krishna; ಬನ್ನಿ ನಾವೆಲ್ಲ ಶ್ರೀಕೃಷ್ಣನ ಸಮಾನರಾಗೋಣ!

ಭಾರತ ದೇಶದಲ್ಲಿ ವಿವೇಕಾನಂದ ಜಯಂತಿ, ಮಹಾವೀರ ಜಯಂತಿ, ಬಸವಜಯಂತಿ, ಹೀಗೆ ಅನೇಕ ಧಾರ್ಮಿಕ ಮುಖಂಡರ ಜನ್ಮದಿನವನ್ನು ಆಚರಿಸಲಾಗುತ್ತದೆ. ಭಾರತೀಯರು ಶ್ರೀಕೃಷ್ಣನ (krishna) ಜನ್ಮದಿನವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಪ್ರತಿವರ್ಷವು ವಿಜೃಂಭಣೆಯಿಂದ ಆಚರಿಸುತ್ತಾರೆ. ಭಾರತದಲ್ಲಿ ವೃಂದಾವನ, ಮಥುರ, ದ್ವಾರಕ ಮತ್ತು ದೇಶ-ವಿದೇಶಗಳಲ್ಲಿ ಇರುವ ಇಸ್ಕಾನ್ ಮಂದಿರಗಳಲ್ಲಿ ಮುದ್ದು ಕೃಷ್ಣನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಅನೆಕ ಸ್ಥಳಗಳಲ್ಲಿ ದಹಿ ಹಂಡಿಯನ್ನಯ ಒಡೆಯುವ ಸ್ಪರ್ಧೆ ಇಟ್ಟಿರುತ್ತಾರೆ.
ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀಕೃಷ್ಣನನ್ನು ಶೃಂಗಾರ ಮಾಡಿ, ತೊಟ್ಟಿಲಲ್ಲಿ ತೂಗಿ, ಮೃಷ್ಟಾನ್ನಗಳ ನೈವೇದ್ಯವನ್ನು ಅರ್ಪಣೆ ಮಾಡುತ್ತಾರೆ. ಜೀವನದಲ್ಲಿ ಸುಖ ಶಾಂತಿಗಾಗಿ ಅವನನ್ನು ಆಹ್ವಾನಿಸುತ್ತಾರೆ. ಇವುಗಳನ್ನು ನಾವು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿದೆ. ಮಾರನೆಯ ದಿನ ಪುನ: ನಮ್ಮ ಜೀವನಯಾತ್ರೆ ಎಂದಿನಂತೆ ಪ್ರಾರಂಭವಾಗುತ್ತದೆ. ಸಡಗರ ಸಂಭ್ರಮದಿಂದ ಮಾಡಿದ ಆಚರಣೆ ಮುಂದಿನ ಹಬ್ಬ ಬರುವವರೆಗೆ ನಿಂತು ಹೋಗುತ್ತದೆ. ನಾವು ಮಾಡುವ ಹಬ್ಬಗಳ ಆಚರಣೆಯು ನಮಗೆ ಖುಷಿ, ಉಲ್ಲಾಸ, ಉತ್ಸಾಹ, ಧ್ಯೆರ್ಯ, ಸಾಹಸವನ್ನು ನೀಡುತ್ತದೆ. ವಿಶ್ವವು ಇಂದು ಕುರುಕ್ಷೇತ್ರವಾಗಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಮಹಾಭಾರತ ಯುದ್ಧ ನಡೆಯುತ್ತ್ತಿದೆ.  ನಾವೇ ಅರ್ಜುನರಾಗಿ ಶ್ರೇಷ್ಠ ಆಚರಣೆಯನ್ನು ಮತ್ತು ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಸಾಗರವನ್ನು ಪಾರಮಾಡುವ ಅವಶ್ಯಕತೆ ಇದೆ.
