ನಿರ್ಭಾವದಿಂದ ಭಾವನೆಗಳನ್ನು ಗೆದ್ದ ಕಲಾವಿದ ಬಿ.ಆರ್.ಕೊರ್ತಿ — ಬಾ.ಮ.ಬಸವರಾಜಯ್ಯ

 

ಸರಳ ವ್ಯಕ್ತಿತ್ವದ ಮಹಾನ್ ಕಲಾವಿದ ಬಿ.ಆರ್.ಕೊರ್ತಿ.
ಕುಂಚ ಬ್ರಹ್ಮ ಬಿಆರ್ ಕೊರ್ತಿಯವರ ನಿಧನ ಚಿತ್ರ ಕಲಾ ಲೋಕಕ್ಕೆ ತುಂಬಲಾರದ ನಷ್ಟ.
— ಎ.ಮಹಾಲಿಂಗಪ್ಪ, ಚಿತ್ರ ಕಲಾವಿದ‌.

ಸದಾ ಕಾಲ ಅಂತರ್ಮುಖಿಯಾಗಿದ್ದ ಬಿ.ಆರ್.ಕೊರ್ತಿಯವರು ತನ್ನ ನಿರ್ಭಾವ ಗುಣಗಳಿಂದಲೇ ಭಾವನೆಗಳನ್ನು ಗೆದ್ದ ಕಲಾವಿದರಾಗಿದ್ದರು. ತಮ್ಮ ಭಾವನೆಗಳನ್ನು ತಮ್ಮ ಚಿತ್ರಗಳ ಮೂಲಕವೇ ಹೊರಹಾಕುತ್ತಿದ್ದಂತಹ ಅದ್ಭುತ ಕಲಾವಿದ ಅವರಾಗಿದ್ದರು ಎಂದು ಸಾಹಿತಿ, ಪತ್ರಕರ್ತ ಬಾ.ಮ.ಬಸವರಾಜಯ್ಯ ಅವರು ಅಭಿಪ್ರಾಯಪಟ್ಟರು. ಅಗಲಿದ ಕಲಾವಿದ ಬಿ.ಆರ್.ಕೊರ್ತಿಯವರ ಗೌರವಾರ್ಥ ಅವರ ಅಭಿಮಾನಿಗಳು, ಒಡನಾಡಿಗಳು ಹಾಗೂ ಶಿಷ್ಯವರ್ಗದವರಿಂದ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ವಿದ್ಯಾ ನಗರದ ದಾವಣಗೆರೆ ಕಲಾ ಪರಿಷತ್ತಿನ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಕೊರ್ತಿಯವರ ಬಹುಕಾಲದ ಒಡನಾಡಿ ಮತ್ತು ಕಲಾವಿದ ಎ.ಮಹಾಲಿಂಗಪ್ಪ ಅವರು ಮಾತನಾಡಿ ಬಿ.ಆರ್.ಕೊರ್ತಿಯವರು ಸರಳ ವ್ಯಕ್ತಿತ್ವದ ಮಹಾನ್ ಕಲಾವಿದರಾಗಿದ್ದರು. ಕಲಾವಿದರ ವಲಯದಲ್ಲಿ ಕುಂಚ ಬ್ರಹ್ಮ ಎಂದೇ ಹೆಸರುವಾಸಿಯಾಗಿದ್ದರು. ದಾವಣಗೆರೆ ಲಲಿತ ಕಲಾ ಮಹಾ ವಿದ್ಯಾಲಯದಲ್ಲಿ ಸುದೀರ್ಘ ಅವಧಿಗೆ ಗುರುಗಳಾಗಿ, ಮಾರ್ಗದರ್ಶಕರಾಗಿ ಸಾವಿರಾರು ಯುವ ಕಲಾವಿದರುಗಳಿಗೆ ಸ್ಪೂರ್ತಿಯಾಗಿದ್ದರು. ಅವರು ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ ಅವರ ಸಾಧನೆಗಳು ಮತ್ತು ಕಲಾ ಸೇವೆ ಅಜರಾಮರವಾಗಿ ಉಳಿಯಲಿವೆ. ಕಲೆಯ ಆರಾಧಕರಾಗಿದ್ದ ಕೊರ್ತಿಯವರ ಅಗಲುವಿಕೆಯಿಂದಾಗಿ ಚಿತ್ರ ಕಲಾ ಲೋಕವು ಅತ್ಯುತ್ತಮ ಮಾರ್ಗದರ್ಶಕನನ್ನು ಕಳೆದುಕೊಂಡು ಬಡವಾಗಿದೆ ಎಂದು ಭಾವುಕರಾಗಿ ನುಡಿದರು.

ಬಿ.ಆರ್.ಕೊರ್ತಿಯವರ ಶಿಷ್ಯಂದಿರಾದ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯ ಮಾಜಿ ಸದಸ್ಯ ವೈ.ಕುಮಾರ್, ಚಿತ್ರ ಕಲಾವಿದ ಚಂದ್ರಶೇಖರ ಸಂಗಾ, ಚಿತ್ರ ಕಲಾ ಶಿಕ್ಷಕ ಬಿ.ಅಚ್ಯುತಾನಂದ ಅವರುಗಳು ಮಾತನಾಡಿ ತಮ್ಮ ಗುರುಗಳು ತಮ್ಮಲ್ಲಿದ್ದ ಕಲಾ ಜ್ಞಾನದ ಸರ್ವಸ್ವವನ್ನೂ ಶಿಷ್ಯರಿಗೆ ಧಾರೆಯೆರೆದಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಾನ್ವಿತ ಶಿಷ್ಯಂದಿರನ್ನು ಸೃಷ್ಠಿಸಿದ್ದಾರೆ‌. ಅವರ ವ್ಯಕ್ತಿತ್ವ ಹಾಗೂ ಕಲಾ ಸೇವೆಯನ್ನು ಸ್ಮರಿಸಿ ಅಶ್ರುತರ್ಪಣದ ಮೂಲಕ ತಮ್ಮ ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು‌.
ಸಭೆಯಲ್ಲಿ ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿ, ಕೊಳಲುವಾದಕ ಬಸವರಾಜ ದುರ್ಗದ, ನಿವೃತ್ತ ಚಿತ್ರಕಲಾ ಶಿಕ್ಷಕ ಕಿಶನ್ ರಾವ್ ಲಾಲಗೇರಿ, ಸಂಸ್ಕಾರ ಭಾರತಿಯ ಸದಸ್ಯ ಮತ್ತು ನಿವೃತ್ತ ಪ್ರಾಧ್ಯಾಪಕ ಕೆ.ಆರ್.ಸಿದ್ದಪ್ಪ, ನಿವೃತ್ತ ಚಿತ್ರಕಲಾ ಶಿಕ್ಷಕ ಎಮ್.ಎಸ್.ಅಗಡಿ, ಸಂಸ್ಕಾರ ಭಾರತಿಯ ಸದಸ್ಯ ಜೆ.ಪರಮೇಶ್ವರಪ್ಪ, ದಾವಿವಿ ದ ಮಾಜಿ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಕೊರ್ತಿಯವರ ಬಹುಕಾಲದ ಒಡನಾಡಿ ವಿಠಲ್ ಸಪಾರೆ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಮುಂತಾದವರು ಹಾಜರಿದ್ದು ಅಗಲಿದ ಕಲಾವಿದ ಬಿ.ಆರ್.ಕೊರ್ತಿಯವರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು‌.

Leave a Reply

Your email address will not be published. Required fields are marked *

error: Content is protected !!