಾವುದೇ ರೀತಿಯ ಲೋಪ ಆಗಂದತೆ ನೋಡಿಕೊಳ್ಳಿ ಎಂದು ವಿನಾಯಕ ಪೈಲ್ವಾನ್ ಹೇಳಿದರು.
ಕುಂದುವಾಡ ಕೆರೆ ಹಾಗೂ ಟಿ. ವಿ. ಸ್ಟೇಷನ್ ಗೆ ಇನ್ನೂ ನೀರು ಬಂದಿಲ್ಲ. ಭದ್ರಾ ಡ್ಯಾಂನಿಂದ ನೀರು ಹರಿಸಿದರೆ ಇಲ್ಲಿಗೆ ಬರುತ್ತದೆ. ಈಗಿರುವ ಪ್ರಮಾಣ ಕಡಿಮೆ ಇದೆ. ಕುಂದುವಾಡ ಕೆರೆಯಲ್ಲಿ ಒಂದೂವರೆಯಿಂದ ಎರಡು ಮೀಟರ್ ನಷ್ಟು ನೀರು ಸಂಗ್ರಹವಿದೆ. ಭದ್ರಾ ಡ್ಯಾಂ ಈಗ 164 ಅಡಿ ದಾಟಿದ್ದು, ನೀರು ಬಿಡುವ ಸಾಧ್ಯತೆ ಇದೆ. ಈ ನೀರು ಬಂದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬಾತಿಯಲ್ಲಿ ನೀರು ಸಂಗ್ರಹವಿದ್ದು, ಸದ್ಯಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಿಳಿಸಿದರು.
ನೀರಿನ ಸಂಗ್ರಹ ಇದ್ದು, ತುಂಗಾಭದ್ರಾ ನದಿ ನೀರಿಗೆ ಯಥೇಚ್ಛ ನೀರು ಬಂದಿರುವ ಕಾರಣ ನೀರು ಬಂದಿದೆ. ನೀರು ಪೂರೈಕೆಯಾಗುವಾಗ ಎಲ್ಲಿಯೂ ಪೈಪ್ ಒಡೆದು ಹೋಗದಂತೆ ಎಚ್ಚರ ವಹಿಸಿ. ಒಂದು ವೇಳೆ ಪೈಪ್ ಹೊಡೆದು ಹೋಗಿದೆ ಎಂಬ ಮಾಹಿತಿ ಸಿಕ್ಕಿದ ಕೂಡಲೇ ಕೂಡಲೇ ಸ್ಪಂದಿಸಿ. ನೀರು ಪೋಲಾಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುದ್ಧ ನೀರಿನ ಘಟಕಗಳು ಕಾರ್ಯಾಚರಿಸುತ್ತಿರಬೇಕು. ಸ್ವಲ್ಪ ಸಮಸ್ಯೆಯಾದರೂ ಜನರಿಗೆ ತೊಂದರೆಯಾಗುತ್ತದೆ. ಯಾವ ವಾರ್ಡ್ ಗಳಲ್ಲಿಯೂ ದೂರು ಬಾರದಂತೆ ಕೆಲಸ ನಿರ್ವಹಿಸಿ. ಜನರಿಗೆ ಕುಡಿಯುವ ನೀರು ಮುಖ್ಯ. ಕೆಲವೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಆದ ನಿದರ್ಶನಗಳಿವೆ. ಇನ್ನು ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. ಭದ್ರಾ ಡ್ಯಾಂಗೂ ಹೆಚ್ಚು ಕ್ಯೂಸೆಕ್ ನೀರು ಬಂದಿದೆ. ಇನ್ನು ಮುಂದಿನ ದಿನಗಳಲ್ಲಿಯೂ ಮಳೆ ಇದೆ. ಹಾಗೆಂದ ಮಾತ್ರಕ್ಕೆ ಮೈಮರೆಯಬಾರದು. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಯಾವುದೇ ತೊಂದರೆಯಾಗದಂತೆ ನೀರಿನ ಪೂರೈಕೆ ಮಾಡಿ. ಶುದ್ಧ ನೀರಿನ ಘಟಕಗಳಲ್ಲಿಯೂ ನಿಗಾ ವಹಿಸಿ ಎಂದು ಸಲಹೆ ನೀಡಿದರು.
ಭೇಟಿ ವೇಳೆ ಕೆ. ಚಮನ್ ಸಾಬ್, ಜಗದೀಶ್, ಉಮೇಶ್, ಮಹಾನಗರ ಪಾಲಿಕೆಯ ಎಇಇ ಸಚಿನ್ ಮತ್ತಿತರರು ಹಾಜರಿದ್ದರು.