ಸಕ್ಕರೆ ನಾಡು ಮಂಡ್ಯದಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಕಿತ್ತೊಗೆಯಿರಿ: ಸಿಎಂ ಬೊಮ್ಮಾಯಿ
ಮಂಡ್ಯ: 30 ವರ್ಷದಿಂದ ಕಾಂಗ್ರೆಸ್, ಜೆಡಿಎಸ್ ನವರು ಮತ ಪಡೆದು ಸಕ್ಕರೆ ನಾಡಿನ ಅಭಿವೃದ್ಧಿ ಪಡಿಸಿಲ್ಲ. ರೈತರ ಶ್ರಮಕ್ಕೆ ಬೆಲೆ ಕೊಡದ ಎರಡು ಪಕ್ಷವನ್ನು ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮದ್ದೂರು ಕ್ಷೇತ್ರದಲ್ಲಿ ಅಭ್ಯರ್ಥಿ ಸ್ವಾಮಿಗೌಡರ ಪರ ಪ್ರಚಾರ ನಡೆಸಿದ ಅವರು, ಮದ್ದೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ ಉತ್ಸಾಹ ನೋಡಿದರೆ, ಬದಲಾವಣೆ ಬಿಜೆಪಿ ಪರವಾಗಿದೆ. ಈ ಭಾಗದ ಜನರು ಅತ್ಯಂತ ಶ್ರಮವಹಿಸುವ ಜನ. ಬಂಗಾರದ ಬೆಳೆ ತೆಗೆಯುವ ರೈತಾಪಿ ಜನ ಇಲ್ಲಿದ್ದಾರೆ. ಆದರೆ ಇಲ್ಲಿ 30 ವರ್ಷದಿಂದ ಆಯ್ಕೆಯಾದ ಜನರು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಇದು ಬದಲಾವಣೆ ಆಗಬೇಕಿದೆ. ಕಾಂಗ್ರೆಸ್, ಜೆಡಿಎಸ್ ನವರು ಮತ ಪಡೆದು ಸಕ್ಕರೆ ನಾಡಿನ ಅಭಿವೃದ್ಧಿ ಪಡಿಸಿಲ್ಲ. ರೈತರ ಶ್ರಮಕ್ಕೆ ಬೆಲೆ ಕೊಡದ ಎರಡು ಪಕ್ಷವನ್ನು ಕಿತ್ತೊಗೆಯಬೇಕು ಎಂದರು.
ಮಂಡ್ಯದ ಜನರು ಸ್ವಾಭಿಮಾನಿ ಜನರು. ಮಂಡ್ಯದಲ್ಲಿ ಏನು ಬದಲಾವಣೆ ಆಗುತ್ತದೆ, ಅದು ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ಮಂಡ್ಯದ ಮಣ್ಣಿನಲ್ಲಿ ನಾನು ಕಾಲಿಟ್ಟಿದ್ದೇನೆ. ನನಗೆ ಅದಮ್ಯ ಶಕ್ತಿ ಬಂದಿದೆ. ಈ ನಾಡನ್ನು ಸಮಗ್ರ ಅಭಿವೃದ್ಧಿಯ ಬೀಡನ್ನಾಗಿ ಕಟ್ಟುವ ಸಂಕಲ್ಪದಿಂದ ಇಲ್ಲಿಂದ ಹೊರಟಿದ್ದೇನೆ ಎಂದರು.
ನರೇಂದ್ರ ಮೋದಿಯವರ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ನಮ್ಮದಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮಾಡಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ 16 ಸಾವಿರ ಕೋಟಿ ಹಣ ನೀಡಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಸೇರಿದಂತೆ 25 ಸಾವಿರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಂದಿದೆ. ಸ್ವಚ್ಛ ಭಾರತ, ಪ್ರಧಾನಮಂತ್ರಿ ಆವಾಸ್ ಯೋಜನೆ, ಜಲ ಜೀವನ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೆ ನಳದಿಂದ ನೀರು ಕೊಡುತ್ತಿದ್ದೇವೆ. ಸ್ವತಂತ್ರ ಬಂದು 73 ವರ್ಷದಲ್ಲಿ ಕೇವಲ 25 ಲಕ್ಷ ಮನೆಗೆ ಕುಡಿಯುವ ನೀರು ಸಿಗುತ್ತಿತ್ತು. ನಮ್ಮ ಯೋಜನೆಯಿಂದ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಕೊಡುತ್ತಿದ್ದೇವೆ. ಕರ್ನಾಟಕದಲ್ಲಿ ಜಲಕ್ರಾಂತಿ ಮಾಡಿದ್ದೇವೆ ಎಂದರು.
