ದಾವಣಗೆರೆ: ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಜ್ಜಾಗಿದ್ದ ಎನ್ನಲಾದ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಇಂದು ಗುರುವಾರ ಮುಂಜಾನೆ ಬೆಂಗಳೂರಿನ ಸಿಸಿಬಿ ಪೋಲೀಸರು ದಾವಣಗೆರೆಯಲ್ಲಿ ಓರ್ವ ಶಂಕಿತ ಉಗ್ರನನ್ನ ಬಂಧಸಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅರಳಿಮರ ವೃತ್ತದಲ್ಲಿ ಇರುವ ಮನೆಯಿಂದ ಫಯಾಜ್ ವುಲ್ಲಾ(30) ಎಂಬ ವ್ಯಕ್ತಿಯನ್ನ ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಬಂದಿದ್ದ ಸಿಸಿಬಿ ಪೊಲೀಸರು ದಾವಣಗೆರೆ ಅಜಾದ್ ನಗರ ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ.
ದಾವಣಗೆರೆಯಲ್ಲಿ ಎರಡನೇ ಪತ್ನಿಯ ಜೊತೆ ಫಯಾಜ್ ವಾಸವಾಗಿದ್ದು ಅವರ ಮನೆಯಿಂದ ವಶಕ್ಕೆ ಪಡೆದಿದ್ದಾರೆ ಸಿಸಿಬಿ ಪೊಲೀಸರು. ಫಯಾಜ್ ವುಲ್ಲಾ ಮೂಲ ಬೆಂಗಳೂರು ನಿವಾಸಿ ಎನ್ನಲಾಗಿದೆ. ಈತನ ವಿರುದ್ದ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ, ಅಕ್ರಮ ಆಯುಧಗಳ ಮಾರಾಟ ಹಿನ್ನೆಲೆಯಲ್ಲಿ ಐದರಿಂದ ಏಳು ಪ್ರಕರಣ ದಾಖಲಾಗಿದ್ದವು, ಈಗ ಶಂಕಿತ ಉಗ್ರರ ಸಂಪರ್ಕ ಹೊಂದಿರುವ ಹಿನ್ನಲೆಯಲ್ಲಿ ಫಯಾಜ್ ವುಲ್ಲಾ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗುತ್ತಿದೆ.
ಫಯಾಜ್ ವುಲ್ಲಾ ವಿರುದ್ಧ ಅಕ್ರಮ ಆಯುಧ ಮಾರಾಟ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿದ್ದವು, ಜಾಮೀನಿನ ಮೇಲೆ ಜೈಲಿನಿಂದ ಹೊರಗಡೆ ಇದ್ದ ಎನ್ನಲಾಗಿದೆ, ಇನ್ನೂ ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರನನ್ನ ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಫಯಾಜ್ ವುಲ್ಲಾ ದಾವಣಗೆರೆಯಲ್ಲಿ ಎರಡನೇ ಮದುವೆ ಆಗಿದ್ದು, ಪತ್ನಿಯ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಸಧ್ಯಈತ ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಪ್ರತಿನಿತ್ಯ ಕಾರ್ಪೆಂಟರ್ ಕೆಲಸಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ. ಇತನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ ನಂತರ ಇನ್ನಷ್ಟು ಮಾಹಿತಿ ದೊರಯಲಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ.
