ತೋಟಗಾರಿಕಾ ಬೆಳೆ ವಿಮೆ ಕಂತು ತುಂಬಲು ಜುಲೈ15 ಕಡೆದಿನ

ತೋಟಗಾರಿಕಾ ಬೆಳೆ ವಿಮೆ ಕಂತು ತುಂಬಲು ಜುಲೈ15 ಕಡೆದಿನ

ದಾವಣಗೆರೆ:ಜು.11: ತಾಲೂಕಿನ ವಿವಿಧ 3 ತೋಟಗಾರಿಕಾ ಬೆಳೆಗಳಿಗೆ 2023-24 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಘೋಷಣೆಯಾಗಿದ್ದು, ತೋಟಗಾರಿಕಾ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲ್ಲೂಕು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಷ್ಮಾ  ಪರ್ವೀನ್ ಟಿ.ಎಚ್.ಮನವಿ ಮಾಡಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ ಅಡಿಕೆ.ದಾಳಿಂಬೆ ಮತ್ತು ವೀಳ್ಯದೆಲೆ ಬೆಳೆಯುವ ಬೆಳೆಗಾರರು ನಿಗಧಿತ ವಿಮಾ ಮೊತ್ತ ತುಂಬಿ ಯೋಜನೆಯ ಉಪಯೋಗಪಡೆಯಬಹುದಾಗಿದೆ. ಪ್ರಕೃತಿ ವಿಕೋಪಗಳಾದ ಅತಿವೃಷ್ಶಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗಬಹುದಾದ ಬೆಂಕಿ ಅವಘಡಗಳಿಗೆ ಉಂಟಾಗುವ ಬೆಳೆಹಾನಿಯ ನಷ್ಟದ ಪರಿಹಾರವನ್ನು ಆಯಾ ಪ್ರಾಂತ್ಯವಾರು ನಿರ್ಧರಿಸಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಬೆಳೆವಿಮೆ ಯೋಜನೆಯನ್ನು ಸರಳಗೊಳಿಸಿ ಮತ್ತು ರೈತರಿಗೆ ಸುಲಭ ದರದಲ್ಲಿ ಪ್ರೀಮಿಯಂ ಹಾಗೂ ಉತ್ತಮ ಸೇವೆಯನ್ನು ಒದಗಿಸಲು ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಅಡಿಕೆಗೆ ಪ್ರತಿ ಹೆಕ್ಟೇರ್ ಗೆ 6400 ರೂ, ದಾಳಿಂಬೆ 6350 ರೂ ಹಾಗೂ ವೀಳ್ಯದೆಲೆಗೆ 5850 ರೂ ವಿಮಾ ಕಂತು ನಿಗಧಿಪಡಿಸಲಾಗಿದೆ. ಹೀಗೆ ಪಾವತಿಸಿದ ರೈತರ ಬೆಳೆ ಪ್ರಾಕೃತಿಕ ನಷ್ಟಕ್ಕೆ ಸಿಲುಕಿ ನಾಶವಾದರೆ ಅಡಿಕೆಗೆ 1.28 ಲಕ್ಷ, ದಾಳಿಂಬೆಗೆ 1.27 ಲಕ್ಷ ಮತ್ತು ವೀಳ್ಯೆದೆಲೆಗೆ 1.17 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ.

ವಿಮೆ ತುಂಬಲು ಇದೇ ಜುಲೈ 15 ಕಡೆಯ ದಿನವಾಗಿದ್ದು, ಆಸಕ್ತ ತೋಟಗಾರಿಕಾ ಬೆಳೆಗಾರರು ಕೂಡಲೇ ಸಮೀಪದ ಬ್ಯಾಂಕ್ ಶಾಖೆ, ಗ್ರಾಮ ಪಂಚಾಯತಿ ಕಚೇರಿ, ಗ್ರಾಮ ಒನ್,ಸಾಮಾನ್ಯ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕಾ ಇಲಾಖೆ ಕಚೇರಿ ಸಂಪರ್ಕಿಸಬಹುದು ಎಂದು ರೇಷ್ಮಾ  ಪರ್ವೀನ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!