ಮದ್ದೂರಿನ ಮಣ್ಣಿನ ಗುಣ ನಾಯಕತ್ವ ಬೆಳೆಸುವ ಗುಣ. ಎಸ್.ಎಂ ಕೃಷ್ಣ ಅವರು ಇಲ್ಲಿಂದಲೇ ಮುಖ್ಯಮಂತ್ರಿಗಳಾಗಿ, ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಇಲ್ಲಿಂದ ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಿ. ಅತಂತ್ರ ಸರ್ಕಾರ ಬಿಟ್ಟು, ಸ್ವತಂತ್ರ ಪಕ್ಷದ ಆಯ್ಕೆಗೆ ಬಿಜೆಪಿಗೆ ಮತ ನೀಡಿ ಎಂದರು.
ಇಡೀ ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಅಲೆ ಇದೆ. ಭವ್ಯವಾದ ಭವಿಷ್ಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರವನ್ನು ತರಬೇಕು. ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಹೃದಯ ಶ್ರೀಮಂತ ಅಂಬರೀಶ್. ಸ್ನೇಹಕ್ಕಾಗಿ ಪ್ರಾಣ ಕೊಡುವಂತಹವ ಅಂಬರೀಶ್. ಅವರ ಶ್ರಮಕ್ಕೆ ತಕ್ಕ ಸ್ಥಾನಮಾನ ಸಿಗಲಿಲ್ಲ. ಕಾವೇರಿ ವಿಚಾರಕ್ಕೆ ರಾಜೀನಾಮೆ ಬೀಸಾಕಿ ಬಂದಿದ್ದರು. ಅವರ ಕನಸು ನನಸು ಮಾಡಲು ಸುಮಲತಾ ಅವರು ಶ್ರಮವಹಿಸುತ್ತಿದ್ದಾರೆ ಎಂದರು.
ರೈತರ ಬೆವರಿಗೆ ಬೆಲೆ, ಅಂಬರೀಶ್ ಅವರ ಕನಸು ನನಸು ಮಾಡಲು ಸ್ವಾಮಿಗೌಡರಿಗೆ ಮತ ನೀಡಬೇಕು. ಅಂಬರೀಶ್ ಸ್ಮಾರಕವನ್ನು ಮಾಡುವ ಕೆಲಸ ನನಗೆ ಸಿಕ್ಕಿದೆ. ನನಗೆ ಬಹಳ ದುಃಖ ಆಗುತ್ತದೆ. ಅವನ ಕಳೆದುಕೊಂಡ ದುಃಖ, ಅವನನ್ನು ನೆನೆಯದ ದಿನ ಇಲ್ಲ. ಆ ಸ್ನೇಹ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ ಎಂದರು.
ತಾವು ಸ್ವಾಭಿಮಾನದಿಂದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಕ್ಕಳಿಗೆ ಆಯ್ಕೆ ಮಾಡಿ ಕ್ರಾಂತಿ ಮಾಡಿದ್ದೀರಿ. ಮಂಡ್ಯದ ಅಭಿವೃದ್ಧಿಗಾಗಿ ಅವರು ಬಂದಿದ್ದಾರೆ. ಸ್ವಾಮಿಗೌಡರು ಜಿಲ್ಲಾ ಪಂಚಾಯತ ಸದಸ್ಯರಾಗಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಆಡಳಿತ ಅನುಭವವಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುತ್ತೇವೆ ಎಂದರು.