ತೈಲ ಬೆಲೆ ಏರಿಕೆ ನಿಯಂತ್ರಿಸಿ ಕೊವಿಡ್ ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ; ಜೆಡಿಎಸ್ ಪ್ರತಿಭಟನೆ

 

ದಾವಣಗೆರೆ.ಜೂ.೨೮;  ಬೆಲೆ ಏರಿಕೆ ನಿಯಂತ್ರಿಸಬೇಕು  ಹಾಗೂ ಕೊರೋನಾ ಸೋಂಕಿನಿಂದ ಸಾವಿಗೀಡಾದ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ

ಜಿಲ್ಲೆಯ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ನಿಂದ ಬಾಧಿತರಾಗಿ ಸಂಕಷ್ಟದಿಂದ ರಾಜ್ಯದ ಜನತೆ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರ , ರೈತ ಮತ್ತು ರೈತ -ಕೂಲಿ ಕಾರ್ಮಿಕರ ಮತ್ತು ದೀನ – ದಲಿತರ ಬದುಕಿನ ಮೇಲೆ ಬರೆ ಎಳೆಯುವ ರೀತಿ ಇಂಧನ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ವಿದ್ಯುತ್ ದರ ರಸಗೊಬ್ಬರದ ಬೆಲೆ ಮುಂತಾದವುಗಳ ಬೆಲೆ ಗಗನಕ್ಕೇರಿಸಿ  ಜನ ಜೀವನವನ್ನು ಅಸ್ತವ್ಯಸ್ತಗೊಳ್ಳುವಂತೆ  ಮಾಡಿದೆ. ಎರಡನೇ ಅಲೆ ನಿಯಂತ್ರಿಸಲು ವಿಧಿಸಿದ ಲಾಕ್ ಡೌನ್

ಬಹುತೇಕ ಜನತೆ ಬಾಧಿತವಾಗಿದೆ . ಕೊರೋನಾ  ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಸಾವಿರಾರು ಕುಟುಂಬಗಳಲ್ಲಿನ  ದುಡಿಯುವ ವ್ಯಕ್ತಿ ಸಾವನ್ನಪ್ಪಿ ಕುಟುಂಬಗಳು ನಿರ್ಗತಿಕರಾಗಿ ಬೀದಿ ಪಾಲಾಗಿದ್ದಾರೆ . ಅಲ್ಲದೇ , ಎಷ್ಟೋ ಕುಟುಂಬಗಳಲ್ಲಿ ತಂದೆ – ತಾಯಿಗಳು ಮರಣ ಹೊಂದಿ , ಎಳೆಯ ಮಕ್ಕಳು ಅನಾಥರಾಗಿದ್ದಾರೆ . ಅದೇ ರೀತಿ  ಲಾಕ್‌ಡೌನ್‌ನಿಂದ ರೈತ ಸಮುದಾಯ , ತಾನು ಬೆಳೆದ ಆಹಾರ ಸಾಮಗ್ರಿ , ತರಕಾರಿ ಮತ್ತು ಹಣ್ಣು – ಹಂಪಲಗಳನ್ನು ಕಟಾವು ಮಾಡದೇ ಮಾರಾಟ ಮಾಡಲು ವರ್ತಕರು ಮುಂದೆ ಬರದೇ ತಮ್ಮ ಸರ್ವಸ್ವವನ್ನೂ ಒತ್ತೆ ಇಟ್ಟು ಬೆಳೆದ ಫಸಲನ್ನು ಹೊಲದಲ್ಲಿ ಕೊಳೆಯಲು ಬಿಟ್ಟು ನಿರ್ಗತಿಕರಾಗಿದ್ದಾರೆ .

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆ ಇಲ್ಲದೇ , ಶ್ರೀಸಾಮಾನ್ಯ ಮತ್ತು ರೈತ ಸಮುದಾಯ ಒಳಗೊಂಡಂತೆ ಇತರರು ಬಳಸುವ ದಿನನಿತ್ಯ ಮತ್ತು ದೈನಂದಿನ ಬಳಕೆಯ ಪದಾರ್ಥಗಳ ಮತ್ತು ಗೊಬ್ಬರ  ಬೆಲೆಯನ್ನು ಗಗನಕ್ಕೆ ಏರಿಸಿ  ಜನಜೀವನ ಅಸ್ತವ್ಯಸ್ತ ಮಾಡಿದೆ ಎಂದು ಪ್ರತಿಭಟನಾ ನಿರತರು

ಆರೋಪಿಸಿದರು. ಈ ಕೂಡಲೇ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು ಹಾಗೂ ಕೊರೊನಾ ಸೋಂಕಿನಿಂದ ಮೃತರಾದ ಕುಟುಂಬಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಹೊದಿಗೆರೆ ರಮೇಶ್, ‌ಅಮಾನುಲ್ಲಾ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!