ಕೃಷ್ಣನಿಗೆ ಅಷ್ಟಭಾರ್ಯ- ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಕಾಲಿಂದಿ, ಮಿತ್ರವಿಂದ, ನಾಗ್ನಜಿತಿ, ಭದ್ರ ಮತ್ತು ಲಕ್ಷ್ಮಣ ಎಂದು ಹೇಳುತ್ತಾರೆ. ನರಕಾಸುರನನ್ನು ಕೊಂದು ಅವನ ಸೆರೆಮನೆಯಲ್ಲಿರುವ 16100 ರಾಣಿಯರನ್ನು ಮುಕ್ತಗೊಳಿಸಿದನು ಎಂದೂ ಸಹ ಹೇಳುತ್ತಾರೆ. ಕೃಷ್ಣನು ಮುಖ್ಯವಾಗಿ ಕಂಸ, ಪೂನತಿ, ತ್ರಿನರ್ವತ, ಧೆನುಕಾಸುರ, ವತ್ಸಸುರ, ಕೇಶಿ, ಅಘಸುರ, ಅರಿಷ್ಟಸುರ, ಬಕಾಸುರ, ವ್ಯೋಮಸುರ, ಪ್ರಲಂಬಾಸುರ, ಶಕತಸುರ, ನರಕಾಸುರ, ಬಾಣಸುರ ಮುಂತಾದ ಅನೇಕ ಅಸುರರನ್ನು ಸಂಹಾರ ಮಾಡಿದನು.
ಕೃಷ್ಣನ ಬಗ್ಗೆ ಭಾಗವತ ಪುರಾಣ, ವಿಷ್ಣು ಪುರಾಣ, ಮಹಾಭಾರತ ಹಾಗೂ ಭಗವದ್ಗೀತೆ, ಬೌದ್ಧ ಧರ್ಮ, ಜೈನ ಧರ್ಮದಲ್ಲಿ ಉಲ್ಲೇಖವಿದೆ. ವಿಶೇಷವಾಗಿ ಅವನ ಬಾಲಲೀಲೆಯ ಬಗ್ಗೆ ಭಾಗವತದಲ್ಲಿ ವರ್ಣನೆ ಇದ್ದರೆ, ಮಹಾಭಾರತದಲ್ಲಿ ಉಪದೇಶವಿದೆ. ಶರೀರರೂಪಿ ಯಂತ್ರದಲ್ಲಿ ಜೀವಾತ್ಮರನ್ನು ಜನನ-ಮರಣ ಚಕ್ರದಲ್ಲಿ ಸುತ್ತಿಸುವವನು ‘ಈಶ್ವರ’ನಾಗಿದ್ದಾನೆ. ಹೇ ಅರ್ಜುನ, ಸರ್ವ ಭಾವಗಳಿಂದ ಆವನಿಗೆ ನೀನು ಶರಣನಾಗು, ಅವನು ನಿನಗೆ ಪರಮಶಾಂತಿ ಮತ್ತು ಮುಕ್ತಿಯನ್ನೂ ಅನುಗ್ರಹಿಸುವನು (ಗೀ:ಅ-18;ಶ್ಲೋ-61-62).ಸರ್ವ ಆತ್ಮಜ್ಯೋತಿಗಳ ಅಜ್ಞಾನವನ್ನು ನಿವಾರಣೆ ಮಾಡಬಲ್ಲವನು ಪರಮಶ್ರೇಷ್ಠನಾದ ಪರಂಜ್ಯೋತಿ ಪರಮಾತ್ಮನಾಗಿದ್ದಾನೆ (ಗೀ:ಅ-13; ಶ್ಲೋ-17) ಉತ್ತಮ ಪುರುಷನಾದ, ಲೋಕತ್ರಯಗಳಿಗೆ ಅಧಿಪತಿ ನಿರಾಕಾರ ಪರಮಾತ್ಮನಾಗಿದ್ದಾನೆ. (ಗೀ:ಅ-15;ಶ್ಲೋ-17).
ಪಾಂಡವರ ಜೊತೆ ಶ್ರೀಕೃಷ್ಣನು ಸ್ಥಾಣೇಶ್ವರ ಜ್ಯೋತಿರ್ಲಿಂಗವನ್ನು ಪೂಜಿಸಿ ಕುರುಕ್ಷೇತ್ರ ಯುದ್ಧದಲ್ಲಿ ವಿಜಯ ಪ್ರಾಪ್ತಿಗೆ ವರವನ್ನು ಪಡೆದನು ಎಂದು ಮತ್ತು  ಅವನು ಪರಶುರಾಮ ಅವತಾರದಲ್ಲಿ ಭಾರತ ಭೂಮಿಯನ್ನು 21 ಬಾರಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನು ಕೊಂದ ಪಾಪ ಪರಿಹಾರಕ್ಕಾಗಿ ಸ್ಥಾಣೇಶ್ವರ ಲಿಂಗವನ್ನು ಪೂಜಿಸಿದನು ಎಂದು,  ಸ್ಥಾಣೇಶ್ವರ ಪುರಾಣದಲ್ಲಿ ಉಲ್ಲೇಖವಿದೆ.
