ಸೀತಮ್ಮ ಬಾಲಕಿಯರ ಶಾಲೆಯಲ್ಲಿ ಭ್ರಷ್ಟಾಚಾರದ ಘಾಟು.! ಬಿಸಿಯೂಟದಲ್ಲಿ ಅಕ್ರಮ, ಎಸ್‌ಡಿಎಂಸಿ ಅಧ್ಯಕ್ಷರಿಂದಲೇ ದೂರು
ದಾವಣಗೆರೆ; ಕಳೆದ 75 ವರ್ಷಗಳಿಂದ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳೂ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಉಣಬಡಿಸಿದ್ದ ಇಲ್ಲಿನ ರಾಜನಹಳ್ಳಿ ಸೀತಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಬಿಸಿಯೂಟ ನಿರ್ವಹಣೆಯಲ್ಲಿ ನಡೆದ ಬೃಹತ್ ಭ್ರಷ್ಟಾಚಾರವೊಂದು ಬಯಲಿಗೆ ಬಂದಿದೆ.
ಈ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆಯೇ? ಎಂಬ ಅನುಮಾನವೂ ಇದೆ.
ಸ್ವತಃ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಬೇರಪ್ಪ ಅವರು ಇದೀಗ ಶಾಲೆಯಲ್ಲಿ ನಡೆದಿರುವ ಅಕ್ರಮವನ್ನು ಇಂಚಿಂಚಾಗಿ ಬಯಲಿಗೆಳೆದಿದ್ದಾರೆ.
ಬಿಸಿಯೂಟದ ಲೆಕ್ಕದಲ್ಲಿ ಅಕ್ರಮ, ನೌಕರರ ಬದಲಾಗಿ ನೌಕರರ ಮಕ್ಕಳನ್ನು ಕೆಲಸಕ್ಕೆ ಬಳಕೆ, ತಿಂಗಳು ಗೈರಾದರೂ ವೇತನ ವಿತರಣೆ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರ ಮೇಲೆ ಅಗೌರವ, ಪರೀಕ್ಷೆ ಬರೆಸಲು ವಿದ್ಯಾರ್ಥಿಗಳಿಂದ ಹಣ ವಸೂಲಿ… ಹೀಗೆ ಹಲವಾರು ಅಕ್ರಮಗಳು ಬಯಲಾಗಿವೆ.
ಉಪ ಪ್ರಾಂಶುಪಾಲರಾಗಿ/ ಹೆಡ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಆರ್. ಮಂಜಪ್ಪ ಅವರ ವಿರುದ್ಧ ಈ ಬಗ್ಗೆ ಶಾಲೆಯ ಗೌರವ ಅಧ್ಯಕ್ಷರೂ ಆಗಿರುವ ಶಾಸಕರಾದ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಪ ನಿರ್ದೇಶಕರಿಗೆ, ಜಿಲ್ಲಾ ಪಂಚಾಯ್ತಿ ಸಿಇಒ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಆಯುಕ್ತರು, ಬಿಇಒ ಹಾಗೂ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಿಗೆ ದೂರನ್ನೂ ನೀಡಿದ್ದಾರೆ.
ಭ್ರಷ್ಠಾಚಾರ ನಡೆದಿರುವುದಕ್ಕೆ ಒಂದು ಚಿಕ್ಕ ಉದಾಹರಣೆ ನೋಡಿ.
2023ನೇ ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗಾಗಿ ತರಿಸಿಸುವ ಆಹಾರಧಾನ್ಯಗಳ ಪೈಕಿ ಬೇಳೆ 40.23 ಕ್ವಿಂಟಾಲ್ ಪ್ರಾರಂಭಿಕ ಶಿಲ್ಕು ಇರುತ್ತದೆ. ಆ ತಿಂಗಳಲ್ಲಿ ಕೇವಲ 40 ಕೆ.ಜಿ. ಖರ್ಚು ಮಾಡಿ 39.83 ಕ್ವಿಂಟಾಲ್ ಉಳಿದಿರುತ್ತದೆ.
