puneeth rajkumar; ಅಪ್ಪು ಆದರ್ಶಗಳು ಸಮಾಜಸೇವೆಗೆ ದಾರಿದೀಪ: ಗಡಿಗುಡಾಳ್ ಮಂಜುನಾಥ್  

ದಾವಣಗೆರೆ, ಅ.30: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಉದ್ಯಾನವನದಲ್ಲಿರುವ ಪುನೀತ ಆನಂದವನದಲ್ಲಿ ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ (Puneeth Rajkumar) ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು.
ಪೌರ ಕಾರ್ಮಿಕರೊಂದಿಗೆ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಅವರು ಪುಣ್ಯಸ್ಮರಣೆ ಮಾಡಿದ್ದು ವಿಶೇಷ. ಪೌರಕಾರ್ಮಿಕರು ಹಾಗೂ ಗಡಿಗುಡಾಳ್ ಮಂಜುನಾಥ್ ಅವರು ಪುನೀತ್ ರಾಜಕುಮಾರ್ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಸ್ಮರಿಸಿದರು.
ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ಪುನೀತ್ ರಾಜಕುಮಾರ್ ಅವರು ನಮ್ಮನೆಲ್ಲ ಅಗಲಿ ಇಂದಿಗೆ ಎರಡು ವರ್ಷ. ಆದ್ರೂ ಕರ್ನಾಟಕ ಮಾತ್ರವಲ್ಲ ದೇಶದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಈಗಲೂ ನೆಲೆಸಿದ್ದಾರೆ. ಎರಡೂ ವರ್ಷವಾದರೂ ಅಭಿಮಾನಿಗಳು ಮಾತ್ರ ಸ್ಮರಣೆ ನಿಲ್ಲಿಸಿಲ್ಲ. ಕೋಟ್ಯಾನುಕೋಟಿ ಫ್ಯಾನ್ಸ್ ಗೆ ಅವರು ಇಂದಿಗೂ ಆದರ್ಶ. ಅವರ ಬದುಕು, ಜೀವನಶೈಲಿ, ಮಾಡಿದ ಸಮಾಜಸೇವೆ ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು.
ಪುನೀತ್ ರಾಜಕುಮಾರ್ ಕೇವಲ ನಟರಾಗಿ ಮಾತ್ರ ಇರಲಿಲ್ಲ. ಅವರೊಬ್ಬ ಅದ್ಭುತ ವ್ಯಕ್ತಿ. ಮನುಷ್ಯ ಬದುಕಿದ್ದಾಗ ಏನು ಸಾಧನೆ ಮಾಡಿದ ಎಂಬುದು ಇಹಲೋಕ ತ್ಯಜಿಸಿದ ಬಳಿಕವೇ ಗೊತ್ತಾಗುವುದು. ನೇತ್ರದಾನ, ಕಷ್ಟದಲ್ಲಿರುವವರಿಗೆ ಸಹಾಯ, ಪ್ರತಿಯೊಬ್ಬರಿಗೂ ಗೌರವ ಕೊಡುವ ಗುಣ, ತಾನೊಬ್ಬ ಸ್ಟಾರ್ ನಟ ಎಂಬ ಹಮ್ಮು ಇಲ್ಲದ ವ್ಯಕ್ತಿತ್ವ, ಅಪ್ಪು ಮಾನವೀಯ ಗುಣ ಸೇರಿದಂತೆ ಪ್ರತಿಯೊಂದು ಎಲ್ಲರಿಗೂ ದಾರಿದೀಪವಾಗಿದೆ ಎಂದರು.
ಪುನೀತ್ ರನ್ನು ಕಳೆದುಕೊಂಡು ಎರಡು ವರ್ಷವಾಗಿದೆ ಎಂಬುದನ್ನು  ನಂಬಲು ಆಗುತ್ತಿಲ್ಲ. ನಮ್ಮೆಲ್ಲರ ಜೊತೆಗೆ ಈಗಲೂ ಇದ್ದಾರೆ ಎಂದು ಅನಿಸುತ್ತಿದೆ. ಅಂಥ ಶ್ರೇಷ್ಠ ನಟ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಅಪ್ಪು ಅಜರಾಮರ ಎಂದು ಬಣ್ಣಿಸಿದರು.
ಬಾಲನಟನಾಗಿ, ಸ್ಟಾರ್ ನಟನಾಗಿ ಸ್ಯಾಂಡಲ್ ವುಡ್ ಗೆ ನೀಡಿರುವ ಕೊಡುಗೆ ಅಪಾರ. ಡ್ಯಾನ್ಸ್, ನಟನೆ, ಡೈಲಾಗ್, ಫೈಟ್ ಸೇರಿದಂತೆ ಪ್ರತಿಯೊಂದರಲ್ಲಿ ಪ್ರಬುದ್ದರಾಗಿದ್ದ ಪುನೀತ್ ರಾಜಕುಮಾರ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು.  ಈಗಲೂ ಮಿಡಿಯುತ್ತಿದೆ. ಅವರಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ. ಅನ್ನ ಸಂತರ್ಪಣೆ, ನೇತ್ರದಾನ, ಬಡವರಿಗೆ ಕೈಯಲ್ಲಾದಷ್ಟು ಸೇವೆಯನ್ನು ಈಗಲೂ ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಪುನೀತ್ ರಾಜಕುಮಾರ್ ಅವರ ವಿನಯತೆ ಈಗಲೂ ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಈಗಲೂ ಬರುತ್ತಿರುವ ಕೋಟ್ಯಂತರ ಅಭಿಮಾನಿಗಳೇ ಸಾಕ್ಷಿ. ಇಂಥ ನಟನ ಜೀವನಶೈಲಿಯನ್ನು ನಾವು ಕೇವಲ ಮಾತಿನಲ್ಲಿ ಹೇಳದೇ, ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು

Leave a Reply

Your email address will not be published. Required fields are marked *

error: Content is protected !!