ಅನಧಿಕೃತ ಪತ್ರಕರ್ತರ ಹಾವಳಿ ತಡೆಗೆ ಹರಿಹರ kuwj ಹಾಗೂ ವರದಿಗಾರರ ಕೂಟದಿಂದ ಮನವಿ

ಹರಿಹರ; ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಮಿತಿಮೀರಿರುವ ನಕಲಿ ಮತ್ತು ಅನಧಿಕೃತ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ  ಹರಿಹರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದಾವಣಗೆರೆ ವರದಿಗಾರರ ಕೂಟದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯ್ತು. 

ಪತ್ರಕರ್ತರೆಂದು ಹೇಳಿಕೊಂಡು ಕೆಲವರು ತಾಲ್ಲೂಕಿನ ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳು, ಗ್ರಾಪಂ ಕಚೇರಿ, ಕಂದಾಯ, ಆರೋಗ್ಯ. ಉದ್ಯಮ ಸಂಸ್ಥೆಗಳು, ಸಾರ್ವಜನಿಕರ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿ ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ.

ಯಾವುದೇ ಆಹ್ವಾನ, ಅನುಮತಿಯಿಲ್ಲದೆ ಕಚೇರಿಗಳ ಒಳನುಗ್ಗಿ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾ, ದೌರ್ಜನ್ಯ ಎಸಗುವುದು ಮತ್ತು ಇಲ್ಲ, ಸಲ್ಲದ ಆರೋಪಗಳನ್ನು ಮಾಡಿ ಹಣ ವಸೂಲಿ ಮಾಡುತ್ತಾರೆ. ಹಣ ನೀಡದಿದ್ದರೆ ಅಂತವರ ವಿರುದ್ಧ ಕೆಲವು ಸಾಮಾಜಿಕ ಜಾಲ ತಾಣಗಳಲ್ಲಿ ಅನಧಿಕೃತವಾಗಿ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ.

ವಾರ್ತಾ ಇಲಾಖೆ, ಆರ್‌ಎನ್‌ಐನಲ್ಲಿ ನೊಂದಣಿಯಾಗದ ಯೂಟ್ಯೂಬ್ ಚಾನಲ್ ಅಥವಾ ವೆಬ್‌ಸೈಟ್‌ಗಳು ಅಧಿಕೃತ ಸುದ್ದಿ ಮಾಧ್ಯಮಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಇಂತಹ ಅನಧಿಕೃತ ಮಾಧ್ಯಮ ಸಂಸ್ಥೆಗಳ ಕಾರ್ಡ್ಗಳನ್ನು ಹೊಂದಿರುವ ಅಥವಾ ಅಧಿಕೃತ ಸುದ್ದಿ ಮಾಧ್ಯಮಗಳ ಹಳೆಯ ಕಾರ್ಡುಗಳು ಇಲ್ಲವೆ ತಾವೆ ಸೃಷ್ಟಿಸಿಕೊಂಡ ಸ್ವಯಂ ವಿಸಿಟಿಂಗ್ ಕಾರ್ಡ್ ಹೊಂದಿರುವ ನಕಲಿ ಪತ್ರಕರ್ತರ ಸಂಖ್ಯೆ ಜಿಲ್ಲೆಯಾದ್ಯಂತ ಮಿತಿಮೀರಿದೆ.

ಕಾನೂನು-ನಿಯಮಗಳನ್ನು ಗಾಳಿಗೆ ತೂರಿ, ಕನಿಷ್ಟ ಸೌಜನ್ಯ, ಸಭ್ಯತೆಯನ್ನು ಮೀರಿ ಮನಬಂದಂತೆ ಸುದ್ದಿ ಮಾಡುತ್ತಾ, ತಮ್ಮ ದುರ್ವರ್ತನೆ, ದಬ್ಬಾಳಿಕೆಯಿಂದ ಪ್ರಮಾಣಿಕ ಪತ್ರಕರ್ತರಿಗೆ ಕೆಟ್ಟ ಹೆಸರು ತರುವುದಲ್ಲದೆ ಸಮಾಜಕ್ಕೆ ಉಪದ್ರವಕಾರಿಯಾಗಿರುವ ಜಿಲ್ಲೆಯ ನಕಲಿ ಪತ್ರಕರ್ತರ ಹಾಗೂ ಅನಧಿಕೃತ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮನವಿ ಮಾಡಿದರು..

ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಮಾತನಾಡಿ, ಶೀಘ್ರದಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳು ಹಾಗೂ ವರದಿಗಾರರ ಮತ್ತು ಆಯಾ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಅನಧಿಕೃತ ಪತ್ರಕರ್ತರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಾಸುದೇವ್, ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ, ತಾಲ್ಲೂಕು ಸಂಘದ ಕಾರ್ಯದರ್ಶಿ ಕೀರ್ತಿಕುಮಾರ್ ಎಚ್.ಸಿ., ಶೇಖರ್ ಗೌಡ ಪಾಟೀಲ್, ಕೆ.ಜೈಮುನಿ, ಚಂದ್ರಶೇಖರ್ ಬಿ.ಎಂ, ಪ್ರವೀಣ್ ಕುಮಾರ್, ಮಂಜಾನಾಯ್ಕ, ಕುಮಾರ್ ಜಿ. ಮಂಜುನಾಥ್ ರಾಜನಹಳ್ಳಿ, ವಿಶ್ವನಾಥ್ ಮೈಲಾಳ್, ಮಂಜುನಾಥ್ ಆರ್, ಸುರೇಶ್ ಕುಣೆಬೆಳಕೆರೆ, ಕೃಷ್ಣ ರಾಜೊಳ್ಳಿ, ಪಂಚಾಕ್ಷರಿ, ಎಚ್.ಶಿವಪ್ಪ, ವೈ.ನಾಗರಾಜ್ ಇತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!