// ಊರು ಕೇರಿ ನಗರದೆಲ್ಲೆಡೆ ಗಿಡ ನೆಡುವುದು ಕಡ್ಡಾಯವಾಗಲಿ //

ಬೇಸಿಗೆಯ ಸುಡು ಬಿಸಿಲ ಬೇಗೆಗೆ ಬೇಸತ್ತು ಬಸವಳಿದ ಜನತೆಗೆ ನೆರಳಿನ ಆಸರೆ ನೀಡುತ್ತಿರುವ ದಾವಣಗೆರೆ ನಗರದ ಜೆ ಹೆಚ್ ಪಟೇಲ್ ಬಡಾವಣೆಯ ಸಾಲು ಮರಗಳು ಜನ – ಜಾನುವಾರುಗಳಿಗೆ ಪರಿಸರದ ಅಗತ್ಯ ಎಷ್ಟಿದೆ ಎಂಬುದನ್ನು ಒತ್ತಿ ಹೇಳುತ್ತಿವೆ. ಬಡಾವಣೆಯ ಸೌಂದರ್ಯವನ್ನು ಹೆಚ್ಚಿಸುವ ಜೊತೆ , ಶುದ್ಧ ಆಮ್ಲಜನಕಯುಕ್ತ ಗಾಳಿ, ನೆರಳಿನಿಂದ ಆವೃತವಾಗಿರುವ ಇಲ್ಲಿಯ ಪ್ರಶಾಂತ ವಾತಾವರಣ ಎಲ್ಲರಿಗೂ ಪರಿಸರ ಕಾಳಜಿಯ ಸಂದೇಶವನ್ನು ಸಾರುತ್ತಿದೆ. ಇಂತಹ ವಾತಾವರಣ ಊರು, ಕೇರಿ, ನಗರ, ರಾಜ್ಯ, ದೇಶ ಸೇರಿದಂತೆ ಎಲ್ಲೆಡೆ ನಿರ್ಮಾಣಗೊಂಡರೆ ಎಷ್ಟೊಂದು ಚೆನ್ನ.

ಹಸಿರೇ ಉಸಿರು ಎಂಬುದನ್ನು ಮರೆತು ಗಿಡ ಮರಗಳಿಗೆ ಕೊಡಲಿ ಹಾಕುತ್ತಾ, ತನ್ನ ಉಸಿರನ್ನು ತಾನೇ ಬರಿದು ಮಾಡಿಕೊಳ್ಳುವ ಜೊತೆ ಇತರರ ಉಸಿರುಗಟ್ಟಿಸುವ ದುಷ್ಕೃತ್ಯಕ್ಕೆ ಕೈ ಹಾಕುತ್ತಿರುವ ಮನುಷ್ಯರಿಗೆ ಇಂತಹ ಬಡಾವಣೆಗಳು ಮಾದರಿಯಾಗಬೇಕಿದೆ.

ಎಲ್ಲರಿಗೂ ಗೊತ್ತಿರುವಂತೆ ಇತ್ತೀಚೆಗೆ ತಾಪಮಾನ ಏರಿಕೆಯ ದುಷ್ಪರಿಣಾಮ ಜನ ಜೀವನವನ್ನು ಅಸ್ತವ್ಯಸ್ಥಗೊಳಿಸುತ್ತಿದೆ. ಹಿಂದೆಂದೂ ಕಾಣದ ಉರಿ ಬಿಸಿಲಿನ ತಾಪ ನೆತ್ತಿಯ ಸುಡುತ್ತಿದೆ. ಅಭಿವೃದ್ದಿಯ ನೆಪದಲ್ಲಿ ನಗರೀಕರಣ, ಹೊಸ ಹೊಸ ಲೇ ಔಟ್ ನಿರ್ಮಾಣ ಇತ್ಯಾದಿ ಇತ್ಯಾದಿಯ ಕೊಡಲಿ ಪೆಟ್ಟಿಗೆ ಅಲ್ಲಲ್ಲೇ ಇದ್ದ ಅಷ್ಟಿಷ್ಟು ಗಿಡಮರಗಳು ಸಹ ಆಹುತಿಯಾಗಿವೆ. ಇದರಿಂದಾಗಿ ಒಂದೆಡೆ ಆಮ್ಲಜನಕದ ಕೊರತೆ ಮತ್ತು ಶುದ್ಧ ಗಾಳಿಯ ಅಭಾವ ಮತ್ತೊಂದೆಡೆ ತಾಪಮಾನ ಏರಿಕೆಯಾಗಿರುವ ಬಿಸಿ ಅನುಭವ ಈಗಾಗಲೇ ಎಲ್ಲರ ತನು ಮನೆಗಳಿಗೆ ತಟ್ಟಿದೆ.

