ಬಂಡಾಯದ ಬಾವುಟ ಹಾರಿಸಿದ ವಿನಯ್ ಕುಮಾರ್: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಅಹಿಂದ ನಾಯಕ, ಕಾಂಗ್ರೆಸ್ ಟಿಕೆಟ್ ವಂಚಿತ ಜಿ. ಬಿ. ವಿನಯ್ ಕುಮಾರ್ ಅಧಿಕೃತವಾಗಿ ಘೋಷಿಸಿದರು.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಮೂಡಿತ್ತು. ಆದ್ರೆ, ಎಸ್. ಎಸ್. ಬಡಾವಣೆಯ ಜನಸಂಪರ್ಕ ಕಚೇರಿಯಲ್ಲಿ ಕರೆದಿದ್ದ ಆಪ್ತರು, ಮುಖಂಡರು, ಹಿತೈಷಿಗಳ ಸಭೆಯಲ್ಲಿ ಅಧಿಕೃತವಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಸಭೆಯ ಆರಂಭದಲ್ಲಿಯೇ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು ನನಗೆ ಟಿಕೆಟ್ ತಪ್ಪಿದಾಗ ಯಾರೂ ಕರೆ ಮಾಡಲಿಲ್ಲ, ಮನೆ ಬಾಗಿಲಿಗೂ ಯಾರೂ ಬರಲಿಲ್ಲ. ಆದ್ರೆ, ಈಗ ನನ್ನ ಜನಪ್ರಿಯತೆ ಅರಿತ ಬಳಿಕ ರಾಜ್ಯಮಟ್ಟದಲ್ಲಿ ಸಂಧಾನ ಮಾಡಿಸಲು ಮುಂದಾದರು. ಟಿಕೆಟ್ ಘೋಷಣೆಯಾದಾಗ ನನ್ನನ್ನು ಸಂಪರ್ಕಿಸಿದ್ದರೆ ಕಣದಿಂದ ಹಿಂದೆ ಸರಿಯಬೇಕು ಎಂದು ಮನಸ್ಸಿನಲ್ಲಿ ಅನಿಸುತಿತ್ತೋ ಏನೋ ಗೊತ್ತಿಲ್ಲ. ಈಗ ಕಾಲ ಮಿಂಚಿ ಹೋಗಿದೆ. ಯಾವುದೇ ಒತ್ತಡ, ಆಮೀಷ, ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಲು ಕಾರಣ ಈ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ. ನೀವು ತೋರಿದ ಪ್ರೀತಿ ವಿಶ್ವಾಸದ ಮುಂದೆ ಯಾವುದೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.
ಒಂದು ಫೊಟೋ ಹಲವು ಗೊಂದಲಗಳನ್ನು ಹುಟ್ಟು ಹಾಕಿತು. ನಾನು ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ನಿಜ. ಆದ್ರೆ, ಫೋಟೊ ವೈರಲ್ ಆದ ಬಳಿಕ ವಿನಯ್ ಕುಮಾರ್ ಕಣದಿಂದ ಹಿಂದೆ ಸರಿಯುತ್ತಾರೆ, ಬಂಡಾಯ ಶಮನವಾಗಿದೆ, ಎಲ್ಲವೂ ಸರಿ ಹೋಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಈ ನಿರ್ಧಾರ ಆಗಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರೂ ಸಹ ಬಂಡಾಯ ಶಮನವಾಗಿದೆ, ಎಲ್ಲವೂ ಬಗೆಹರಿದಿದೆ. ವಿನಯ್ ಕುಮಾರ್ ಜೊತೆ ಮಾತನಾಡಿದ್ದು ಸರಿ ಹೋಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಯುವ ಉತ್ಸಾಹಿ ನಾಯಕ ವಿನಯ್ ಕುಮಾರ್, ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು ಎಂದಷ್ಟೇ ಪೋಸ್ಟ್ ಹಾಕಿದ್ದರು ಎಂದರು.
ಪೋಸ್ಟ್ ನಲ್ಲಿ ಸಮಾಲೋಚನೆ ಅಂತಾ ಬರೆಯಲಾಗಿತ್ತು. ಸಾಮಾಜಿಕ ಜಾಲತಾಣ ಹಾಗೂ ಎಕ್ಸ್ ನಲ್ಲಿ ಹಾಕಿರುವ ಪೋಸ್ಟ್ ನಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ ವಿನಯ್ ಎಂದು ಎಲ್ಲಾದರೂ ಇತ್ತಾ? ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಾದ್ಯಂತ ಕಳೆದೊಂದು ವರ್ಷದಿಂದ ಪಾದಯಾತ್ರೆ ಮಾಡಿದ್ದೇನೆ, ಜನರ ಭೇಟಿಯಾಗಿದ್ದೇನೆ. ಪ್ರಜಾಪ್ರಭುತ್ವದ ಗೆಲುವಿಗೆ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಪಾಳೆಗಾರಿಕೆ ಕೊನೆಯಾಗಬೇಕು. ಜನಸಾಮಾನ್ಯರ ಕೈಗೆ ಅಧಿಕಾರ ಸಿಗಬೇಕು ಎಂಬುದು ನನ್ನ ಉದ್ದೇಶ ಎಂದು ತಿಳಿಸಿದರು.