ಸಂಚಾರಿ ವಿಜಯ್ ಸಾವು ಎಚ್ಚರಿಕೆ ಘಂಟೆ ಆಗಲಿ: “ಹೆಲ್ಮೆಟ್ ಧರಿಸಿದ್ದರೆ ಮಾತಂಗಿ ಪುತ್ರನ ಜೀವ ಉಳಿಯುತ್ತಿತ್ತು” ಮಾಜಿ ಸಚಿವ ಹೆಚ್.ಆಂಜನೇಯ

ಚಿತ್ರದುರ್ಗ: ಮಾತಂಗಿ ಪುತ್ರ, ಆದಿಜಾಂಭವ ಮಾಣಿಕ್ಯ, ಬಸವಣ್ಣನ ಅನುಯಾಯಿ, ಅಪರೂಪದ ನಟ ಸಂಚಾರಿ ವಿಜಯ್ ಬದುಕು ಯುವ ಪೀಳಿಗೆಗೆ ಮಾದರಿ ಆಗಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ಹೇಳಿದರು. ನಗರದ ಹೊರವಲಯ ಸೀಬಾರದಲ್ಲಿರುವ ಮಾಜಿ ಸಚಿವರ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಂಚಾರಿ ವಿಜಯ್‌ಗೆ ಭಾವಪೂರ್ಣ ಗೌರವ ಸಮರ್ಪಣೆ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ವಿಜಯ್ ತನ್ನ ಮಾನವೀಯ ಗುಣ, ಜಾತ್ಯೀತ ನಡೆ, ಸರಳತೆ, ಅಭೂತಪೂರ್ವ ನಟನೆ ಮೂಲಕ ಚಿಕ್ಕ ವಯಸ್ಸಿನಲ್ಲೇ ಕನ್ನಡಿಗರ ಮನಗೆದ್ದ ಅಪರೂಪದ ನಟ ಎಂದು ಬಣ್ಣಿಸಿದರು. ಎರಡು ದಶಕಗಳ ನಂತರ ಕನ್ನಡ ನಾಡಿಗೆ ನಾನು ಅವನಲ್ಲ ಅವಳು ಚಿತ್ರದಲ್ಲಿ ನೈಜ ನಟನೆ ಮೂಲಕ ರಾಷ್ಟ್ರಮಟ್ಟದಲ್ಲಿ ಶ್ರೇಷ್ಟ ನಟ ಪ್ರಶಸ್ತಿ ತಂದುಕೊಟ್ಟ ವಿಜಯ್ ಅವರ ಸೇವಾ ಕಾರ್ಯಗಳು, ನೋಂದವರಿಗೆ ಮಿಡಿಯುತ್ತಿದ್ದ ಹೃದಯವಂತಿಕೆ, ಅಹಂಕಾರ ರಹಿತ ಜೀವನ ನಿಜಕ್ಕೂ
ಯುವ ಪೀಳಿಗೆಗೆ ಮಾದರಿ ಆಗಬೇಕು. ನಟನೆಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಿಕ್ಕಾಗ ವಿಜಯ್‌ಗೆ ಹೆಚ್ಚು ಗೌರವಗಳು ಲಭಿಸಬೇಕಾಗಿತ್ತು. ಆದರೆ ವಿವಿಧ ಕಾರಣಕ್ಕೆ ದೊರೆಯದಿದ್ದಾಗ ನಾನು ಆ ಯುವಕನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿ, ಸಿಎಂ ಅವರಿಂದ
ಗೌರವ ಸಮರ್ಪಣೆ ಕಾರ್ಯವನ್ನು ಮಾಡಿದ್ದು ನನಗೆ ವೈಯಕ್ತಿಕವಾಗಿ ಹೆಚ್ಚು ನೆಮ್ಮದಿ ತಂದಿತು.

ಉದಯನ್ಮೋಖ ನಟನಾಗಿ ನಾಡಿಗೆ ಪರಿಚಯನಾದ ವಿಜಯ್, ಕನ್ನಡ ನಾಡಿನಲ್ಲಿ ದಿಗ್ಗಜ ನಟರ ರೀತಿ ಜನರ ಮನಗೆಲ್ಲುವ ನಟನೆ ಶಕ್ತಿ ಜೊತೆಗೆ ಮಾನವೀಯ ಗುಣ ಹೊಂದಿದ್ದನು. ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರ ಹಸಿವು ನೀಗಿಸುವ ಆತನ ಸದ್ದಿಲ್ಲದ ಕಾರ್ಯ ನಿಜಕ್ಕೂ ಮಾದರಿ ಆಗಿದೆ.
ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದವನು ನಾನೆಂಬ ಹಮ್ಮು ಇಲ್ಲದೆ ಸರಳವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಆತನ ಗುಣ ಚಿತ್ರರಂಗದವರ ಮನಗೆದ್ದಿತ್ತು.