ಜಾಂಬುವತಿಗೆ ಪುತ್ರಪ್ರಾಪ್ತಿಗಾಗಿ ಕೃಷ್ಣನು ಹಿಮಾಲಯದಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಪರಮಾತ್ಮನನ್ನು ಕುರಿತು ತಪಸ್ಸನ್ನು ಮಾಡಿ ವರವನ್ನು ಪಡೆದನು. ಪಾರಿಯಾತ್ರ ಪರ್ವತದಲ್ಲಿ ವಿವೀಶ್ವರ ಜ್ಯೋತಿರ್ಲಿಂಗವನ್ನು ಮಹಾಶಿವರಾತ್ರಿಯಂದು ಶ್ರೀ ಕೃಷ್ಣನು ಪೂಜಿಸಿ, ಇಂದ್ರನ ಮೇಲೆ ವಿಜಯ ಪ್ರಾಪ್ತ್ತಿಗಾಗಿ ವರವನ್ನು ಪಡೆದನು. ಸತ್ಯಭಾಮೆಗಾಗಿ ಇಂದ್ರಲೋಕದಿಂದ ಪಾರಿಜಾತ ವೃಕ್ಷವನ್ನು ತಂದು ತೋಟದಲ್ಲಿ ನೆಟ್ಟಿಸಿದನು. ಈ ಎರಡಿ ಉಲ್ಲೆಖ ಭಾಗವತ ಪುರಾಣದಲ್ಲಿದೆ. ಹೀಗೆ ಅನೇಕ ಪುರಾಣಗಳಲ್ಲಿ ಮತ್ತು ಗೀತೆಯಲ್ಲಿ ನಿರಾಕಾರ ಪರಮಾತ್ಮನು ಬೇರೆ ಶ್ರೀ ಕೃಷ್ಣ ದೇವತೆ ಬೇರೆ ಎಂದು ಸ್ಪಷ್ಟವಾಗುತ್ತದೆ.
ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ ಇವರೆಲ್ಲರೂ ಕೃಷ್ಣ ಬಗ್ಗೆ ಭಜನೆಗಳನ್ನು ರಚಿಸಿದ ಮಹಾನ್ ಕವಿಗಳಾಗಿದ್ದಾರೆ.
ಶ್ರೀಕೃಷ್ಣನು ಗೋಲಕ ವೃಂದಾವನ, ಗೋಕುಲ, ದ್ವಾರಕಾ, ಮಥುರ ನಿವಾಸಿ ಎಂದು ಬರೆಯಲಾಗಿದೆ. ಅವನ ವಿಶೇಷ ಪೂಜೆ ದ್ವಾರಕಾಧೀಶ-ಗುಜರಾತ್, ಜಗನ್ನಾಥ-ಒರಿಸ್ಸಾ, ವಿಠೋಬಾ-ಮಹಾರಾಷ್ತ್ರ, ಬಾಲಾಜಿ-ತಿರುಪತಿಯ ಮಂದಿರಗಳಲ್ಲಿ ನಡೆಯುತ್ತದೆ.
ಶ್ರೀಕೃಷ್ಣನಿಗೆ ಭಕ್ತರು ಸುಂದರ, ಮನಮೋಹನ, ಚಿತ್ತಚೋರ ಎಂದು ಕರೆಯುತ್ತಾರೆ. ಶ್ರೀಕೃಷ್ಣನನ್ನು ಸೌಂದರ್ಯದ ಗಣಿ ಎಂದು ಹೇಳಬಹುದು. `ಶ್ರೀಕೃಷ್ಣ’ ಶಬ್ದದ ಅರ್ಥ `ಆಕರ್ಷಣೆ ಮಾಡುವವನು’ `ಆನಂದ ಸ್ವರೂಪ’ `ದುರ್ನಡತೆಯಿಂದ  ಬಿಡಸುವವನು’ ಎಂಬುದಾಗಿದೆ.
ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಚಿಕ್ಕಮಕ್ಕಳಿಗೆ ಮುದ್ದು ಕೃಷ್ಣನಂತೆ ವೇಷಭೂಷಣ ತೊಡಿಸಿ ಕಿರೀಟ, ಕೊಳಲನ್ನು ನೀಡಿ ಶೃಂಗರಿಸಿದಾಗ, ಜನರು ಮಂತ್ರಮುಗ್ಧರಾಗಿ,  ಮಕ್ಕಳನ್ನು ಮರೆತು ಅವರಲ್ಲಿ ಶ್ರೀಕೃಷ್ಣನನ್ನು ಕಾಣುತ್ತಾರೆ.  ಇಂದಿನ ಜಗತ್ತಿನಲ್ಲಿ ರೂಪವಂತರು ಬಹಳ ಜನರಿದ್ದಾರೆ. ಆದರೆ ಶ್ರೀಕೃಷ್ಣನ ಸಮಾನ ಸರ್ವಾಂಗ ಸುಂದರ, ಸರ್ವಗುಣಸಂಪನ್ನ, 16 ಕಲಾಸಂಪನ್ನ, ಸಂಪೂರ್ಣ ನಿರ್ವಿಕಾರಿ, ಮರ್ಯಾದ ಪುರುಷೋತ್ತಮ ಮತ್ತಾರೂ ಇರಲಾರರು. ಈ ಕಲಿಯುಗದಲ್ಲಿ ದೃಷ್ಟಿ-ವೃತ್ತಿಯನ್ನು ಕಲುಷಿತಗೊಳಿಸಿಕೊಳ್ಳದಿರುವವರು, ಕ್ರೋಧಕ್ಕೆ ವಶವಾಗದೇ ಇರುವವರು, ಮೋಹದ ಪಾಶಕ್ಕೆ ಬಲಿಯಾಗದೇ ಇರುವವರು, ಅಹಂಕಾರಕ್ಕೆ ಸಿಲುಕದೇ ಇರುವವರು ಯಾರೂ ಸಿಗುವುದಿಲ್ಲ. ಆದರೆ ಶ್ರೀಕೃಷ್ಣನು ನಿರ್ಮೋಹಿ, ನಿರಹಂಕಾರಿ, ಮಹಾಯೋಗಿ ಆಗಿದ್ದನು. ಶ್ರೀಕೃಷ್ಣನ ಮೂರ್ತಿಯನ್ನು ಇವತ್ತಿಗೂ ಮಂದಿರಗಳಲ್ಲಿ ಶೃಂಗಾರ ಮಾಡಿ ಪೂಜಿಸಲಾಗುತ್ತದೆ. ಅವನ ಮನಸ್ಸು ಮಂದಿರಕ್ಕೆ ಸಮಾನವಾಗಿತ್ತು.  ಶ್ರೀಕೃಷ್ಣನ ಚಿತ್ರಗಳನ್ನು ನೋಡಿದಾಗ ನಯನಗಳಲ್ಲಿ ಶೀತಲತೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಕೃಷ್ಣನನ್ನು ಪಿತಾಂಬರಧಾರಿಯಾಗಿ ಕೊಳಲನ್ನು ನುಡಿಸುತ್ತಿರುವಂತೆ ತೋರಿಸುತ್ತಾರೆ. ಅವನ ಸುತ್ತಮುತ್ತಲೂ ಹಸುಗಳು ಮತ್ತು ಸಂಗಡಿಗರನ್ನು ತೋರಿಸುತ್ತಾರೆ. ಭಕ್ತರು ಕೃಷ್ಣನಮೂರ್ತಿಯ ಚರಣಕಮಲಗಳನ್ನು ತೊಳೆದು ಚರಣಾಮೃತವನ್ನು ಸ್ವೀಕರಿಸಿ ತಾವು ಧನ್ಯರಾದೆವು ಎಂದು ಭಾವಿಸುತ್ತಾರೆ.
ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ತತ್ವಜ್ಞಾನದ ಪ್ರಕಾರ `ಶ್ರೀಕೃಷ್ಣನ ಆಗಮನ ಭವಿಷ್ಯದಲ್ಲಿ ಆಗಲಿದೆ.’ ಸಂಸ್ಥೆಯ ಸಂಸ್ಥಾಪಕ ದಾದಾ ಲೇಖರಾಜ (ಪಿತಾಶ್ರೀ ಬ್ರಹ್ಮಾ) ರವರನ್ನು ಸಾಕಾರದಲ್ಲಿ ಕಂಡಾಗ ಸಾವಿರಾರು ಸಾಧಕರಿಗೆ ಕೃಷ್ಣನ ಸಾಕ್ಷತ್ಕಾರವಾಗಿದೆ. ಇಲ್ಲಿಯ ಲಕ್ಷಾಂತರ ಅನುಯಾಯಿಗಳು ಪರಮಾತ್ಮನ ಸತ್ಯ ಪರಿಚಯ ತಿಳಿದುಕೊಂಡು ತಮ್ಮ ಜೀವನವನ್ನು ರಾಜಯೋಗದ ಮೂಲಕ ಸಾರ್ಥಕ ಮಾಡಿಕೊಂಡಿದ್ದಾರೆ. ಇದು ಕಲಿಯುಗದ ಅಂತಿಮ ಸಮಯವಾಗಿದೆ.  ಕಲಿಯುಗದ ಅಂತ್ಯ  ಮತ್ತು ಸತ್ಯಯುಗದ ಆರಂಭದ ಸಂದಿಗ್ಧ ಕಾಲವೇ ಸಂಗಮಯುಗ. ಅದು ಈಗ ನಡೆಯುತ್ತಿದೆ.  ಪ್ರತಿಯೊಬ್ಬ ಮಾನವನು ಸತ್ಯಯುಗದ ದೈವಿ-ಪದವಿಯನ್ನು ಪಡೆಯುವುದು ಅವನ ಜನ್ಮಸಿದ್ಧ ಅಧಿಕಾರವಾಗಿದೆ.  ಆ ಅಧಿಕಾರವನ್ನು ಸ್ವಯಂ ನಿರಾಕಾರ ಪರಮಾತ್ಮನಿಂದ, ಈಶ್ವರೀಯ ವಿಶ್ವ ವಿದ್ಯಾಲಯದ ಮೂಲಕ ಕಲಿಸುವ ರಾಜಯೋಗದ ಅಭ್ಯಾಸದಿಂದ ಪಡೆಯಬಹುದು. ಪವಿತ್ರತೆ ಹಾಗೂ ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದ ಅಸುರಿ ಗುಣಗಳ ತ್ಯಾಗದಿಂದ ದೇವಿ-ದೇವತಾ ಪದವಿಯು ಪ್ರಾಪ್ತವಾಗುವುದು. ಆಗ ಮಾನವನು ದೇವಮಾನವನಾಗಿ ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣ, ಮರ್ಯಾದ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ, ಸಂಪೂರ್ಣ ನಿರ್ವಿಕಾರಿ ಆಗುವನು. ಕಂಸ, ಜರಾಸಂಧ ಮುಂತಾದ ರಾಕ್ಷಸರ ರಾಜ್ಯವಾದ ನರಕವೆಂಬ ಕಲಿಯುಗವು ಈಗ ನಡೆಯುತ್ತಿದೆ. ಸತ್ಯಯುಗವು ಈ ನರಕದ ಮಹಾವಿನಾಶದ ನಂತರ ಬರುವುದು. ಆ ಸ್ವರ್ಗದಲ್ಲಿ ಶ್ರೀರಾಧೆ ಮತ್ತು ಶ್ರೀಕೃಷ್ಣರ ರಾಜ್ಯವಿರುತ್ತದೆ.
