ಜ್ಞಾನಾರ್ಜನೆಗಾಗಿ ಪತ್ರಿಕೆಗಳನ್ನು ಓದಬೇಕು – ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್

ದಾವಣಗೆರೆ:ಪತ್ರಿಕೆಗಳು ನಮ್ಮ ಜೀವನದಲ್ಲಿ, ಇತಿಹಾಸದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಪತ್ರಿಕೆಗಳು ಇನ್ನೋವೇಟಿವ್ ಆಗಿ ವಿನೂತನವಾಗಿ ಹೊಸ ಹೊಸ ವಿಷಯಗಳೊಂದಿಗೆ ಬರಲಿ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅಭಿಪ್ರಾಯಪಟ್ಟರು.

ನಗರದ ಮಂಡಿಪೇಟೆ ಬಳಿಯ ಹರ್ಡೇಕರ್ ಮಂಜಪ್ಪ ಸರ್ಕಲ್‌ನಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕತೆ ಬದಲಾದ ಈ ಸಂದರ್ಭದಲ್ಲಿ ಮೊಬೈಲ್, ಟಿವಿ ಮೂಲಕ ಬಹಳ ವೇಗವಾಗಿ ಸುದ್ದಿಗಳು ತಲುಪುತ್ತವೆ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಟಿವಿ, ಮೊಬೈಲ್ ಬಂದ ಮೇಲೆಪತ್ರಿಕೆಗಳ ಓದುಗರ ಹವ್ಯಾಸ ಕಡಿಮೆಯಾಗಿದೆ.

ಪತ್ರಿಕೆಗಳ ಮಹತ್ವ ಯಾವಾಗಲೂ ಕಡಿಮೆಯಾಗುವುದಿಲ್ಲ. ಮಹತ್ವ ಇದ್ದೇ ಇರುತ್ತದೆ. ಪತ್ರಿಕೆಗಳು ಬರೀ ಮನರಂಜನೆಗಾಗಿ, ವಿಷಯ ಸಂಗ್ರಹಣೆಗಾಗಿ ಅಲ್ಲ. ನಮ್ಮ ಬದುಕನ್ನು ಕಟ್ಟಿಕೊಳ್ಳಲು ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಜ್ಞಾನಾರ್ಜನೆಗಾಗಿ ಪತ್ರಿಕೆಗಳನ್ನು ಓದಬೇಕು. ಮಕ್ಕಳಿಗೆ, ಯುವ ಪೀಳಿಗೆಗೆ ಪತ್ರಿಕೆಗಳನ್ನು ಓದಲು ಅವರಿಗೆ ಪ್ರೋತ್ಸಾಹ ಕೊಡಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಕೋವಿಡ್ ವಾರಿಯರ್ ಗಳಿಗೆ ಸೇವೆ ಸಲ್ಲಿಸುವುದರ ಜೊತೆಗೆ ಸಂಕಷ್ಟದಲ್ಲಿರುವವರಿಗೆ ನೀವು ನೋವುಗಳಿಗೆ ನೀವು ಸ್ಪಂದಿಸಿದ್ದೀರಿ.ನಿಮ್ಮಗಳ ಸೇವೆ ಶ್ಲಾಘನೀಯ ಎಂದರು.
ಹಿಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ಬಹಳ ಮಹತ್ವದ ಪಾತ್ರ ವಹಿಸಿದವು. ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಲು, ಜನರಲ್ಲಿ ಕಿಚ್ಚನ್ನು ಹಚ್ಚಲು ಪತ್ರಿಕೆಗಳು ಬಹಳ ಮಹತ್ವದ ಪಾತ್ರ ವಹಿಸಿದ್ದವು.

೧೮೪೧ರಲ್ಲಿ ನಮ್ಮ ಕರ್ನಾಟಕಕ್ಕೆ ಮುದ್ರಣ ಯಂತ್ರ ಬಂದಿತು. ಬಾಷಲ್ ಮಿಷನ್ ಎಂಬುವವರು ಮಂಗಳೂರು ಸಮಾಚಾರ ಎಂಬ ಪತ್ರಿಕೆಯನ್ನು ಜು.೧, ೧೮೪೩ರಲ್ಲಿ ಪ್ರಥಮವಾಗಿ ಆರಂಭಿಸಿದರು. ಕನ್ನಡದ ಮೊದಲ ದಿನಪತ್ರಿಕೆ ಆರಂಭವಾಯಿತು. ಅದರ ನೆನಪಿಗಾಗಿ ಇಂದು ಆಚರಿಸಲಾಗುತ್ತಿದೆ.

