ಭಾವುಕರಾಗಿ ಕಣ್ಣೀರು ಹಾಕಿದ ಮುರುಗೇಶ್ ನಿರಾಣಿ.!
ದಾವಣಗೆರೆ: ಜಯಮೃತ್ಯುಂಜಯ ಸ್ವಾಮೀಜಿಗಳ ಪಂಚಮಸಾಲಿ ಮೀಸಲಾತಿ ಹೋರಾಟದ ಹಿಂದೆ ಸಂಪೂರ್ಣ ರಾಜಕೀಯ ಕೈವಾಡ ಇದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಆರೋಪಿಸಿದ್ದಾರೆ.
ಶನಿವಾರ ನಗರದ ಜಿಎಂಐಟಿ ಕಾಲೇಜು ಹೆಲಿಪ್ಯಾಡಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ನಮ್ಮ ಬಿಜೆಪಿ ಸರ್ಕಾರ ಅತಿಹೆಚ್ಚು ಉತ್ತಮ ಹೆಜ್ಜೆಗಳನ್ನು ಇಟ್ಟಿದೆ. ಆದರೂ ಇದನ್ನು ಅರ್ಥ ಮಾಡಿಕೊಳ್ಳದ ಆ ಸ್ವಾಮೀಜಿಗಳು ಬಾರುಕೋಲು ಚಳವಳಿ ಮಾಡುವುದು, ಸಿಎಂ ಮನೆಗೆ ಮುತ್ತಿಗೆ ಹಾಕುವುದು ಮಾಡಿದರೆ ಅದಕ್ಕೆ ಏನು ಅರ್ಥ.? ಅವರ ಹೋರಾಟದ ಹಿಂದೆ ಸಂಪೂರ್ಣ ರಾಜಕೀಯ ಇದೆ ಎಂದರು.
ಈ ಹಿಂದಿನ ಸರ್ಕಾರದಲ್ಲಿದ್ದ ಅವರು 5 ವರ್ಷ ಆಡಳಿತ ನಡೆಸಿದರೂ ಮೀಸಲಾತಿ ಬಗ್ಗೆ ಒಂದೇ ಒಂದು ಚಕಾರವನ್ನು ಆ ಸ್ವಾಮೀಜಿ ಎತ್ತಲಿಲ್ಲ. ಆದರೆ ನಮ್ಮ ಸರ್ಕಾರ ಲಿಂಗಾಯತ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಹೀಗೆ ಕೊಟ್ಟ ಸರ್ಕಾರಕ್ಕೆ ಅವರು ತಿರುಗಿ ಬೀಳುತ್ತಿದ್ದಾರೆ. ಇದನ್ನು ರಾಜ್ಯದ ಜನ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರು.
ವಾಲ್ಮೀಕಿ ಗುರುಗಳು ಮತ್ತು ಸಮಾಜ, ಎಸ್ಸಿ ಸಮಾಜದ ಗುರುಗಳು ಮತ್ತು ಸಮಾಜ ಎಷ್ಟು ಶಾಂತಿಯುತವಾಗಿ ಹೋರಾಟ ಮಾಡಿ ಮೀಸಲಾತಿ ಪಡೆದುಕೊಂಡರು. ಆದರೆ ನಮ್ಮವರು ಏನು ಮಾಡುತ್ತಿದ್ದಾರೆ. ಬಾರುಕೋಲು ತಗೊತಿವಿ ಅನ್ನೋದು, ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ ಅನ್ನೋದು. ಮಂತ್ರಿ ಮಂಡಲದಲ್ಲಿರುವವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು. ಈ ರೀತಿ ವ್ಯತ್ಯಾಸಗಳನ್ನು ನೋಡಿದರೆ ಶೇ.100 ರಷ್ಟು ರಾಜಕೀಯ ಇರುವುದು ಸತ್ಯ.
ಮುಂಬರುವ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಹೇಳುವುದು ಇದೆ. ಮುಂದಿನ ಸಲ ಬಂದಾಗ ಹೇಳುವುದಾಗಿ ತಿಳಿಸಿದರು.ದೀಪ ಆರುವ ಮುನ್ನ ತುಂಬಾ ಡಾಳಾಗಿ ಉರಿಯುತ್ತದೆಯಂತೆ ಎಂದು ಶಾಸಕ ಬವಸಗೌಡ ಪಾಟೀಲ್ ಯತ್ನಾಳ್ ಅವರ ಕುರಿತ ಪ್ರಶ್ನೆಗೆ ಸಚಿವ ಮುರುಗೇಶ್ ನಿರಾಣಿ ಉತ್ತರಿಸಿದರು. ಈ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ವಿಜಯ ಸಂಕೇಶ್ವರ್ ಸೇರಿದಂತೆ ಅನೇಕರ ಬಗ್ಗೆ ಹಗುರವಾಗಿ ಮಾತನಾಡಿ, ನಂತರ ನ್ಯಾಯಾಲಯಕ್ಕೆ ಹೋಗಿ ಕಾಲು ಹಿಡಿದುಕೊಂಡು ಹೊರಗೆ ಬಂದ ಉದಾಹರಣೆಗಳಿವೆ ಎಂದರು.
