RTI ಹರೀಶ್ ಹಳ್ಳಿ ಸಾವಿನ ಸುತ್ತ ಹಲವು ಅನುಮಾನ.! ಪ್ರಕರಣ ಸಿಐಡಿ ತನಿಖೆಗೆ.!

ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಹರೀಶ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಮೇ 29 ರ ಸಂಜೆ ವೇಳೆಗೆ ಆದೇಶ ಬರವ ಸಾಧ್ಯತೆ ಇದೆ ಎಂದು ಎಸ್ಪಿ ಡಾ.ಅರುಣ್ ಕೆ ತಿಳಿಸಿದ್ದಾರೆ.
ಸಂಬಂಧಿಕರ ಸಮ್ಮುಖದಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ. ಇಬ್ಬರು ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಸ್ಪಿ ಹೇಳಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿರುವ ಆರೋಪದ ಮೇರೆಗೆ ಗಾಂಧಿನಗರ ಠಾಣೆಯ ಪೊಲೀಸರು ಹರೀಶ್ ಅವರನ್ನು ಚನ್ನಗಿರಿ ತಾಲ್ಲೂಕಿನ ಕಾಕನೂರಿನಿಂದ ಗಾಂಧೀನಗರ ಠಾಣೆಗೆ ಕರೆತರುವ ವೇಳೆ ದಾವಣಗೆರೆ ಹೊರವಲಯದ ತೋಳಹುಣಸೆಯ ಸಮೀಪ ಮೇಲ್ಸೇತುವೆಯ ಬಳಿ ಬರುತ್ತಿದ್ದಾಗ ಹರೀಶ್ ಕಾರಿನಿಂದ ಜಿಗಿದು ಸರ್ವೀಸ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಗಾಯಗೊಂಡ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹರೀಶ್ ಹಳ್ಳಿಯನ್ನು ಕರೆತಂದಿದ್ದ ಪೊಲೀಸರು ಹಿರಿಯ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಹರೀಶ್ ಅವರ ಪತ್ನಿ ಆರೋಪಿಸಿದ್ದರು. ಗಾಂಧಿನಗರ ಎಸ್ಐ ಕೃಷ್ಣಪ್ಪ, ಕಾನ್ಸ್ ಸ್ಟೆಬಲ್ ದೇವರಾಜ್, ಕಾರು ಚಾಲಕ ಇರ್ಷಾದ್ ಅವರು ನನ್ನ ಪತಿಯನ್ನು ದೌರ್ಜನ್ಯದಿಂದ ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಈ ಕೊಲೆಯ ಹಿಂದೆ ಕಣಿವೆ ಬಿಳಚಿಯ ಕೆ.ಬಾಬುರಾವ್ ಅವರ ಕೈವಾಡವಿದೆ ಎಂದು ಹರೀಶ್ ಅವರ ಪತ್ನಿ ಲತಾ ಅವರು ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.