ನವದೆಹಲಿ: ಪ್ರೀತಿಸಿದ ಯುವತಿಯನ್ನು ಕೊಂದು ಆಕೆಯ ದೇಹವನ್ನು ತನ್ನ ಢಾಬಾದ ರೆಫ್ರಿಜರೇಟರ್‌ನಲ್ಲಿ ತುಂಬಿ ಅದೇ ದಿನ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಹೊಗಿದ್ದವ ಪ್ರೇಮಿಗಳ ದಿನದಂದೇ ಪೊಲೀಸರ ಅತಿಥಿಯಾಗಿದ್ದಾನೆ. ನೈಋತ್ಯ ದೆಹಲಿಯ ಮಿತ್ರಾನ್ ಗ್ರಾಮದ ನಿವಾಸಿ, ಸಾಹಿಲ್ ಗೆಹಲೋತ್ ಬಂಧಿತ.
ನಿಕ್ಕಿ ಮತ್ತು ಸಾಹಿಲ್ ಕಳೆದ ಎರಡು ವರ್ಷಗಳಿಂದ ಸಹಜೀವನದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಫೆಬ್ರುವರಿ 9ರ ರಾತ್ರಿ ಈ ಘಟನೆ ನಡೆದಿದ್ದು, ಹತ್ಯೆಗೀಡಾದ ನಿಕ್ಕಿ ಸಾಹಿಲ್ ಜೊತೆ ಮದುವೆ ವಿಚಾರವಾಗಿ ಜಗಳ ತೆಗೆದಿದ್ದಾಳೆ. ಈ ಸಂದರ್ಭ ಸಾಹಿಲ್ ಮೊಬೈಲ್‌ನ ಡೇಟಾ ಕೇಬಲ್ ಬಳಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಾಹಿತ್, ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ತನ್ನ ಢಾಬಾದ ರೆಫ್ರಿಜರೇಟರ್‌ನಲ್ಲಿ ತುಂಬಿ ಅದೇ ದಿನ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಹೊಗಿದ್ದ. ಕೊಲೆಯಾದ ನಾಲ್ಕು ದಿನಗಳ ನಂತರ 23 ವರ್ಷದ ಮಹಿಳೆ ನಿಕ್ಕಿ ಯಾದವ್ ಶವವನ್ನು ಮಂಗಳವಾರ ಬೆಳಿಗ್ಗೆ ರೆಸ್ಟೋರೆಂಟ್‌ನಲ್ಲಿನ ರೆಫ್ರಿಜರೇಟರ್‌ನಿಂದ ಹೊರತೆಗೆಯಲಾಗಿದೆ.
ಬೇರೊಬ್ಬ ಮಹಿಳೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಸಂಗತಿಯನ್ನು ಆರೋಪಿಯು ಗೆಳತಿ ನಿಕ್ಕಿ ಯಾದವ್ ಅವರಿಂದ ಮರೆಮಾಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಬಗ್ಗೆ ತಿಳಿದಾಗ ನಿಕ್ಕಿ ಜಗಳ ಮಾಡಿದ್ದಾಳೆ. ಈ ಸಂದರ್ಭ ಸಾಹಿಲ್, ಮೊಬೈಲ್ ಡೇಟಾ ಕೇಬಲ್ ಅನ್ನು ಕುತ್ತಿಗೆಗೆ ಬಿಗಿದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ನೀನು ಮತ್ತೊಬ್ಬ ಮಹಿಳೆಯನ್ನು ಮದುವೆಯಾದರೆ ಪ್ರಕರಣ ದಾಖಲಿಸುವುದಾಗಿ ನಿಕ್ಕಿ, ಸಾಹಿಲ್‌ಗೆ ಎಚ್ಚರಿಕೆ ನೀಡಿದ್ದಳು ಎಂದು ಮೂಲಗಳು ತಿಳಿಸಿವೆ.
ಫೆಬ್ರುವರಿ 9ರಂದು ಗೆಳೆಯನಿಗೆ ಕರೆ ಮಾಡಿ ದೆಹಲಿಯ ಉತ್ತಮ್ ನಗರಕ್ಕೆ ಬರಲು ನಿಕ್ಕಿ ಹೇಳಿದ್ದಳು. ಕಾರಿನಲ್ಲಿ ನಿಕ್ಕಿಯನ್ನು ಕೂರಿಸಿಕೊಂಡು ಸಾಹಿಲ್ ಹೊರಟಿದ್ದಾನೆ. ಈ ಸಂದರ್ಭ ಬೇರೆ ಮದುವೆ ಆಗದಂತೆ ನಿಕ್ಕಿ ಒತ್ತಡ ಹಾಕಿದ್ದಾಳೆ. ಅಲ್ಲದೆ, ಗೋವಾಗೆ ತೆರಳಲು ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದಳು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕಾರಿನಲ್ಲೇ ಕೊಲೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
