ನಮ್ಮ ಸಮಾಜಕ್ಕೆ ಕುಲಶಾಸ್ತ್ರ ಅಧ್ಯಯನದ ಅಗತ್ಯವೇ ಇಲ್ಲ: ಹಿಂದುಳಿದ ವರ್ಗದ ಆಯೋಗದ ವರದಿ ಆಧರಿಸಿ ಮೀಸಲಾತಿ ಕೊಡಬೇಕು: ಜಮೃಶ್ರೀ

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ಕುಲಶಾಸ್ತ್ರ ಅಧ್ಯಯನ ನಡೆಸಿ ಮೀಸಲಾತಿ ಕೊಡುವ ಅಗತ್ಯವೇ ಇಲ್ಲ. ಹಿಂದುಳಿದ ವರ್ಗದ ಆಯೋಗ ವರದಿ ಅಂತಿಮ ಆಧಾರದಲ್ಲಿ ನಮಗೆ ಕೊಡಬೇಕಿದೆ. ನಮ್ಮ ಸಮಾಜದ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯವಿದೆ ಎಂದು ಕೂಡಲಸಂಗಮ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಸದ್ಯೋಜಾತ ಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ಮೀಸಲಾತಿ ನೀಡುವುದಾಗಿ ಮಾತುಕೊಟ್ಟಿದ್ದರು. ಆದರೆ, ಅವರು ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಈಗಿನ ಸಿಎಂ ಬೊಮ್ಮಾಯಿ ಅವರು ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದಾರೆ ಎಂದರು.

೨ಎ ಮೀಸಲಾತಿ ಚಳುವಳಿಗಾಗಿ ಪಾದಯಾತ್ರೆ ಸ್ವಾಗತ ಸಮಿತಿಯಿಂದ ಇದೇ ಜ.೧೪ ರಂದು ಬೆಳಿಗ್ಗೆ ೧೧ ಗಂಟೆಗೆ ಕೂಡಲಸಂಗಮದ ಶ್ರೀಪೀಠದಲ್ಲಿ ‘ಪಾದಯಾತ್ರೆಯ ವರ್ಷಾಚರಣೆ, ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ ಹಾಗೂ ಶ್ರೀಪೀಠದ ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಯಾಗಿರುವ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ’ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಕಳೆದ ವರ್ಷ ಪಾದಯಾತ್ರೆಯ ಮೂಲಕ ಬೆಂಗಳೂರಿಗೆ ತೆರಳಿ ಬೃಹತ್ ಸಮಾವೇಶ ನಡೆಸಿ, ಶಕ್ತಿ ಪ್ರದರ್ಶನ ಮಾಡಲಾಗಿತ್ತು. ಈ ಬಾರಿ ಜ.೧೪ ರಂದು ಕೂಡಲ ಸಂಗಮದಲ್ಲಿ ಶಕ್ತಿ ಮತ್ತು ಯುಕ್ತಿಯೊಂದಿಗೆ ಹೋರಾಟ ಮಾಡುತ್ತೇವೆ ಎಂದರು.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇದೇ ಸಂಕ್ರಾಂತಿಗೆ ನಮಗೆ ಎಳ್ಳು-ಬೆಲ್ಲ ಕೊಡುತ್ತಾರೊ, ಯುಗಾದಿಗೆ ಬೇವು-ಬೆಲ್ಲ ನೀಡುತ್ತಾರೊ ಅಥವಾ ಮುಂಬರುವ ಬಸವಜಯಂತಿಗೆ ಮೀಸಲಾತಿ ಕೊಡುವ ಮೂಲಕ ಹೋಳಿಗೆ ಊಟವನ್ನೇ ಕೊಡುತ್ತಾರೋ ಕಾದು ನೋಡಬೇಕಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಹೋರಾಟ ಸಮಿತಿಯ ಯುವಘಟಕದ ಅಧ್ಯಕ್ಷ ಬಿ.ಜಿ. ಅಜಯ್‌ಕುಮಾರ್, ಅಶೋಕ್, ಓಂಕಾರಪ್ಪ, ಸೋಗಿ ಶಾಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!