ಸರ್ಕಾರದಿಂದ ಮಂಜೂರಾಗಿರುವ ಭೂಮಿ ಕೊಡಿಸುವ ಭರವಸೆ ನೀಡಿದ ಶಾಸಕರು
ದಾವಣಗೆರೆ: ಮೂಲ ಸೌಕರ್ಯದ ಕೊರತೆ ಕಾಣುತ್ತಿರುವ ಸರ್ಕಾರಿ ಕಾಲೇಜಿಗೆ ಸರ್ಕಾರದಿಂದ ಮೂರು ಎಕರೆ ಜಮೀನು ಮಂಜೂರಾಗಿದೆ. ಕೆಲ ಸಣ್ಣಪುಟ್ಟ ತೊಂದರೆ ಉಂಟಾಗಿದೆ. ಸರ್ಕಾರದ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಆಗಿದ್ದು ಸರ್ಕಾರಿ ಕಾಲೇಜಿಗೆ ಭೂಮಿ ಲಭಿಸುವುದು ಎಂದು ಶಾಸಕ ಎಸ್.ಎ ರವೀಂದ್ರನಾಥ್ ಭರವಸೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 2022-23 ನೇ ಶೈಕ್ಷಣಿಕ ಸಾಲಿನ ಕ್ರೀಡಾ ಎನ್.ಎಸ್.ಎಸ್, ಎನ್.ಸಿಸಿ, ರೆಡ್ ಕ್ರಾಸ್, ಸ್ಕೌಟ್ ಮತ್ತು ಗೈಡ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನಡೆಸಿ ಮಾತನಾಡಿದರು.
ಡಿಆರ್ ಆರ್ ಕಾಲೇಜಿಗೆ ಹೊಲಿಸಿದರೆ ಇಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕಾಲೇಜಿನಲ್ಲಿ ಅನೇಕ ಮೂಲ ಕೊರತೆ ಇದೆ. ಮೈದಾನ, ಕೊಠಡಿ ಹಾಗೂ ಸೌಕರ್ಯಗಳ ಸೌಲಭ್ಯಗಳು ಬೇಕಾಗಿದೆ. ಇದನ್ನು ಮನಗಂಡು ಸರ್ಕಾರ ಮೂರು ಎಕರೆ ಜಾಗ ಮಂಜೂರು ಮಾಡಿದೆ. ಡಿ.ಆರ್.ಆರ್ ಕಾಲೇಜಿನ ಆಡಳಿತಗಾರರಿಗೆ ಜಾಗದ ಮೇಲೆ ಪ್ರೀತಿ ಜಾಸ್ತಿ ಹೀಗಾಗಿ ಬಿಟ್ಟುಕೊಡಲು ಹಿಂದೇಟು ಹಾಕಿರಬಹುದು. ಸರ್ಕಾರದ ಆದೇಶ ಪಾಲನೆ ಮಾಡಬೇಕು, ಇದಕ್ಕಾಗಿಯೇ ಕಾನೂನು ಇದೆ. ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಆಗಿದೆ. ಹೀಗಾಗಲೇ ಕಾಲೇಜಿನ ಹಳೇಯ ವಿದ್ಯಾರ್ಥಿಗಳು ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮಂಜೂರಾದ ಭೂಮಿ ಲಭಿಸುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಆಟ ಪಾಠ ಎರಡರಲ್ಲು ಕಾಲೇಜಿಗೆ ಮತ್ತಷ್ಟು ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ ಕುಂಬಾರ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಹಂತಗಳನ್ನು ತಿಳಿಸಿಕೊಟ್ಟರು. ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಓಂ.ಪ್ರಕಾಶ್ ರಾಜೋಳಿ ಮಾತನಾಡಿದ ವಿದ್ಯಾರ್ಥಿ ಜೀನವದಲ್ಲಿ ಓದಿನ ಜತೆಗೆ ಕ್ರೀಡೆಯು ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ಜ್ಞಾನವಂತರಾಗಿ ಸಮಾಜ ಪರಿವರ್ತನೆಯತ್ತ ಚಿತ್ತ ಹಾಕಬೇಕು ಎಂದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮಪ್ರಸಾದ್ ಮಾತನಾಡಿ ಕಾಲೇಜಿನಲ್ಲಿ ಅನೇಕ ಮೂಲ ಸೌಕರ್ಯ ಕೊರತೆ ಇದೆ. ಆಟದ ಮೈದಾನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದೆ. ನಮ್ಮ ಕಾಲೇಜಿಗೆ ಈಗಾಗಲೇ ಸರ್ಕಾರದಿಂದ ಜಮೀನು ಮಂಜೂರಾಗಿದ್ದು ಮಂಜೂರಾದ ಜಮೀನು ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಇದರಿಂದ ಜಿಲ್ಲಾಡಳಿತಕ್ಕೆ ಹಾಗೂ ಪಾಲಿಕೆ ಕಮಿಷನರ್ ಅವರಿಗೆ ಮಂಜೂರಾದ ಜಮೀನು ವಿವಾದ ಪರಿಹರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಅಂಜನಪ್ಪ ಎಸ್.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಲತಾ ಎಸ್.ಎಂ ಪ್ರಾಸ್ತವಿಕವನ್ನಾಡಿದರು. ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೊಟ್ರಪ್ಪ ಸಿ.ಕೆ, ಡಾ.ನಾರಾಯಣ ಸ್ವಾಮಿ, ಗೀತಾದೇವಿ ಟಿ, ಡಾ.ಯೇಸುದಾಸ್ ಎಂ, ಡಾ.ರೇಖಾ ಎಂ.ಆರ್, ಡಾ.ಜಿ.ಸಿ ಸದಾಶಿವಪ್ಪ ಗುರುದೇವ್ ಎಂ.ಎಸ್, ಡಾ.ಶಿವಕುಮಾರ್ ಕೆ, ನಟರಾಜ್ ಜಿ.ಆರ್, ಡಾ.ಯಶೋಧ ಆರ್, ಹಳೇ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎ. ನವೀನ್ ಕುಮಾರ್ ಸೇರಿದಂತೆ ಹಲವರಿದ್ದರು.
ಇದೇ ವೇಳೆ ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಅರ್ಥ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಬಿ.ಬಿ ಸುಣಗಾರ್ ಸ್ವಾಗತಿಸಿದರು, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಗೌರಮ್ಮ ಎಸ್.ಎಂ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಸುನೀತಾ ಕೆಬಿ ವಂದಿಸಿದರು.