“ಸತ್ಯಯುಗದಲ್ಲಿ ಮೊದಲನೆಯ ರಾಜಕುಮಾರ ಶ್ರೀಕೃಷ್ಣ. ಕೃಷ್ಣನನ್ನು ಸಮುದ್ರದ ಮಧ್ಯದಲ್ಲಿ ಆಲದ ಎಲೆಯಲ್ಲಿ  ಬರುವಂತೆ ತೋರಿಸುತ್ತಾರೆ. ಅದರ ಅರ್ಥವೆಂದರೆ- ಭವಿಷ್ಯದಲ್ಲಿ ಸಂಭವಿಸುವ ಮಹಾವಿನಾಶದ ನಂತರ ಭೂಮಿಯು ಜಲಮಯವಾಗುತ್ತದೆ. ಯಾವ ವಿದೇಶಗಳು ಇರುವುದಿಲ್ಲ. ನಾವು ಇತಿಹಾಸದಲ್ಲಿ ಓದಿದಂತೆ ಅಮೇರಿಕಾ ಹಾಗೂ ಇತರೆ ರಾಷ್ಟ್ರಗಳನ್ನು ಕೊಲಂಬಸ್‍ನಂತಹ ಯಾತ್ರಿಕರು ಕಂಡು ಹಿಡಿದಿದ್ದಾರೆ. ವಿದೇಶಗಳು ಸತ್ಯಯುಗದಲ್ಲಿ ಇರುವುದಿಲ್ಲ. ಕೇವಲ ಭಾರತ ದೇಶ ಮಾತ್ರವು ಇರುತ್ತದೆ. ಅಂತರಿಕ್ಷದಿಂದ ನೋಡಿದಾಗ ಭಾರತವು ಆಲದ ಎಲೆಯಂತೆ ಕಾಣುತ್ತದೆ.
ಸತ್ಯಯುಗದಲ್ಲಿ ಆತ್ಮವು 8 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ರಾಧಾಕೃಷ್ಣರು ತಮ್ಮ 35ನೇ ವಯಸ್ಸಿನಲ್ಲಿ ಸಿಂಹಾಸನಾಧೀಶರಾಗಿ ತಮ್ಮ ಹೆಸರನ್ನು ಲಕ್ಷ್ಮೀ-ನಾರಾಯಣರಾಗಿ ಪರಿವರ್ತನೆ ಮಾಡಿಕೊಂಡು ರಾಜ್ಯವನ್ನು ಆಳುತ್ತಾರೆ. ಅವರ ರಾಜ್ಯವಂಶದಲ್ಲಿ ಹತ್ತಿರದ ಸಂಬಂಧಿಕರು 16108 ಜನ ಇರುತ್ತಾರೆ. ಒಟ್ಟು 9 ಲಕ್ಷ ಪ್ರಜೆಗಳೂ ಇರುತ್ತಾರೆ.  ಅಲ್ಲಿ ಒಂದೇ ರಾಜ್ಯ, ಒಂದೇ ಭಾಷೆ ಇರುತ್ತದೆ. ಎಲ್ಲರೂ ಯೋಗಶಕ್ತಿಯಿಂದ ಜನ್ಮ ಪಡೆಯುತ್ತಾರೆ. ಲಕ್ಷ್ಮೀ-ನಾರಾಯಣರಿಗೆ  ಯೋಗಬಲದಿಂದ ಒಂದು ಮಗು ಆಗುತ್ತದೆ. ಆ ಮಗುವಿಗೆ 35 ವರ್ಷಗಳಾದ ನಂತರ ಪಟ್ಟಭಿಷೇಕ ಮಾಡಿ ರಾಜ್ಯ ಅಧಿಕಾರವನ್ನು ಕೊಡುತ್ತಾರೆ. ಈ ರೀತಿಯಲ್ಲಿ 8 ಜನ ರಾಜಕುಮಾರರು ವಂಶಪಾರಂಪರ್ಯವಾಗಿ ರಾಜ್ಯಭಾರ ಮಾಡುತ್ತಾರೆ. ಆದ್ದರಿಂದ ಕೃಷ್ಣಜನ್ಮಾಷ್ಟಮಿ ಎಂದು ಹೇಳುತ್ತಾರೆ.”
ಹಾಗಾದರೆ ಬನ್ನಿ ನಾವು ಎಲ್ಲರು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕಲಿಸುವ ರಾಜಯೋಗವನ್ನು ಕಲಿತು ಶ್ರೀಕೃಷ್ಣನ ಬಗ್ಗೆ ಸಮರ್ಪಕ ಮಾಹಿತಿಯನ್ನು ಪಡೆದು, ಅವನ ಸಮಾನ ದೇವತೆಯರಾಗೋಣ.

Leave a Reply

Your email address will not be published. Required fields are marked *

error: Content is protected !!