ಅಧಿಕಾರದಲ್ಲಿದ್ದಾಗ ಚಕಾರ ಎತ್ತಲಿಲ್ಲ, ಕ್ರಮ ಕೈಗೊಳ್ಳಲಿಲ್ಲ, ಯಾಕೆ ? : ಗಡಿಗುಡಾಳ್ ಮಂಜುನಾಥ್
ದಾವಣಗೆರೆ: ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ದಾಖಲೆ ಇಟ್ಟು ಆರೋಪ ಮಾಡಬೇಕು. ಕೇಂದ್ರ, ರಾಜ್ಯ, ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದರೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಿಲ್ಲ. ಎಂದು ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಅವರು ಪಾಲಿಕೆ ಮಾಜಿ ಮೇಯರ್ ಉಮಾ ಪ್ರಕಾಶ್ ಅವರಿಗೆ ಪ್ರಶ್ನಿಸಿದ್ದಾರೆ.
2017ರಿಂದ 18ರವರೆಗೆ ಈಗಿನ 32 ಹಾಗೂ ಅಂದಿನ 35ನೇ ವಾರ್ಡ್ ನ ಆವರಗೆರೆ ಸರ್ವೆ ನಂಬರ್ 240ರಿಂದ 244ರಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆ ಸಮೇತ ನೀಡಿರುವುದಾಗಿ ಉಮಾ ಪ್ರಕಾಶ್ ಹೇಳಿದ್ದಾರೆ. 2018ರಿಂದ 2023ರವರೆಗೆ ಯಾಕೆ ಸುಮ್ಮನಿದ್ದರು ಎಂಬುದು ಯಕ್ಷಪ್ರಶ್ನೆ ಎಂದಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಅವರದ್ದೇ ಪಕ್ಷದವರಿದ್ದರು. ಪಾಲಿಕೆಯಲ್ಲೂ ಬಿಜೆಪಿ ಅಧಿಕಾರದಲ್ಲಿ ಇತ್ತು. ಇಷ್ಟೆಲ್ಲಾ ಅಧಿಕಾರ ಇದ್ದರೂ ಆಗ ದಾಖಲೆ ನೀಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಯಾಕೆ ಹೋರಾಟ ಮಾಡಲಿಲ್ಲ. ಕೇವಲ ಸಭೆ, ಪತ್ರಿಕಾ ಹೇಳಿಕೆ ನೀಡಿದರೆ ಆಗುತ್ತಾ. ತಮ್ಮದೇ ಆಡಳಿತ ಇದ್ದಾಗ ನಾಮಕಾವಸ್ಥೆ ಮಾತ್ರಕ್ಕೆ ಆರೋಪ ಮಾಡಿದ್ದಾರೆ. ಇದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ದೂಡಾದಲ್ಲಿಯೂ ಅವರ ಪಕ್ಷದವರೇ ಅಧ್ಯಕ್ಷರಿದ್ದರೂ ಯಾಕೆ ಕ್ರಮ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾದ ಬಳಿಕ ಬಿಜೆಪಿಯ ಒಂದೊಂದೇ ಹಗರಣಗಳು ಹೊರಗೆ ಬರುತ್ತಿವೆ. ಈಗಾಗಲೇ ತನಿಖೆ ನಡೆಯುತ್ತಿದೆ. ಕೇವಲ 32 ನೇ ವಾರ್ಡ್ ನಲ್ಲಿನ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದಿತವಾಗಿರುವ ನಕಾಶೆ ಪ್ರಕಾರ ಬಿಟ್ಟಿರುವ ಬಯಲು ಜಾಗಕ್ಕೆ ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ದುಪಡಿಸಿ ಎಂಬ ಆಗ್ರಹ ಮಾಡಿರುವ ಉಮಾಪ್ರಕಾಶ್ ಅವರು ಕಳೆದ ಐದು ವರ್ಷಗಳಲ್ಲಿ ಯಾಕೆ ಪರಿಣಾಮಕಾರಿಯಾಗಿ ಇದೇ ವಿಚಾರಕ್ಕೆ ಬೀದಿಗಿಳಿದು ಹೋರಾಟ ಮಾಡಿಲ್ಲ. ಅವರದ್ದೇ ಸರ್ಕಾರ ಅಧಿಕಾರದಲ್ಲಿದ್ದರೂ ಕ್ರಮ ಯಾಕೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.