ಈ ಸಂದರ್ಭದಲ್ಲಿ ಭಾವುಕರಾಗಿ ತಮ್ಮ ಕಣ್ಣಲ್ಲಿ ಹನಿ ನೀರು ಬಂದಿದ್ದು ಹಾಗೇ ತಮ್ಮಲ್ಲಿದ್ದ ಭಾವುಕತೆಯನ್ನ ತೋರಿಸಿಕೊಳ್ಳದೆ ಮಾತನಾಡಿದ ಸಚಿವ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಅಸಂವಿಧಾನಿಕ ಮಾತುಗಳನ್ನು ಆಡುತ್ತಿದ್ದಾರೆ. ಸಿದ್ದೇಶ್ವರ ಸ್ವಾಮಿಗಳ ಸನ್ನಿದಿಯಲ್ಲಿ ಬೆಳೆದವರು ನಾವು, ಘಟಪ್ರಭಾ, ಮಲಪ್ರಭಾ ನೀರನ್ನು ನಾವು ಕುಡಿದಿದ್ದೇವೆ ಎಂದರು.
ಸಿದ್ದೇಶ್ವರ ಸ್ವಾಮಿಗಳ 0.5 ರಷ್ಟಾದರೂ ಅನುಕರಿಸಿದರೆ ಸಾಕು ನಮ್ಮ ಬದುಕು ಪಾವನವಾಗುತ್ತದೆ. ನಾನಾಗಿಯೇ ಎಂದೂ ಕೂಡ ಅವರ ವಿರುದ್ಧ ಮಾತನಾಡಿಲ್ಲ. ಅವರ ಹೇಳಿಕೆಗೆ ಉತ್ತರ ನೀಡಿದ್ದೇನೆ ಅಷ್ಟೇ. ಇಲ್ಲಿತನಕ ಅವರನ್ನು ಸಹಿಸಿಕೊಂಡಿದ್ದು ಆಗಿದೆ. ಇನ್ನು ಮುಂದೆ ನಿರ್ಧಾರ ಕೈಗೊಳ್ಳುತ್ತಿದ್ದೇವೆ ಎಂದರು. ಅವರೇನೂ ಸತ್ಯ ಹರಿಶ್ಚಂದ್ರರಲ್ಲ, ದೀಪ ಆರುವಾಗ ಜೋರಾಗಿ ಉರಿಯುತ್ತದಂತೆ, ಸ್ವಲ್ಪ ಕಾದು ನೋಡಿ ಏನೇನಾಗುತ್ತದೆ. ದೊಡ್ಡ ಸಮಾಜದಲ್ಲಿ ಹುಟ್ಟಿ, ಆ ಸಮಾಜದಲ್ಲಿ ಏನೇನಾಗುತ್ತದೆ, ನಡೆಯುವಂತಹದ್ದರ ಬಗ್ಗೆ, ಮುಂದಿನ ಪೀಳಿಗೆ ಅನುಕರಣೆ ಆಗುವಂತೆ ನಾವು ಬಾಳಬೇಕು. ತನಗೇನೂ ಸಿಗಲಿಲ್ಲವೆಂದು ಮತ್ತೊಬ್ಬರ ಮೇಲೆ ಗೂಬೆ ಕೂಡಿಸಬಾರದು. ಏಳೂವರೆ ಕೋಟಿ ಜನ ಗಮನಿಸುತ್ತಾರೆ. ನಾನು ಮಾತನಾಡಿದ್ದರೆ ಅದು ನನ್ನ ವಿರುದ್ಧ ಆಡಿದ್ದ ಮಾತು, ಪ್ರಶ್ನೆಗಳಿಗೆ ಉತ್ತರ ಅಷ್ಟೇ. ಅದು ನನ್ನ ಶಬ್ಧಗಳಲ್ಲ. ನಾನು ಸುಸಂಸ್ಕೃತ ಪಕ್ಷ, ಮನೆತನದಿಂದ ಬಂದವನು. ಸುಸಂಸ್ಕೃತ ಮಾರ್ಗದರ್ಶನ ನೀಡುವ ಪರಿವಾರದ ಹಿನ್ನೆಲೆಯಿಂದ ಬಂದವನು ಎಂದು ಮುರುಗೇಶ ನಿರಾಣಿ ತಿರುಗೇಟು ನೀಡಿದರು.