ಸಂಸದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪ : ಜನ ಲಸಿಕೆ ಇಲ್ಲದೇ ಸಾಯ್ತಾ ಇದ್ರೆ ರಾಜಕೀಯ ಮಾಡ್ತಿದಾರೆ ದಾವಣಗೆರೆ ಸಂಸದ

 

ದಾವಣಗೆರೆ: ಜನರು ಲಸಿಕೆ ಸಿಗದೇ ಸಾಯುತ್ತಿದ್ದರೂ ಸಹ ಸಂಸದ ಜಿ.ಎಂ.ಸಿದ್ದೇಶ್ವರ್ ಜನರ ಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ.

ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಗರದ ಕೆ. ಬಿ. ಬಡಾವಣೆಯಲ್ಲಿ ಏರ್ಪಡಿಸಲಾಗಿದ್ದ ಕೊರೊನಾ ಉಚಿತ ಲಸಿಕಾ ಶಿಬಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಸಿದ್ದೇಶ್ವರ್ ಗೆ ಜನರೇ ತಕ್ಕಪಾಠ ಕಲಿಸಬೇಕು ಎಂದು ಕಿಡಿಕಾರಿದರು.

ನಾವು ಈ ಭಾಗದಲ್ಲಿ ನಾಲ್ಕು ನೂರು ಲಸಿಕೆ ನೀಡಿದ್ದೇವೆ. ಸರ್ಕಾರದವರು ವ್ಯಾಕ್ಸಿನ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಆದರೆ, ಈ ಭಾಗದ ಕಾರ್ಪೋರೇಟರ್ ಹೇಳಿದರೆಂದು ಸಂಸದರು ಸರ್ಕಾರ ನೀಡಬೇಕಾದ ವ್ಯಾಕ್ಸಿನ್ ನೀಡಲು ತಡೆದಿದ್ದಾರೆಂದು ದೂರಿದರು.

ಲಸಿಕೆ ನೀಡದ ಕಾರಣ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಈ ವಾರ್ಡ್ ನ ಕಾರ್ಪೋರೇಟರ್ ಆಗಿರುವ ಮೇಯರ್ ಸಂಸದ ಸಿದ್ದೇಶ್ವರ್ ಬಳಿ ಹೋಗಿ ಅತ್ತು ಕರೆದು ಅಧಿಕಾರಿಗಳನ್ನು ಹೆದರಿಸಿ ಸರ್ಕಾರದಿಂದ ನೀಡುತ್ತೇವೆ ಎಂದಿದ್ದರು, ಆದರೆ ಲಸಿಕೆ ಬಾರದಂತೆ ತಡೆಯಲಾಗಿದೆ. ಇದಕ್ಕೆ ಸಿದ್ದೇಶ್ವರ್ ಒಪ್ಪಿದಂತೆ ಕಂಡಿಲ್ಲ ಎಂದು ದೂರಿದರು.

ಜನರು ಬೆಳಿಗ್ಗೆಯಿಂದಲೂ ಕಾಯುತ್ತಿದ್ದಾರೆ. ಜನರ ಪ್ರಾಣ ಉಳಿಸುವ ಲಸಿಕೆ ನೀಡುವಂಥ ಕಾರ್ಯದಲ್ಲಿ ರಾಜಕೀಯ ಮಾಡಿದವರಿಗೆ ಜನರು ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಜಿ. ಶಿವಕುಮಾರ್, ಶಾಮನೂರು ಶಿವಶಂಕರಪ್ಪನವರು 200 ಲಸಿಕೆ ನೀಡುವುದಾಗಿ ಹೇಳಿದ್ದರು. ಅದರಂತೆ ಬಂದಿವೆ. ಆದ್ರೆ, ಕಾರ್ಪೋರೇಟರ್ ಹಾಗೂ ಸಂಸದರು ಅಧಿಕಾರಿಗಳನ್ನು ಹೆದರಿಸಿ ಸರ್ಕಾರದಿಂದ ನೀಡುತ್ತೇವೆ ಎಂದಿದ್ದ 300 ಲಸಿಕೆ ನೀಡದಂತೆ ತಡೆದಿದ್ದಾರೆ. ಶಾಸಕರು ಜನರ ಜೀವ ಉಳಿಸಲು ಮುಂದಾದರೆ ಬಿಜೆಪಿಯವರು ಜನರ ಜೀವ ತೆಗೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಹೆಚ್ಚು ಜನರು ಹೆಚ್ಚಾಗಿರುವ ಕಾರಣ ಶಾಮನೂರು ಶಿವಶಂಕರಪ್ಪನವರು 200 ಲಸಿಕೆ ವ್ಯವಸ್ಥೆ ಮಾಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಇಂಥ ವಿಚಾರಗಳಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ದೊಗ್ಗಳ್ಳಿ ಬಸವರಾಜ್, ಮಾಜಿ ಸದಸ್ಯ ಕಿರುವಾಡಿ ಸೋಮಶೇಖರ್, ಉದ್ಯಮಿ ಕೋಗುಂಡಿ ಬಕ್ಕೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಸೇವಾದಳದ ಜಿಲ್ಲಾಧ್ಯಕ್ಷ ಡೋಲಿ ಚಂದ್ರು, ರುದ್ರೇಶ್, ಸಿರಿಗೆರೆ ರುದ್ರೇಶ್, ವಿಲಾಸ್, ಭುವ ಪ್ರಕಾಶ್, ಐನಳ್ಳಿ ವೀರಣ್ಣ, ಶರತ್, ವಿರೇಶ್ ಮೊಬೈಲ್, ಪುನೀತ್, ರಾಕಿ, ಜೆಡಿಎಸ್ ಮುಖಂಡರುಗಳಾದ ವೀರಭದ್ರಸ್ವಾಮಿ, ರಾಜೇಶ್, ಪ್ರವೀಣ್ ಫಾರ್ಮ, ಜೆ.ಜೆ.ಎಂ.ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ|| ಮುರುಗೇಶ್, ಗೋಪಾಲಕೃಷ್ಣ ಮತ್ತು ಸಿಬ್ಬಂದಿವರ್ಗದವರು ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!