ಮೇಯರ್ ಎಸ್.ಟಿ.ವೀರೇಶ ಹರ್ಡೇಕರ್ ಮಂಜಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದಲ್ಲಿ ೪ನೇ ಆಧಾರ ಸ್ತಂಭವಾಗಿರುವ ಪತ್ರಿಕಾ ರಂಗ. ಬಹಳ ಅವಶ್ಯಕವಾಗಿರುವಂತಹ ಜನರ ಜೀವನದಲ್ಲಿ ಇಡೀ ವ್ಯವಸ್ಥೆ ನಡೆಯುವಂತಹ ದಿಸೆಯಲ್ಲಿ ಮಹತ್ವದ ಪಾತ್ರ ವಹಸುವುದು ಪತ್ರಿಕಾ ರಂಗ. ಪತ್ರಕರ್ತರಿಗೆ ಸಂಕಷ್ಟದಲ್ಲಿ ಸಹಾಯವಾಗಲು ಮಹಾನಗರ ಪಾಲಿಕೆಯಿಂದ ೧೦ ಲಕ್ಷ ರು. ನಿಧಿಯನ್ನು ಬಜೆಟ್‌ನಲ್ಲಿ ಇರಿಸಲಾಗಿದೆ. ಪತ್ರಿಕಾ ಭವನ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳವನ್ನು ನೀಡಿದರೆ ಅದನ್ನು ಕಾರ್ಯ ರೂಪಕ್ಕೆ ತರಲಾಗುವುದು. ನಿರ್ಮಾಣಕ್ಕೆ ಸಹಾಯ ಧನಕ್ಕೂ ಸಹಾಯ ನೀಡಲಾಗುವುದು.

ವೈಯಕ್ತಿಕ ಜೀವನದಲ್ಲಿ, ಸಮಾಜದ ಆರೊಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜನಪ್ರತಿನಿಧಿಗಳು ಗೊತ್ತಿಲ್ಲದೇ ಗೊತ್ತಿದ್ದೋ ತಪ್ಪು ಮಾಡಿದಾಗ ತಿದ್ದಿ ಹೇಳುವ ಅಧಿಕಾರ ಸಾಮರ್ಥ್ಯ ಇರುವಂತಹವರು ಪತ್ರಕರ್ತರು. ಸಮಾಜ ಅಭಿವೃದ್ದಿ ಪಥದಲ್ಲಿ ನಡೆಯಬೇಕು. ಆರೋಗ್ಯಯುತವಾಗಿರಬೇಕು ಎಂದರೆ ಪತ್ರಿಕಾ ರಂಗ ಸಹಾ ಶಕ್ತಿಯುತವಾಗಿ ಸದೃಢತೆಯಿಂದ ಪ್ರಮುಖ ಪಾತ್ರ ವಹಿಸುತ್ತದೆ. ಪಾಲಿಕೆಯಿಂದ ಸಿಗಬೇಕಾದ ಸವಲತ್ತುಗಳನ್ನು ತಲುಪಿಸಲು ಆಯುಕ್ತರೊಂದಿಗೆ ಚರ್ಚಿಸಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಮಾತನಾಡಿ ಕೊರೋನಾದಿಂದ ಒಬ್ಬರನ್ನೊಬ್ಬರು ನೋಡದ ಪರಿಸ್ಥಿತಿ ಬಂದಿದೆ. ಸರ್ಕಾರದ ನೀತಿ ನಿಯಮಗಳಿಗೆ ಅನುಸಾರವಾಗಿ ಈ ಕಾರ್ಯಕ್ರಮ ಆಯೋಜಿಸಿದೆ. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದು ಮಂಗಳೂರು ಸಮಾಚಾರ ಎಂಬ ಪತ್ರಿಕೆ ೧೮೪೮ರಲ್ಲಿ ಆರಂಭವಾಯಿತು. ರಾಜ್ಯ ಸರ್ಕಾರ ಅವರ ಹೆಸರಿಗಾಗಿ ಅವರ ಹೆಸರು ಚಿರಸ್ಥಾಯಿ ಇರಲಿ ಎಂದು ಜುಲೈ ೧ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ. ಕಳೆದ ೪೦ ವರ್ಷದಿಂದ ಈ ಭಾಗದಲ್ಲಿ ದಾವಣಗೆರೆಯಲ್ಲಿ ಧನುರ್ಧಾರಿ ಎಂಬ ಪತ್ರಿಕೆ ಆರಂಭಿಸಿದ ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧಿ ಪಡೆದ ಹರ್ಡೆಕರ್ ಮಂಜಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಆಚರಿಸುತ್ತಾ ಬಂದಿದ್ದೇವೆ.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೈಸೂರಿನ ರಾಜ ಒಡೆಯರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ೧೯೫೦ರಲ್ಲಿ ೫ ಸಾವಿರ ರು. ನೀಡಿ ಇಡೀ ರಾಜ್ಯಾದ್ಯಂತ ಪತ್ರಕರ್ತರ ಸಂಘಟನೆ ಮಾಡಿ ಎಂದು ಚಾಲನೆ ನೀಡಿದ್ದರು. ನಮ್ಮ ಸಂಘಕ್ಕೆ ಹಿರಿಯ ಕವಿ ಡಿ.ವಿ.ಗುಂಡಪ್ಪ, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಂ.ದೊರೆಸ್ವಾಮಿ, ಖಾದ್ರಿ ಶಾಮಣ್ಣ, ಜಿ.ಕೆ.ಸತ್ಯ, ಶ್ರೀಧರ, ಮಲ್ಲಿಕಾರ್ಜುನಯ್ಯ , ಜಿ.ನಾರಾಯಣ, ಜಯಶೀಲರಾಯರು ಇನ್ನೂ ಅನೇಕರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರನ್ನು ಇಂದಿಗೂ ಸ್ಮರಿಸುತ್ತಿದ್ದೇವೆ.