ಹೆಲ್ಮೆಟ್ ಧರಿಸಿದ್ದರೆ ಅಪರೂಪದ ನಟ ವಿಜಯ್ ಜೀವ ನಿಜಕ್ಕೂ ಉಳಿಯುತ್ತಿತ್ತು ಎಂಬುದು ಅಪಘಾತವನ್ನು ಪರಿಶೀಲಿಸದ ಪೋಲೀಸರು, ವೈದ್ಯರ ಮಾತು.
ಆದ್ದರಿಂದ ಈಗಿನ ಯುವ ಪೀಳಿಗೆ ವಿಜಯ್ ಅವರ ಸೇವಾ ಕಾರ್ಯ, ವೃತ್ತಿಯಲ್ಲಿನ ಬದ್ಧತೆ, ಬಡತನದಲ್ಲಿ ಜನಿಸಿದರೂ ಸಾಧನೆ ಮಾಡಬಹುದು ಎಂಬ ಛಲಗಾರಿಕೆ ಜೊತೆಗೆ ಆತನ ಅಕಾಲಿಕ ಸಾವಿನಿಂದ ಹೆಲ್ಮೆಟ್ ಧರಿಸುವ ಎಚ್ಚರಿಕೆ ಪಾಠವನ್ನು ಕಲಿಯಬೇಕು. ಹೆಲ್ಮೇಟ್ ಧರಿಸುವುದು ಕಾನೂನು, ಪೋಲಿಸರ ಭಯಕ್ಕೆ ಅಲ್ಲ ಎಂಬ ಅರಿವು ಯುವ ಜನರಲ್ಲಿ ಮೂಡಬೇಕು ಎಂದರು.

ಹೆಲ್ಮೇಟ್ ಧರಿಸುವುದರಿಂದ ಕೂದುಲು ಉದರುತ್ತದೆ ಎಂಬ ಸೌಂದರ್ಯ ಪ್ರಜ್ಞೆ ಬೆಳೆಸಿಕೊಂಡರೇ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಲಿಸರು ಎಚ್ಚರಿಗೆ ನಮ್ಮ ಜೀವ ಕಾಪಾಡಲು, ಕುಟುಂಬದವರ ಹಿತಕ್ಕೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಾಯಿ ಮಾದಿಗ ಸಮುದಾಯ, ತಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಕಾರಣಕ್ಕೆ ವಿಜಯ್‌ನಲ್ಲಿ ಜಾತ್ಯತೀತ ನಡೆ ಬೇರೂರಿತ್ತು. ಜಾತಿ-ಧರ್ಮ ರಹಿತ ಆತನ ಕಾರ್ಯಗಳು ಹಿರಿಯರ ಮೆಚ್ಚುಗೆಗೆ ಪಾತ್ರವಾಗಿದ್ದವು. ಅಂದಿನ ಜಾತಿ ವ್ಯವಸ್ಥೆಯ ಕಾಲದಲ್ಲಿ ತಮ್ಮ ತಂದೆ-ತಾಯಿ ಅಂತರ್ಜಾತಿ ವಿವಾಹ ಕುರಿತು ಅನೇಕ ಬಾರಿ ಆಪ್ತರೊಂದಿಗೆ ಚರ್ಚಿಸುತ್ತಿದ್ದು, ಮಾದಿಗ ಸಮುದಾಯದ ಮಹಿಳೆಯನ್ನು ವರಿಸಿದ ಅಪ್ಪನ ಜಾತ್ಯತೀತ ಮನೋಭಾವ ಹಾಗೂ ಅಸ್ಪಶ್ಯತೆ ನೋವನ್ನು ಉಂಡ ಅಮ್ಮನ ಕುರಿತು ಹೆಚ್ಚು ಗೌರವ ಹೊಂದಿದ್ದ ವಿಜಯ್,

ಜಾತಿ-ಧರ್ಮ ಬೇಲಿ ದಾಟಿ ಬೆಳೆಯಬೇಕು, ಜನರಿಗೆ ಸೇವೆ ಮಾಡಬೇಕೆಂಬ ಮಹಾಕನಸು ಕಟ್ಟಿಕೊಂಡಿದ್ದ ಅಪರೂಪದ ನಟನಾಗಿದ್ದ. ಈತನ ಅಕಾಲಿಕ ಸಾವು ಚಿತ್ರರಂಗ, ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ.

  • ಹೆಎಚ್ ಆಂಜನೇಯ, ಮಾಜಿ ಸಚಿವ

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹರಾಜು, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅನೀಲ್ ಕೋಟಿ ಇತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!