smart class; ಸರ್ಕಾರಿ ಶಾಲೆಗಳ ಸ್ಮಾರ್ಟ್ ಕ್ಲಾಸ್ ಮೇಲ್ದರ್ಜೆಗೇರಿಸಿ, ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ

ದಾವಣಗೆರೆ, ನ. 06: ಜಿಲ್ಲೆಯಲ್ಲಿನ 186 ಶಾಲೆಗಳಿಗೆ ಅಗತ್ಯವಿರುವ 225 ಕೊಠಡಿಗಳನ್ನು 31.70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ಉಳಿತಾಯವಾದ ಅನುದಾನದಲ್ಲಿ ಬೇಡಿಕೆ ಇರುವ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲು ಕೈಗಾರಿಕಾಭಿವೃದ್ದಿ ಆಯುಕ್ತರು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ತಿಳಿಸಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಈಗಾಗಲೇ 19.46 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಲೆಯಲ್ಲಿನ ಮೂಲಭೂತ ಸೌಕರ್ಯದ ಜೊತೆಗೆ ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮಪಡಿಸಲು ಡಿಜಿಟಲ್ ಸ್ಮಾರ್ಟ್ ಕ್ಲಾಸ್ (smart class) ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿ ಬ್ರಾಡ್‍ಬ್ಯಾಂಡ್ ದರ ಕಡಿಮೆ ಇದ್ದು ಶಾಲೆಗಳಿಗೆ ಕಂಪ್ಯೂಟರ್ ಒದಗಿಸಿ ಬ್ರಾಡ್‍ಬ್ಯಾಂಡ್ ಸಂಪರ್ಕ ಕಲ್ಪಿಸಿ ಶಿಕ್ಷಕರು ಆನ್‍ಲೈನ್‍ನಲ್ಲಿಯೇ ಎಲ್ಲಾ ತರಬೇತಿ ಪಡೆದುಕೊಂಡು ಸ್ಮಾರ್ಟ್ ಕ್ಲಾಸ್ ನಡೆಸಲು ಅವಕಾಶ ಇದೆ. ಖಾಸಗಿ ಶಾಲೆಯಂತೆ ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ಕಲಿಕೆಯಲ್ಲಿ ಸ್ಮಾರ್ಟ್ ಕ್ಲಾಸ್ ಉಪಯುಕ್ತವಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಕುಡಿಯುವ ನೀರಿನ ಕಾಮಗಾರಿ;

ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 871 ಅನುಮೋದಿತ ಕಾಮಗಾರಿಗಳಲ್ಲಿ 866 ಟೆಂಡರ್ ಕರೆಯಲಾಗಿದ್ದು 677 ಆರಂಭವಾದ ಕಾಮಗಾರಿಗಳಾಗಿದ್ದು 520 ಪೂರ್ಣಗೊಳಿಸಿ 298 ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಇಂಜಿನಿಯರ್ ಸಭೆಗೆ ತಿಳಿಸಿದರು. ಈ ವೇಳೆ ಗ್ರಾಮೀಣ ಪ್ರದೇಶದಲ್ಲಿನ ಶುದ್ದ ಕುಡಿಯುವ ನೀರಿನ ನಿರ್ವಹಣೆಯನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಿಸಲು ಅವಕಾಶ ಇದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದ್ದು ನಿರ್ವಹಣಾ ಭಾರವಿರುವುದಿಲ್ಲ. ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸಲು ತಿಳಿಸಿದಾಗ ಈ ಬಗ್ಗೆ ಪರಿಶೀಲಿಸಿ ಟೆಂಡರ್ ಕರೆಯಲಾಗುತ್ತದೆ ಎಂದು ಸಿಇಓ ಸುರೇಶ್ ಇಟ್ನಾಳ್ ತಿಳಿಸಿದರು.

siddaramaiah; ಕಾಂಗ್ರೆಸ್ ಸಿದ್ಧಾಂತ ಬೆಂಬಲಿಸಿ ಬರುವವರಿಗೆ ಸ್ವಾಗತ: ಮುಖ್ಯಮಂತ್ರಿ

 ರೇಷ್ಮೆ ಉತ್ತೇಜಿಸಿ;

