ಕಟ್ಟಡ ಪ್ರಾರಂಭವಾಗಿ ಎರಡೇ ವರ್ಷದಲ್ಲೇ ಶಿಥಿಲಗೊಂಡ ಸೂರಗೊಂಡನಕೊಪ್ಪದ ಮದ್ಯವರ್ಜನ ಶಿಬಿರ ಕೇಂದ್ರ!

ದಾವಣಗೆರೆ: ಮದ್ಯ ಸೇವನೆ ಮಾಡುವ ಲಂಬಾಣಿ ಸಮುದಾಯದ ಜನರನ್ನು ಮದ್ಯ ಸೇವಿಸದಂತೆ ಅರಿವು ಮೂಡಿಸಿ ಸಮಾಜದ ಮುನ್ನೆಲೆಗೆ ತರುವ ಸಲುವಾಗಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ನಿರ್ಮಿಸಲಾಗಿದ್ದ ಮದ್ಯ ವರ್ಜನ ಶಿಬಿರ ಕೇಂದ್ರ ಸ್ಥಾಪಿಸಿದ ಎರಡೇ ವರ್ಷದಲ್ಲಿ ಶಿಥಿಲಗೊಂಡಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

2017-18ನೇ ಸಾಲಿನಲ್ಲಿ ಮದ್ಯವರ್ಜನ ಶಿಬಿರ ಕೇಂದ್ರ ನಿರ್ಮಾಣಕ್ಕೆ ತಾಂಡಾ ಅಭಿವೃದ್ದಿ ನಿಗಮದಿಂದ 1 ಕೋಟಿ 32 ಲಕ್ಷ ರೂ. ಬಿಡುಗಡೆಯಾಗಿದೆ. ಈ ಕಾಮಗಾರಿಯ ಟೆಂಡರ್ ದಾವಣಗೆರೆ ನಿರ್ಮಿತಿ ಕೇಂದ್ರಕ್ಕೆ ಆಗಿದ್ದು, 2017-18ರಲ್ಲೇ ಕಾಮಗಾರಿ ಆರಂಭಿಸಿ, 2019-20ಕ್ಕೆ ಸಂಪೂರ್ಣ ಕೆಲಸ ಮುಗಿಸಲಾಗಿದೆ. ದಾವಣಗೆರೆ ನಿರ್ಮಿತಿ ಕೇಂದ್ರ ತನ್ನೆಲ್ಲಾ ಕೆಲಸವನ್ನು ಮುಗಿಸಿ ಆಡಳಿತ ಮಂಡಳಿಗೆ ಹಸ್ತಾಂತರಿಸಿದ್ದು, ಸದರಿ ಕಟ್ಟಡವನ್ನು ಉದ್ಘಾಟನೆ ಮಾಡಿ, ಮದ್ಯವರ್ಜನ ಕೇಂದ್ರಕ್ಕೆ ಚಾಲನೆಯನ್ನು ಸಹ ನೀಡಿದ್ದು, ಇದೀಗ ಜನರು ಭೇಟಿ ನೀಡುತ್ತಿದ್ದಾರೆ.


ದಾವಣಗೆರೆ ನಿರ್ಮಿತಿ ಕೇಂದ್ರದಿ0ದ ಆರಂಭವಾದ ಈ ಕಟ್ಟಡ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಮದ್ಯ ವರ್ಜನ ಕೇಂದ್ರದ ಬಾಗಿಲು, ಗೋಡೆಗಳೆಲ್ಲ ಬಿರುಕು ಬಿಟ್ಟಿವೆ. ಅಷ್ಟೇಅಲ್ಲದೆ ಕಟ್ಟಡ ಮೇಲ್ ಭಾಗದಲ್ಲಿ ಸರಳುಗಳು ಹಾಗೆ ಇದ್ದು ಇನ್ನೂ ಕಾಮಗಾರಿ ಸಂಪೂರ್ಣವಾಗಿಲ್ಲವೆ0ಬ0ತೆ ಕಂಡುಬರುತ್ತಿದೆ. ಸರ್ಕಾರ ಏನೇ ಕಾಮಗಾರಿ ಕೈಗೊಂಡರು ಅದು ಜನರ ಸಾರ್ವಜನಿಕರ ತೆರಿಗೆ ಹಣದಿಂದಲೇ ಮಾಡುತ್ತದೆ. ಕಟ್ಟಡ ಆರಂಭವಾಗಿ 2 ವರ್ಷದಲ್ಲಿ ಶಿಥಿಲಾವಸ್ಥೆ ಬಂದಿದೆ ಎಂದರೆ, ತಾಂಡಾ ಅಭಿವೃದ್ದಿ ನಿಗಮ, ಜಿಲ್ಲಾಡಳಿತ ಸೇರಿದಂತೆ ಒಟ್ಟಾರೆ ಸರ್ಕಾರದ ನುಂಗುಬಾಕತನ ಎದ್ದು ಕಾಣುತ್ತಿದೆ. ಇದಕ್ಕೆ ಈಗ ಹೊಣೆಗಾರರು ಯಾರಾಗುತ್ತಾರೆ? ಸೂರಗೊಂಡನಕೊಪ್ಪದ ಆಡಳಿತ ಮಂಡಳಿಯೋ ಅಥವಾ ತಾಂಡಾ ಅಭಿವೃದ್ದಿ ನಿಗಮವೋ.? ಕಮಿಷನ್ ದಂಧೆ ಆಧಾರದಲ್ಲಿ ಹಣವನ್ನು ಬೇಕಾಬಿಟ್ಟಿಯಾಗಿ ಬಳಸುವುದರಿಂದ ಇಂತಹ ಕಟ್ಟಡಗಳೇ ನಿರ್ಮಾಣವಾಗಲಿದೆ ಹೊರತು ಕೋಟೆಗಳಂತ ಕಟ್ಟಡಗಳಲ್ಲ.

ಸೂರಗೊಂಡನಕೊಪ್ಪದ ಮದ್ಯವರ್ಜನ ಕೇಂದ್ರ ಸಂಪೂರ್ಣ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಕಾಮಗಾರಿ ಕೈಗೊಂಡ ದಾವಣಗೆರೆ ನಿರ್ಮಿತಿ ಕೇಂದ್ರ ಮತ್ತು ಅನುದಾನ ಬಿಡುಗಡೆಗೊಳಿಸಿದ ತಾಂಡಾ ಅಭಿವೃದ್ದಿ ನಿಗಮ ಜವಾಬ್ದಾರಿ ಹೊತ್ತು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!