ನವೆಂಬರ್ ತಿಂಗಳಲ್ಲಿ 30.83 ಕ್ವಿಂಟಾಲ್ ಬೇಳೆಯನ್ನೂ ಆರಂಭಿಕ ಶಿಲ್ಕು ಎಂದು ನಮೂದಿಸಿ, ಈ ಪೈಕಿ 29.13 ಕ್ವಿಂಟಾಲ್ ಬೇಳೆಯನ್ನು ಖರ್ಚು ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಅಂದ ಹಾಗೆ ಆ ತಿಂಗಳು ಊಟ ಮಾಡಿರುವುದು 256 ವಿದ್ಯಾರ್ಥಿಗಳು ಮಾತ್ರ.
ಈ 256 ವಿದ್ಯಾರ್ಥಿಗಳಿಗೆ 29.13 ಕ್ವಿಂಟಾಲ್ ಬೇಳೆ ಉಣ ಬಡಿಸಲಾಗಿದೆಯೇ? ಇದು ಸಾಧ್ಯವಾ? ಎಂಬುದು ಪ್ರಶ್ನೆಯಾಗಿ ಉಳಿದಿದೆ. ಇದು ಭ್ರಷ್ಠಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿಯೂ ಹೌದು.
ಅಂದ ಹಾಗೆ ಕುಬೇರಪ್ಪ ಅವರು ಈ ಶಾಲೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಸಲ್ಲಿಸಿರುವ ದೂರಿನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ. ಪ್ರತಿದಿನ ಶಾಲೆಯಲ್ಲಿ ಸುಮಾರು 40-50 ಮಕ್ಕಳು ಮಾತ್ರ ಹಾಲು ಕುಡಿಯುತ್ತಾರೆ. ಸಕ್ಕರೆಯನ್ನು ಸರಿಯಾಗಿ ನೀಡುವುದಿಲ್ಲ ನಾನು ಹೇಳಿದಾಗ ಸಕ್ಕರೆ ತಂದು ಕೊಡುತ್ತಾರೆ ಉಳಿದ ಹಾಲಿನ ಪೌಡರ್ ಎಲ್ಲಿಗೆ ಹೋಗುತ್ತದೆ. ಒಂದು ವಾರ ಹಾಲನ್ನು ಮಕ್ಕಳಿಗೆ (ಸೆಪ್ಟೆಂಬರ್) ತಿಂಗಳಲ್ಲಿ ನೀಡಿಲ್ಲ.
ಮದ್ಯಾಹ್ನದ ಬಿಸಿಯೂಟವನ್ನು ಎಲ್ಲಾ ಮಕ್ಕಳು ಊಟ ಮಾಡುವುದಿಲ್ಲ. ಸುಮಾರು 80-100 ಮಕ್ಕಳು ಮನೆಯಿಂದ ಊಟವನ್ನು ತಂದು ಊಟ ಮಾಡುವುದನ್ನು ನಾನೇ ಸ್ವತಃ ನೋಡಿ ಮಕ್ಕಳನ್ನು ಕೇಳಿದಾಗ ಊಟ ಸರಿ ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಎಲ್ಲಾ ಮಕ್ಕಳಿಗೂ ಖರ್ಚನ್ನು ಹಾಕುತ್ತಾರೆ. ನಾನು ಇದರ ಬಗ್ಗೆ ಕೇಳಿದಾಗ (ಚೆಕ್‌ಗೆ ಸಹಿ ಮಾಡುವಾಗ) ಹಾರಿಕೆ ಉತ್ತರಗಳನ್ನು ನೀಡುತ್ತಾರೆ. ನಾನು ಪ್ರಾರ್ಥನಾ ಸಮಯದಲ್ಲಿ ಊಟದ ಸಮಯದಲ್ಲಿ ಖುದ್ದು ಬಂದು ನೋಡಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಉಪ ಪ್ರಾಂಶುಪಾಲ ಎ.ಆರ್. ಮಂಜಪ್ಪ ಅವರ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಅಕ್ಷರ ದಾಸೋಹವನ್ನು ಮುಖ್ಯ ಶಿಕ್ಷಕರೇ ನಿರ್ವಹಿಸುತ್ತಿದ್ದು, ತರಕಾರಿಯನ್ನು ತರಲು ಜೊತೆಗೆ ಶಾಲೆಯಲ್ಲಿ ಪಾಠ ಮಾಡುವುದನ್ನು ಬಿಟ್ಟು ಒಬ್ಬರು ಇಬ್ಬರು ಶಿಕ್ಷಕರನ್ನು ಕರೆದುಕೊಂಡು ಹೋಗಲಾಗುತ್ತದೆ. ಅಕ್ಷರ ದಾಸೋಹ ಸಿಬ್ಬಂದಿಗೆ ಇದುವರೆಗೂ ಎಷ್ಟು ಬಾರಿ ನಾನು ಹೇಳಿದರೂ ವಪ್ರಾನ್ ಗ್ಯಾಸ್ ಪೈಪ್ ಪಾತ್ರೆಗಳನ್ನು ನೀಡಿಲ್ಲ.