ಹಾಗೇ ನೋಡಿದರೆ 40 ‘ ಸೆ. ಆಸುಪಾಸಿನ ಉಷ್ಣಾಂಶವನ್ನೇ ನಮ್ಮಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಮಳೆರಾಯ ಇನ್ನೂ ಮುನಿಸಿಕೊಂಡು ಉಷ್ಣಾಂಶದ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಉಂಟಾದಲ್ಲಿ ಜನ ಮತ್ತು ಜಾನುವಾರುಗಳ ಸ್ಥಿತಿ – ಗತಿ ಹೇಳತೀರದು. ದಾಖಲೆಯ ಏರಿಕೆ ಕಂಡಿರುವ ಈ ತಾಪಮಾನದ ಪರಿಣಾಮ ಜನ ಹಗಲು ಹೊತ್ತಲ್ಲಿ ಹೊರಗೆ ಕಾಲಿಡಲು ಭಯ ಪಡುತ್ತಿದ್ದಾರೆ. ಕೆಲವರಿಗೆ ಮೈಗ್ರೇನ್, ಮೈ ಉರಿ, ಗುಳ್ಳೆ, ತುರಿಕೆ, ಅಜೀರ್ಣ, ಅಲರ್ಜಿ ಸೇರಿದಂತೆ ಇತರೆ ಶಾರೀರಿಕ ಬಾಧೆಗಳ ಜೊತೆ ಮಾನಸಿಕ ಬಾಧೆ ಕೂಡ ಬಾದಿಸಲು ಶುರುವಾಗಿದೆ.

ಮಧ್ಯಾಹ್ನದ ವೇಳೆ ಹೊರ ಹೊರಟರಂತೂ ಕೆಳಗೆ ಕಾಂಕ್ರೀಟ್ ಝಳ ಮೇಲೆ ಸೂರ್ಯನ ಪ್ರಖರ ಕಿರಣಗಳು ಕಣ್ಣಿಗೆ ಕತ್ತಲು ಕವಿಸಿ ದ್ವಿಚಕ್ರ ವಾಹನ ಸವಾರರನ್ನು ನೆಲಕ್ಕೆ ಕೆಡವಿರುವ ಪ್ರಕರಣಗಳು ಸಹ ಅಲ್ಲಿಲ್ಲಿ ಸಂಭವಿಸಿವೆ.

ಇದೆಲ್ಲವೂ ನಮಗೆ ನಾವೇ ಸೃಷ್ಠಿಸಿಕೊಂಡಿರುವ ಕಂಟಕ ಎನ್ನದೇ ವಿಧಿಯಿಲ್ಲ. ನಮ್ಮ ಸ್ವಾರ್ಥ, ದುರಾಸೆ, ಅತಿ ಲೋಲುಪತೆ ನಮ್ಮ ನೆತ್ತಿಯ ಮೇಲೆ ಕತ್ತಿ ಝಳಪಿಸಲು ದಾಂಗುಡಿ ಇಡುತ್ತಿದೆ. ಇದರ ದುಷ್ಪರಿಣಾಮವನ್ನು ನಾವಲ್ಲದೇ ಅಮಾಯಕ ನವ ಪೀಳಿಗೆ ಕೂಡ ಅನುಭವಿಸಬೇಕಾಗಿದೆ. ಹಾಗಾಗಿ ಈಗಲಾದರೂ ಎಚ್ಛೆತ್ತುಕೊಂಡು ಪರಿಸರ ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕಿದೆ.

ಭಾರತದಲ್ಲಿ ಅರಣ್ಯಾವೃತ ಪ್ರದೇಶ ಒಟ್ಟು ನೆಲದ 20.55% ಇದೆ. ಇದು ಪ್ರಪಂಚದ ಮಿತಿಗಿಂತ (33%) ಕಡಿಮೆ. ಈ ಪ್ರಮಾಣವನ್ನು 33.3%ಗೆ ಏರಿಸಬೇಕೆಂದು 1952 ರಲ್ಲಿ ರಾಷ್ಟ್ರೀಯ ಅರಣ್ಯಧೋರಣೆ ಠರಾವು ಸರ್ಕಾರಕ್ಕೆ ಸೂಚಿಸಿದೆ.

ನೈಸರ್ಗಿಕವಾಗಿ ಮಳೆ ಗಾಳಿಯಿಂದ ಸಾಕಷ್ಟು ನಾಶ ಸಂಭವಿಸುವುದಿದೆ. ನೆಲ ಜರಿದು ಅರಣ್ಯದ ಸ್ವರೂಪ ಬದಲಾಗುವುದಿದೆ. ಕಡು ಬೇಸಿಗೆಯಿಂದ ತಂಪಿಲ್ಲದೆ ಕಾಡು ಒಣಗಬಹುದು. ನೆಲ ಸವೆದು ಕುಸಿಯದಂತೆ ಕಾಪಾಡುವುದರ ಮೂಲಕ ಗಾಳಿಯ ಸಂಚಾರ ಸರಾಗವಾಗಿರುವಂತೆ ಮರಗಳ ಇರವನ್ನು ನಿಯಂತ್ರಿಸುವುದರ ಮೂಲಕ ಕಾಡಿನ ಝರಿಗಳನ್ನು ಸಂರಕ್ಷಿಸಿಕೊಂಡು ಬರುವುದರ ಮೂಲಕ ಇಂಥ ಅಪಾಯಗಳಿಂದ ಅರಣ್ಯಗಳನ್ನು ರಕ್ಷಿಸಬಹುದು.

