ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಯಕ್ಷಗಾನ, ರಂಗಭೂಮಿ, ಹಗಲು ವೇಷದಾರಿಗಳು, ದೊಡ್ಡಾಟ, ಚಿಕ್ಕಮೇಳ ಕಲಾವಿದರು

ದಾವಣಗೆರೆ : ಲಾಕ್‌ಡೌನ್ ಹಿನ್ನೆಲೆಯಲ್ಲಿ ರಂಗಭೂಮಿ, ಹಗಲು ವೇಷದಾರಿಗಳು, ದೊಡ್ಡಾಟ, ಚಿಕ್ಕಮೇಳ ಸೇರಿದಂತೆ ಎಲ್ಲಾ ಕಲಾವಿದರ ಬಾಳು ಬೀದಿ ಪಾಲಾಗುತ್ತಿರುವುದು ದುರ್ದೈವ. ಕರ್ನಾಟಕ ಸರ್ಕಾರದ `ಸೇವಾ ಸಿಂಧು’ ಧನ ಸಹಾಯಕ್ಕೆ ಹಲವು ಅವಿದ್ಯಾವಂತ ಬಡ ಕಲಾವಿದರಲ್ಲಿ ಸೂಕ್ತ ದಾಖಲಾತಿ ಇಲ್ಲದೇ ಅವರುಗಳು ಈ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಅದರಲ್ಲೂ ಕರ್ನಾಟಕ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ ಅಪ್ಪಟ ಕನ್ನಡ ಜನಪದ ಪುರಾತನ ಆರಾಧನ ಕಲೆ ಯಕ್ಷಗಾನ ಮೇಳಗಳ ಪ್ರಸಾದನ ಕಲಾವಿದರು ನಿರ್ಲಕ್ಷಕ್ಕೆ ಒಳಗಾಗುತ್ತಿದ್ದು ಅವರ ಜೀವನವಂತೂ ಮೂಲೆಗುಂಪಾಗುತ್ತಿರುವುದು ದುರಂತ. ಯಕ್ಷಗಾನ ಮೇಳಗಳಲ್ಲಿ ಪ್ರಸಾದನ ಕಲಾವಿದರದ್ದು ತೆರೆಮರೆಯಲ್ಲಿ ತುಂಬಾ ಕಠಿಣ ಪರಿಶ್ರಮದ ಕಾಯಕ. ಹಗಲು-ರಾತ್ರಿ ವೇಷಭೂಷಣ ಪರಿಕರಗಳ ನಿರ್ವಹಣೆ, ಚೌಕೀಯಲ್ಲಿ (ಗ್ರೀನ್ ರೂಂ) ಪ್ರತೀ ಯಕ್ಷಗಾನ ಪ್ರದರ್ಶನಕ್ಕೆ ದೇವರ ಪೆಟ್ಟಿಗೆ ಪೂಜಾ ಕೈಂಕರ್ಯ ಹಲವು ದೇವಸ್ಥಾನಗಳ ಆಶ್ರಯದಲ್ಲಿರುವ ಮೇಳಗಳ ಚಿನ್ನ, ಬೆಳ್ಳಿ ದೇವರ ವಿಗ್ರಹಗಳನ್ನು ಕಾಯುವುದು ಅದನ್ನು ಜೋಪಾನ ಮಾಡಿ ಅದರೊಂದಿಗೆ ಎಲ್ಲಾ ಯಕ್ಷಗಾನ ಕಲಾವಿದರ ಉಡುಗೆ, ತೊಡುಗೆಗಳನ್ನು ಪ್ರದರ್ಶನಕ್ಕೆ ಮೊದಲು ಪ್ರದರ್ಶನ ನಂತರ ಶುಚಿಗೊಳಿಸಿ ಸಂಗ್ರಹಿಸುವುದು ಬಿಡುವಲ್ಲದ ಕಾಯಕದ ಈ ಪ್ರಸಾದನ ಕಲಾವಿದರಿಗೆ ಆರ್ಥಿಕವಾಗಿ ದತ್ತಿ ಇಲಾಖೆ, ಮುಜರಾಯಿ ಇಲಾಖೆ ಕೈಜೋಡಿಸಬೇಕಾಗಿದೆ.

ಖ್ಯಾತ ಯಕ್ಷಗಾನ ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯ, ಯಕ್ಷದ್ರುವ ಪಾಟ್ಲ ಫೌಂಡೇಷನ್ ಸೇರಿದಂತೆ ಅನೇಕ ಸಂಘಟನೆಗಳು ತಮ್ಮ ಕೈಲಾದಷ್ಟು ಆಹಾರದ ಕಿಟ್ ವಿತರಣೆಯೊಂದಿಗೆ ಕಲಾವಿದರಿಗೆ ಆಶ್ರಯ ನೀಡುತ್ತಿದ್ದರಾದರೂ ಎಲ್ಲಾ ಯಕ್ಷಗಾನ ಮೇಳಗಳು (ಯಕ್ಷಗಾನ ಸಂಘಟನೆಗಳಿಗೆ ಮೇಳ ಎಂದು ಕರೆಯುತ್ತಾರೆ) ವಿವಿಧ ಪ್ರಸಿದ್ಧ ಶ್ರೀ ಕ್ಷೇತ್ರಗಳ ದೇವರುಗಳ ಕೃಪಾಪೋಷಿತವಾಗಿ ಇರುವ ಕಾರಣ ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳೂ ಧನ ಸಹಾಯ ಮಾಡಬಹುದು. ಶತ, ಶತಮಾನಗಳಿಂದ ದೇವರ ಹರಕೆಯ ಯಕ್ಷಗಾನ ಪ್ರದರ್ಶನಗಳಿಂದ ದೇವಸ್ಥಾನಗಳಿಗೆ ಸಾಕಷ್ಟು ಆದಾಯ ಬರುತ್ತಿರುವುದು ನಗ್ನ ಸತ್ಯ. ಈ ಹಂತದಲ್ಲಿ ದೇವಾಲಯಗಳ ಆಡಳಿತ ಮಂಡಳಿಗಳು ಸರ್ಕಾರದ ಅನುದಾನಕ್ಕಾಗಿ ಕಾಯದೇ ಯಕ್ಷಗಾನ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿದರೆ ಅದೂ ದೇವರ ಪೂಜೆಯೇ ಎಂದು ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರು, ಹವ್ಯಾಸಿ ಯಕ್ಷಗಾನ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!