ದಾವಣಗೆರೆ :ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಬ್ರಿಜ್ ಭೂಷಣ್ ಬಂಧನಕ್ಕಾಗಿ ಒತ್ತಾಯಿಸಿ ಹೋರಾಟಕ್ಕಿಳಿದಿರುವ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸರು ದೆಹಲಿಯ ಬೀದಿಯಲ್ಲಿ ಹಲ್ಲೆ ಮಾಡಿ ಬಂಧಿಸಿರುವುದನ್ನು ಇಡೀ ದೇಶವೇ ಖಂಡಿಸುತ್ತಿದೆ. ಸಂತ್ರಸ್ತ ಕುಸ್ತಿಪಟುಗಳನ್ನು ಬೆಂಬಲಿಸಿ ಹಾಗೂ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಜಾಗೃತ ನಾಗರಿಕರು, ಕರ್ನಾಟಕ (“ಕನ್ಸರ್ನಡ ಸಿಟಿಜನ್ಸ್ ಆಪ್ ಕರ್ನಾಟಕ”) ಸಂಘಟನೆಯು ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದೆ.
ಆರೋಪಿ ಬ್ರಿಜ್ ಭೂಷಣ್ ವಿರುದ್ಧ ಶೀಘ್ರ ಬಂಧನ ಕ್ರಮಕ್ಕೆ ಆಗ್ರಹಿಸಿ 2023 ಜೂನ್ 1 ರಂದು ಜಿಲ್ಲಾಧಿಕಾರಿಗಳ ಮೂಲಕ ಭಾರತದ ಗೃಹಮಂತ್ರಿಗಳಿಗೆ ಪ್ರತಿಭಟನಾತ್ಮಕ ಮನವಿ ಪತ್ರವೊಂದನ್ನು ಕೊಡಲಾಯಿತು. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ವಿಮಲಾರವರು, ಸುರೇಂದ್ರ ರಾವ್ ರವರು, ಶಶಿಧರ್ ರವರು, ಡಾ.ವಿಜಯಮ್ಮನವರು, ಡಾ.ವಸುಂದರಾ ಭೂಪತಿಯವರು, ಪುಷ್ಪಾರವರು, ಸುಕನ್ಯಾ ಮಾರುತಿಯವರು ಹಾಗೂ ಶಶಿಕಾಂತ ಯಡಹಳ್ಳಿ ಇವರುಗಳನ್ನು ಒಳಗೊಂಡ ನಿಯೋಗವು ಬೆಂಗಳೂರಿನ ಜಿಲ್ಲಾಧಿಕಾರಿಗಳಾದ ಮಾನ್ಯ ಕೆ.ಎ.ದಯಾನಂದರವರನ್ನು ಅವರ ಕಚೇರಿಯಲ್ಲಿ ಬೇಟಿಯಾಗಿ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು.
ಒತ್ತಾಯಪತ್ರಕ್ಕೆ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಬಿ.ಕೆ.ಚಂದ್ರಶೇಖರ್, ಡಾ.ವಿ.ಪಿ.ನಿರಂಜನಾರಾಧ್ಯ, ಬಿ.ಶ್ರೀಪಾದ ಭಟ್, ಯೋಗಾನಂದ,ಮತ್ತಿತರರು ಬೆಂಬಲ ವ್ಯಕ್ತಪಡಿಸಿದ್ದರು.
ಸಂತ್ರಸ್ತ ಕ್ರಿಡಾಪಟುಗಳಿಗೆ ಕೂಡಲೇ ಸಂಪೂರ್ಣ ರಕ್ಷಣೆಯನ್ನು ಕೊಟ್ಟು ಅತ್ಯಾಚಾರಿ ಆರೋಪಿ ಸಂಸದನನ್ನು ಕೂಡಲೇ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷಪಟ್ಟದಿಂದ ವಜಾಗೊಳಿಸಿ ದಾಖಲಾದ ಫೋಕ್ಸೋ ಕಾಯಿದೆಯಡಿ ಬಂಧಿಸಿ ಜೈಲಿಗಟ್ಟಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗ್ರಹಮಂತ್ರಿಗಳಿಗೆ ಒತ್ತಾಯಿಸಲಾಯಿತು.