ರೇಷ್ಮೆ ಬೆಳೆಯನ್ನು ಹೆಚ್ಚು ವಿಸ್ತರಣೆ ಮಾಡಬೇಕು, ಜಿಲ್ಲೆಯಲ್ಲಿ 981 ಎಕರೆ ರೇಷ್ಮೆ ವಿಸ್ತರಣಾ ಪ್ರದೇಶವಿದ್ದು ಕಳೆದ ಎರಡು ವರ್ಷದಲ್ಲಿ 115 ಎಕರೆಯನ್ನು ಹೊಸದಾಗಿ ವಿಸ್ತರಣೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದಾಗ ಮಿಲ್ಕ್ ಮತ್ತು ಶಿಲ್ಕ್ ಪ್ರತಿ ತಿಂಗಳು ಆದಾಯ ತರುವಂತಹ ಚಟುವಟಿಕೆಯಾಗಿದ್ದು ಲಕ್ಷಾಂತರ ಮೊತ್ತದ ಆದಾಯ ಈ ಕ್ಷೇತ್ರದಲ್ಲಿ ಗಳಿಸಲು ವಿಫುಲ ಅವಕಾಶಗಳಿದ್ದು ಬೆಳೆಗೆ ಬೇಕಾದ ಹವಾಮಾನದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

 ತಾಯಿ, ಮಗು ಮರಣ ಪ್ರಮಾಣ ಆಡಿಟ್ ಗೆ ಸೂಚನೆ;

ಹೆರಿಗೆ ಸಂದರ್ಭದಲ್ಲಿ ಮರಣ ಹೊಂದುವ ತಾಯಿ ಮತ್ತು ಶಿಶು ಮರಣಗಳನ್ನು ತಗ್ಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಮರಣ ಪ್ರಕರಣ ಸಂಭವಿಸಿದರೂ ಇದಕ್ಕೆ ಕಾರಣಗಳೇನು ಎಂದು ಆಡಿಟ್ ನಡೆಸಬೇಕು. 2023 ರ ಸೆಪ್ಟೆಂಬರ್ ವರೆಗೆ  12 ತಾಯಿ ಮರಣ ಅಂದರೆ ಒಂದು ಲಕ್ಷ ಜೀವಂತ ಜನನಗಳಿಗೆ 90 ತಾಯಿ ಮರಣ ಪ್ರಮಾಣವಿರುತ್ತದೆ. ಮತ್ತು ಶಿಶು ಮರಣ 215 ಸಂಭವಿಸಿದ್ದು ಒಂದು ಸಾವಿರ ಜೀವಂತ ಜನನಗಳಿಗೆ 16 ಶಿಶು ಮರಣ ಪ್ರಮಾಣ ಇರುತ್ತದೆ. ಈ ಪ್ರಮಾಣ ಗಣನೀಯವಾಗಿ ಇಳಿಕೆಯಾಗಬೇಕು, ಈ ನಿಟ್ಟಿನಲ್ಲಿ ಪ್ರತಿ ಮರಣ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಆಡಿಟ್ ನಡೆಸಬೇಕು ಎಂದು ಕಾರ್ಯದರ್ಶಿಯವರು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದಾಗ ಈ ಸಭೆಗೆ ನಾನು ಭಾಗವಹಿಸುವೆ ಎಂದು ಸಿಇಓ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

ಉದ್ಯೋಗ ಖಾತರಿ:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ಈ ವರ್ಷ 35 ಲಕ್ಷ ವಾರ್ಷಿಕ  ಮಾನವ ದಿನಗಳ ಗುರಿಯಲ್ಲಿ 195.40 ಕೋಟಿ ಕಾರ್ಮಿಕ ಆಯವ್ಯಯ ಗುರಿಯನ್ನು ಹೊಂದಲಾಗಿದೆ. ಅಕ್ಟೋಬರ್ ಅಂತ್ಯದವರೆಗೆ 24.05 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಒಟ್ಟು ಜಿಲ್ಲೆಯಲ್ಲಿ 230568 ಜಾಬ್ ಕಾರ್ಡ್‍ಗಳನ್ನು ವಿತರಿಸಲಾಗಿದೆ ಎಂದು ಉಪಕಾರ್ಯದರ್ಶಿ ಕೃಷ್ಣನಾಯ್ಕ್ ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!