ಪಾಸ್ ಮಾಡಿಸಲು ಹಣ ವಸೂಲಿ: ಎಸ್.ಎಸ್.ಎಲ್.ಸಿ.ಖಾಸಗಿ ಅಭ್ಯರ್ಥಿಗಳ ಪರೀಕ್ಷೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಪಾಸ್ ಮಾಡಿಸಲಿಕ್ಕೆ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿದ್ದು, ಮಾಧ್ಯಮದವರು ಬಂದಾಗ ನನ್ನನ್ನು ಕರೆಸಿ ಶಾಲಾ ಮರ್ಯಾದೆ ಕಾಪಾಡಿ ಎಂದು ಕೇಳಿಕೊಂಡು ನಾವು ನನ್ನ ಮಗಳನ್ನು ಶಾಲೆಗೆ ಬಿಡುವಾಗ ಬೆಲ್ ಹೊಡೆದರೂ ಒಂದೊಂದು ರೂಮಿನಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಪರೀಕ್ಷೆ ಬರೆಸಲಾಗುತ್ತದೆ.
ಕಳೆದ ವರ್ಷ ಉರ್ದು ಮಾಧ್ಯಮದ 9 ಮಕ್ಕಳಿಗೆ ಶೂ ನ್ನು ಕೊಟ್ಟಿಲ್ಲ. ಸ್ವತಃ ಕೈಯಿಂದ ಹಣ ಹಾಕಿ ಕೊಡಿಸಿದ್ದೇನೆ. ಇದುವರೆಗೂ ಮುಖ್ಯ ಶಿಕ್ಷಕರು ಒಂದು ಪಿರಿಯಡ್ ಪಾಠವನ್ನು ಮಕ್ಕಳಿಗೆ ತೆಗೆದು ಕೊಂಡಿರುವುದಿಲ್ಲ ಮತ್ತು ಕಾಲೇಜು ಕಟ್ಟಡ ನಿರ್ಮಾಣ ಮಾಡುವಾಗ ಮುಖ್ಯ ಶಿಕ್ಷಕರು ತಮ್ಮ ಮನೆಗೆ ಸಿಮೆಂಟ್, ಎಂ.ಸ್ಯಾಂಡ್, ಜೆಲ್ಲಿ ಕಲ್ಲುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಕಂಟ್ರ್ಯಾಕ್ಟರ್ ಕಂಪ್ಲೆಂಟ್ ಮಾಡಿದಾಗ ನಮ್ಮಲ್ಲಿ ರಾಜಿ ಮಾಡಿರುತ್ತೇವೆ. ಅದೂ ಸಹ ಕಾಲೇಜು ಸಿ.ಸಿ.ಟಿ.ವಿ. ಯಲ್ಲಿ ದಾಖಲಾಗಿರುತ್ತದೆ ಎಂದವರು ದೂರಿದ್ದಾರೆ.