ಆದರೆ ಆಧುನಿಕ ಜೀವನ ಶೈಲಿಗೆ ಮಾರು ಹೋಗಿರುವ ನಾವು ನಮ್ಮ ಆಸುಪಾಸು ಇರುವ ಗಿಡಮರಗಳನ್ನು ನಿರ್ನಾಮ ಮಾಡಲು ತೊಡಗಿದ್ದೇವೆ. ಇದರಿಂದಾಗಿ ಶಾಖ ಹೆಚ್ಚಳ, ತಾಪಮಾನ ಏರಿಕೆ, ಭೂ ಸವಕಳಿ, ಅಂತರ್ಜಲ ಕುಸಿತ, ಜಲ ಮೂಲ ಮತ್ತು ನೀರಿನ ಸೆಲೆಗಳ ಒಣಗುವಿಕೆ ಸೇರಿದಂತೆ ಓಜೋನ್ ಪದರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಇದೆಲ್ಲದರ ಅಡ್ಡ ಪರಿಣಾಮ ಮತ್ತು ಪ್ರಭಾವ ನಮ್ಮ ಶರೀರ, ಮನಸ್ಸು, ಆರೋಗ್ಯ ಹಾಗೂ ಜೀವನದ ಮೇಲೆಯೇ ಉಂಟಾಗುತ್ತಿದೆ.

ಪರಿಹಾರೋಪಾಯ : ಆಯಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಪುರಸಭೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ, ಸೇರಿದಂತೆ ಒಟ್ಟಾರೆ ಸರ್ಕಾರ ಹಾಗೂ ಆಡಳಿತ ವರ್ಗ ಪರಿಸರದ ಉಳಿವಿಗಾಗಿ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರತಿ ಊರು – ಕೇರಿ, ನಗರದೆಲ್ಲೆಡೆ ಹಸಿರೀಕರಣಕ್ಕಾಗಿ ಕೆಲವು ನಿಯಮಗಳನ್ನು ಕಡ್ಡಾಯಗೊಳಿಸಬೇಕು.

ಹೊಸ ಬಡಾವಣೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಪ್ರತಿ ಮುಖ್ಯ ಹಾಗೂ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲೂ ಗಿಡ ನೆಟ್ಟು ಆನಂತರವೇ ಮನೆ ನಿರ್ಮಾಣ ಮಾಡುವ ಕಾಯ್ದೆ ಜಾರಿಗೊಳಿಸಬೇಕು. ಪ್ರತಿ ಗ್ರಾಮ ನಗರಗಳ ಮುಖ್ಯ ಹಾಗೂ ಅಡ್ದ ರಸ್ತೆಗಳಲ್ಲೂ ಸರ್ಕಾರ ಖುದ್ದಾಗಿ ಗಿಡ ನೆಡುವ ಅಭಿಯಾನ ಕೈಗೊಂಡು ಅವುಗಳನ್ನು ಪೋಷಿಸಲು ಪೌರ ಕಾರ್ಮಿಕರ ನೇಮಿಸುವ ಕಾರ್ಯವಾಗಬೇಕು. ಸಾಧ್ಯವಾದರೆ ಮನೆ ಮುಂದೆ ಜಾಗ ಇರುವವರು ಕನಿಷ್ಟ ಒಂದಾದರೂ ಗಿಡ ನೆಟ್ಟು ಪೋಷಿಸುವಂತೆ ವಾರ್ಡ್ ವಾರು ಜಾಗೃತಿ ಜಾಥಾ ನಡೆಸಿ ಬಯಸಿದವರಿಗೆ ಅಗತ್ಯ ಸಂಖ್ಯೆಯ ಸಸಿಗಳನ್ನು ಸ್ಥಳದಲ್ಲೇ ವಿತರಿಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಬೇಕು.

ಇದರೊಟ್ಟಿಗೆ ಕೆರೆ – ಕಟ್ಟೆ, ಬಾವಿ, ನದಿ ನಾಲೆಗಳಲ್ಲಿ ಪಂಪ್ ಸೆಟ್ ಮುಖಾಂತರ ಅಕ್ರಮವಾಗಿ ಜೀವಜಲಕ್ಕೆ ಕನ್ನ ಹಾಕುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು.

– ಗಂಗಾಧರ ಬಿ ಎಲ್ ನಿಟ್ಟೂರ್/-
ಮೊ.ಸಂ : 8867702396

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!