ksrtc; ಪಂಪಾಪತಿ ಕೇವಲ ವ್ಯಕ್ತಿಯಲ್ಲ, ಬೆವರಿನ ಸಂಕೇತ: ಡಾ.ಸಿದ್ದನಗೌಡ ಪಾಟೀಲ್

ದಾವಣಗೆರೆ, ಅ.02: ನಗರದ ಅಶೋಕ ರಸ್ತೆಯಲ್ಲಿರುವ ಕಾಂ. ಪಂಪಾಪತಿ ಭವನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಅಯೋಜಿಸಲಾಗಿದ್ದ ದಾವಣಗೆರೆ ಕೆ.ಎಸ್.ಆರ್.ಟಿ.ಸಿ. (ksrtc) ನೂತನ ಬಸ್ ನಿಲ್ದಾಣಕ್ಕೆ ಕಾಂ.ಪಂಪಾಪತಿ ಹೆಸರಿಡುವ ಬಗ್ಗೆ ಚಿಂತನ-ಮಂಥನ ಸಭೆಯನ್ನು ತಮಟೆ ಬಾರಿಸುವ ಮೂಲಕ ಅವರು ಉದ್ಘಾಟಿಸಿದರು.

ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ದನ ಗೌಡ ಪಾಟೀಲ್ ಮಾತನಾಡಿ, ರಾಜ್ಯದ ರೈತರು, ಕಾರ್ಮಿಕರು, ಬಡವರು, ಶೋಷಿತರ ಪರವಾಗಿ ಹೋರಾಟ ಮಾಡಿದ ಅಪ್ರತಿಮ ಕಾರ್ಮಿಕ ಮುಖಂಡ ದಿವಂಗತ ಪಂಪಾಪತಿ ಕೇವಲ ವ್ಯಕ್ತಿ ಆಗಿರಲಿಲ್ಲ. ಬೆವರಿನ ಸಂಕೇತವಾಗಿದ್ದರು ಎಂದು  ಹೇಳಿದರು.

ನಗರಸಭೆ ಅಧ್ಯಕ್ಷರಾಗಿ, 3 ಬಾರಿ ಶಾಸಕರಾಗಿದ್ದ ಪಂಪಾಪತಿ ದಾವಣಗೆರೆ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿ ಶೋಷಿತರ ಪರವಾಗಿ ಹೋರಾಟ ನಡೆಸಿದವರು. ಕ್ಷೇತ್ರದಾದ್ಯಂತ ಅವರೇ ಓಡಾಡಿ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುತ್ತಿದ್ದರು. ಅಲ್ಲದೇ ದಾವಣಗೆರೆ ನಗರದ ಹಸಿರೀಕರಣಕ್ಕೆ ಸಾಕ್ಷಿಯಾಗಿದ್ದರು. ಇದಲ್ಲದೇ ಪಂಪಾಪತಿ ಅವರು ದಾವಣಗೆರೆ ಮಹಾನಗರದ ಅಭಿವೃದ್ದಿಗಾಗಿ ಶ್ರಮಿಸಿದ್ದು, ನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಕೆಎಸ್ಆರ್ ಟಿಸಿ ಬಸ್‌ನಿಲ್ದಾಣಕ್ಕೆ ಕಾಂ.ಪಂಪಾಪತಿ ಹೆಸರಿಡುವುದು ಅತ್ಯಂತ ಸೂಕ್ತವಾಗಿದೆ ಎಂದರು.

hitech toilet; ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಪ್ರಪಂಚದ ಅತ್ಯಂತ ದುಬಾರಿ ಹೈಟೆಕ್ ಶೌಚಾಲಯ!

ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಆವರಗೆರೆ ಮಾತನಾಡಿ, ಭ್ರಷ್ಟಾಚಾರ, ನಿರುದ್ಯೋಗ ರಾಜ್ಯ, ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಕಲಿತ ವಿದ್ಯಾವಂತರು ಕೆಲಸ ಹುಡುಕಿದರೂ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ಆಳುವ ಸರ್ಕಾರಗಳು ಶ್ರಮಿಕರ ಪರವಾಗಿ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸುತ್ತಿವೆ. ರಾಜಕಾರಣಿಗಳಿಗೆ ಸ್ವಪ್ರತಿಷ್ಠೆಗಾಗಿ ಸ್ವಾರ್ಥ ಮನೋಭಾವ ಬಂದಿದೆ ಎಂದು ಕಿಡಿಕಾರಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಹಾಗೂ ಪಂಪಾಪತಿಯವರ ಒಡನಾಡಿ ಬಿ.ಎನ್.ಮಲ್ಲೇಶ್ ಅವರು ಮಾತನಾಡಿ, ಪಂಪಾಪತಿಯವರು ನಗರಸಭೆ ಅಧ್ಯಕ್ಷ ಹಾಗೂ 3 ಬಾರಿ ಶಾಸಕರಾಗಿದ್ದರೂ ಅಧಿಕಾರವನ್ನು ಸ್ವಂತಕ್ಕೆ ಬಳಸದೇ ಕಾರ್ಮಿಕರ ಹಾಗೂ ಜನರ ಹಿತಕ್ಕಾಗಿ ಜೀವನವನ್ನೇ ಸವೆಸಿದರು. ಕಾರ್ಮಿಕರಿಗಾಗಿ, ನಗರದ ಏಳಿಗೆಗಾಗಿ ದುಡಿದ ಪಂಪಾಪತಿಯವರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೂ ಅಪಾರ ಗೌರವವಿದೆ. ಆದ್ದರಿಂದ ಎಲ್ಲ ಪಕ್ಷದವರನ್ನು, ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಪಾಪತಿಯವರ ಹೆಸರನ್ನು ಬಸ್ ನಿಲ್ದಾಣಕ್ಕೆ ಇಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಬಿ.ಎನ್.ಮಲ್ಲೇಶ್ ಹೇಳಿದರು.

ಸರ್ಕಾರಿ ಬಸ್ ಫುಲ್ ರಶ್.! ಆಟೋ, ಖಾಸಗಿ ಬಸ್‌ಗಳ ಚಾಲಕರ ಮುಖದಲ್ಲಿ ಆತಂಕ

ಇನ್ನೋರ್ವ ಮುಖ್ಯ ಅತಿಥಿ ವಿಶ್ರಾಂತ ‌ಪ್ರಾಂಶುಪಾಲ ಮತ್ತು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿದರು.

ಈ ವೇಳೆ ನಗರವಾಣಿ ಉಪ ಸಂಪಾದಕ ಬಿ.ಎನ್.ಮಲ್ಲೇಶ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಬಿ.ರಾಮಚಂದ್ರಪ್ಪ, ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸತೀಶ್ ಅರವಿಂದ್, ಶ್ರೀ ಆಂಜನೇಯ ಕಾಟನ್ ಮಿಲ್ಸ್ ವರ್ಕರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಸ್.ಜಯ್ಯಪ್ಪ, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿ.ಲಕ್ಷ್ಮಣ, ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ನರೇಗ ರಂಗನಾಥ, ನೇತ್ರಾವತಿ, ಶಿವಕುಮಾರ್ ಡಿ.ಶೆಟ್ಟರ್, ಸಾಮಿಲ್ ದಾದಾಪೀರ್, ಎ.ತಿಪ್ಪೇಶಿ, ಹೆಚ್.ಕೆ.ಆರ್.ಸುರೇಶ್, ಎಸ್.ಮುರುಗೇಶ್, ಗುಡಿಹಳ್ಳಿ ಹಾಲೇಶ್, ರಾಜು ಕೆರೆನಹಳ್ಳಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!