ಹೊನ್ನಾಳಿಯ ಯುವಕರನ್ನು ಹಾಳು ಮಾಡುವ ಕೆಲಸ ರೇಣುಕಾಚಾರ್ಯ ಮಾಡಿದ್ದಾರೆ : ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಕಾಂಗ್ರೇಸ್ ಜಿಲ್ಲಾದ್ಯಕ್ಷ
![congress_President_hb_manjappa_against_Renukacharya[1]](https://garudavoice.com/wp-content/uploads/2021/06/congress_President_hb_manjappa_against_Renukacharya1.jpg)
ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಯುವಕರನ್ನು ಹಾಳು ಮಾಡುವ ಕೆಲಸ ಎಂ.ಪಿ. ರೇಣುಕಾಚಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿರುವ ಅವರು, ಬಿಜೆಪಿಯವರು ಸುಳ್ಳು ಹೇಳುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ. ರೇಣುಕಾಚಾರ್ಯನ ಹಣೇಬರಹವೂ ಅಷ್ಟೆ. ತಾಲ್ಲೂಕಿನ 18 ವರ್ಷದ ಯುವಕರಿಂದ ಮಾಡಬಾರದ ಕೆಲಸ ಮಾಡಿಸಿ, ಕುಡಿಸಿ, ಎಲ್ಲೆಲ್ಲಿಗೋ ಅವರನ್ನು ಕಳಿಸಿ ಅವರನ್ನು ಹಾಳುಮಾಡಿದ್ದಾನೆ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ. ಹೊನ್ನಾಳಿಯ ಸಾಸ್ವೇಹಳ್ಳಿ ಗ್ರಾಮದಲ್ಲಿ ಆಸ್ಪತ್ರೆಯಿದ್ದರೂ ಒಬ್ಬ ವೈದ್ಯರು, ಶೂಶ್ರೂಷಕಿಯರು ಇಲ್ಲ. ಹಾಗಿದ್ದರೂ ಹೊನ್ನಾಳಿಯಲ್ಲಿ ಎಲ್ಲವೂ ಸರಿಯಿದೆ ಎಂದು ಪ್ರಚಾರ ತೆಗೆದುಕೊಳ್ಳುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗೆ ನಾಚಿಕೆಯಾಗಬೇಕು ಎಂದು ಏಕವಚನದಲ್ಲಿಯೇ ಹರಿಹಾಯ್ದಿದ್ದಾರೆ.
ಕೇವಲ ಫೋಟೊ, ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಚಾರ ತೆಗೆದುಕೊಳ್ಳುವುದಕ್ಕಲ್ಲ ಜನರು ರೇಣುಕಾಚಾರ್ಯನನ್ನ ಆರಿಸಿದ್ದು, ವೈದ್ಯರ, ಶೂಶ್ರೂಷಕರನ್ನು ಆಸ್ಪತ್ರೆಗೆ ನೇಮಿಸಬೇಕು. ಆದರೆ, ಆ ಕೆಲಸವನ್ನು ಅವರು ಮಾಡಿಲ್ಲ. ಇನ್ನೇನು ಇವರು ತಾಲೂಕಲ್ಲಿ ಸುಧಾರಣೆ ತಂದಿದ್ದಾರೆ ಎಂದು ಪ್ರಶ್ನಿಸಿದರು.
ಅಡ್ವಾಣಿ ಅವರ ನೇತೃತ್ವದಲ್ಲಿ ಹಿಂದೆಯೇ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣ, ಇಟ್ಟಿಗೆ, ಮರಳು ಸಂಗ್ರಹಿಸಲಾಗಿತ್ತು, ನಂತರ ಅದನ್ನು ಯಾವುದಕ್ಕೆ ಮಾರಿದರೊ ಗೊತ್ತಿಲ್ಲ. ಮತ್ತೆ ಈಗ ಹಣ ಸಂಗ್ರಹಿಸಿದ್ದಾರೆ. ದೇವರ ಗಂಟನ್ನೇ ಹೊಡೆಯುವ ಬಿಜೆಪಿಗರು ಇನ್ನೂ ಜನರ ಗಂಟನ್ನು ಬಿಡುತ್ತಾರೆಯೇ ಎಂದು ಹರಿಹಾಯ್ದರು.