ತಂಬಾಕು ನಿಯಂತ್ರಣ ಜಾಗೃತಿಗೆ ಗುಲಾಬಿ ಆಂದೋಲನ ತಂಬಾಕು ಸೇವನೆ ಮನುಷ್ಯ ಕುಲಕ್ಕೆ ಮಾರಕ-ಡಾ.ದೇವರಾಜ್

ತಂಬಾಕು ನಿಯಂತ್ರಣ ಜಾಗೃತಿಗೆ ಗುಲಾಬಿ
ದಾವಣಗೆರೆ : ತಂಬಾಕು ಉತ್ಪನ್ನಗಳ ಸೇವನೆ ಮನುಷ್ಯನ ಕುಲಕ್ಕೆ ಮಾರಕ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಿ ಹೇಳಿದರು.
ಸೊಮವಾರ ನಗರದ ಮಿಲ್ಲತ್ ವಿದ್ಯಾ ಸಂಸ್ಥೆಯ ಆವರಣದಿಂದ ಭಾಷಾ ನಗರದ ಮುಖ್ಯ ರಸ್ತೆಯವರೆಗೂ ಹಮ್ಮಿಕೊಂಡಿದ್ದ ತಂಬಾಕು ನಿಯಂತ್ರಣ ಜಾಗೃತಿ ಕಾರ್ಯಕ್ರಮ ಕುರಿತು ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚಟ ಮತ್ತು ಹವ್ಯಾಸಕ್ಕೆ ಬಹಳ ವ್ಯತ್ಯಾಸ ಇದೆ ಹವ್ಯಾಸವನ್ನು ಮದ್ಯದಲ್ಲಿ ನಿಲ್ಲಿಸಬಹುದು ಆದರೆ ಚಟ ಮನುಷ್ಯ ಬಿಟ್ಟರೂ ಅದು ಅವನನ್ನು ಬಿಡುವುದಿಲ್ಲ ಆದ್ದರಿಂದ ಮಕ್ಕಳನ್ನು ಈಗಿನಿಂದಲೇ ತಂಬಾಕು ಉತ್ಪನ್ನಗಳಿಂದ ದೂರವಿರುಂತೆ ಎಚ್ಚರ ವಹಿಸಿ, ಚಟಗಳಿಗೆ ಬಲಿಯಾಗದಂತೆ, ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕೆಂದು ಹೇಳಿದರು.
ಆಜಾದ್ ನಗರ ಪೋಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಇಮ್ರಾನ್ ಬೇಗ್ ಮಾತನಾಡಿ ಶಿಕ್ಷಣ ಸಂಸ್ಥೆಯ ಆವರಣದಿಂದ 100 ಗಜದ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸ್ಪಷ್ಟ ಆದೇಶವಿದೆ. ತಂಬಾಕು ಮಾರಾಟ ಮಾಡುವವರಿಗೆ ಮಕ್ಕಳಿಂದ ಗುಲಾಬಿ ಹೂ ನೀಡಿ ಮಾರಾಟ ಮಾಡದಂತೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಆದ್ದರಿಂದ ತಂಬಾಕು ಮಾರಾಟ ನಿಲ್ಲಿಸಿ, ಯುವ ಪೀಳಿಗೆಯನ್ನು ತಂಬಾಕಿನಿಂದ ರಕ್ಷಿಸಿ ಎಂದು ಕರೆ ನೀಡಿದರು.
ಶೈಕ್ಷಣಿಕ ಸಂಸ್ಥೆಯ ಆವರಣದಿಂದ 100 ಗಜದ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿಗೆ ಪೊಲೀಸ್ ನಿರೀಕ್ಷಕರ ಸಹಯೋಗದೊಂದಿಗೆ 5 ಪ್ರಕರಣ ದಾಖಲಿಸಿ 1000ರೂ ದಂಡ ವಿಧಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ಸೈಯದ್ ಅಲಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ವಿ ಹೊರಕೇರಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮಹಮ್ಮದ್ ಹುಸೇನ್ ಫೀರ್, ಉಪ ಪ್ರಾಚಾರ್ಯರಾದ ಜಾಕೀರ್ ಹುಸೇನ್, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಹಿರಿಯ ನಿರೀಕ್ಷಣಾಧಿಕಾರಿ ವೆಂಕಟಚಾಲ ಕುಮಾರ್, ಸಮಾಜ ಕಾರ್ಯಕರ್ತರಾದ ದೇವರಾಜ್ ಕೆ.ಪಿ, ಸಂಸ್ಥೆಯ ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.