ದಾವಣಗೆರೆ ಜಿಲ್ಲೆಯ ಪುಡಾರಿ ಮುರಿಗೆಯ್ಯ, ನಿಶಾನಿಮಠ, ಪಂಚಾಕ್ಷರಯ್ಯ, ಜಿ.ಬಿ.ಶಿವಲಿಂಗಪ್ಪ, ರುದ್ರಮುನಿ, ಪ್ರಥಮವಾಗಿ ಪತ್ರಿಕೆ ಆರಂಭಿಸಿದ ಸಿ.ಕೇಶವಮೂರ್ತಿ, ಜಿ.ಬಿ.ಶಿವಲಿಂಗಪ್ಪ, ಸಿದ್ದಲಿಂಗಸ್ವಾಮಿ, ಪೆ.ನಾ.ಗೋಪಾಲ್‌ರಾವ್, ಎಚ್.ಎನ್.ಷಡಾಕ್ಷರಪ್ಪ, ಪಾಟೀಲ್ ಪುಟ್ಟಪ್ಪ, ಖಾದ್ರಿ ಶಾಮಣ್ಣ ಸೇರಿದಂತೆ ಅನೇಕರು ಭದ್ರ ಬುನಾದಿ ಹಾಕಿದ್ದಾರೆ ಎಂದು ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಬ್ಲಿಕ್ ಟಿವಿ ವರದಿಗಾರ ಪುನೀತ ಅಪ್ತಿ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ, , ಪ್ರಧಾನ ಕಾರ್ಯದರ್ಶಿ ಇ.ಎಂ.ಮಂಜುನಾಥ, ಖಜಾಂಚಿ ಮಂಜಪ್ಪ ಮಾಗನೂರು, ಎಚ್.ಎಂ.ಪಿ.ಕುಮಾರ, ಎಚ್.ಬಿ.ಮಂಜುನಾಥ, ಬಾಮ ಬಸವರಾಜಯ್ಯ, ವಿವೇಕಾನಂದ ಬದ್ದಿ, ಸತೀಶ ಮಡಿವಾಳರ, ಚನ್ನಬಸವ ಶೀಲವಂತ್ ಇದ್ದರು.ಇದೇ ವೇಳೆ ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!