ರಾಷ್ಟ್ರೀಯ ಹಬ್ಬಗಳಿಗೆ ಖರ್ಚಿನ ವಹಿವಾಟು ಬಗ್ಗೆ ಕೇಳಿದಾಗ ಅವಕಾಶ ಇಲ್ಲ ಎಂದು ತಿಳಿಸಿ 500 ರೂ. ಎಂದು ಹೇಳಿ 3 ಸಾವಿರ ರೂ. ಹಣ ಬಿಡಿಸಿದ್ದಾರೆ.
ಸಾಕಮ್ಮ ಎಂಬ ಗೌರವ (ಅತಿಥಿ ಶಿಕ್ಷಕರಿಗೆ) ಇಪ್ಪತ್ತು ಸಾವಿರ ರೂಪಾಯಿಗಳನ್ನು ಅವರ ಹೆಸರಿಗೆ ಚೆಕ್ ನೀಡಿದ್ದು, ನಾನು ಅವರನ್ನು ವಿಚಾರ ಮಾಡಿದಾಗ, ಅವರು ಮುಖ್ಯ ಶಿಕ್ಷಕರಿಗೆ ವಾಪಾಸು ನೀಡಿರುವುದಾಗಿ ಹೇಳಿದ್ದಾರೆ. ಈ ರೀತಿ ಎರಡು ಸಲ ಚೆಕ್ ನೀಡಲಾಗಿದೆ. ಇದರ ಬಗ್ಗೆ ನಾನು ವಿಚಾರ ಮಾಡಿದರೆ ಮಾಹಿತಿ ನೀಡಿಲ್ಲ.
ಸ್ವಂತ ಕೆಲಸಕ್ಕೆ ನೌಕರರ ಬಳಕೆ:
ಡಿ ದರ್ಜೆ ನೌಕರರಾದ ಸಾವಿತ್ರಮ್ಮ ಎಂ.ಬಿ. ಅವರ ಬದಲಾಗಿ ಅವರ ಮಗ ಕಿರಣ್ ಕುಮಾರ್ ಇವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದು, ಅವನು ಶಾಲೆಯ ಕೆಲಸ ಬಿಟ್ಟು ಎ.ಆರ್.ಮಂಜಪ್ಪ ಅವರು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವನು 1 ತಿಂಗಳು. ಗೈರು ಹಾಜರಾಗಿದ್ದರೂ ಅವನ ಸಂಬಳ ಕೊಡಲಾಗಿದೆ.
ಕಾಲೇಜು ಸಿಬ್ಬಂದಿ ವರ್ಗದ ಮೇಲೆ ನಮ್ಮ ಎಸ್.ಡಿ.ಎಂ.ಸಿ. ಯವರನ್ನು ಎತ್ತಿ ಕಟ್ಟಲಾಗುತ್ತದೆ. ಬಾವುಟವನ್ನು ತಾನೂ ಹಾರಿಸಬೇಕೆಂದು ನಮ್ಮ ಅವರ ಮಧ್ಯೆ ಮನಸ್ತಾಪ ಉಂಟು ಮಾಡುತ್ತಾರೆ. ಮತ್ತು ಶಾಲೆಯ ಮಹಿಳಾ ಅಡುಗೆ ಸಿಬ್ಬಂದಿಯನ್ನು ಕರೆದು ಎಸ್.ಡಿ.ಎಂ.ಸಿ. ಅಧ್ಯಕ್ಷರ ಮೇಲೆ ದೂರು ನೀಡಿರಿ ಎಂದು ಹೇಳುತ್ತಾರೆ. ಶಾಲೆಯಲ್ಲೂ ಶಿಕ್ಷಕರ ಜೊತೆ ಒಳ್ಳೆ ಬಾಂಧವ್ಯವನ್ನು ಹೊಂದಿಲ್ಲ. ಇವರ ಮೇಲೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದವರೂ ದೂರಿನಲ್ಲಿ ತಿಳಿಸಿದ್ದಾರೆ.