basavanna; ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ‘ಅನುಭವ ಮಂಟಪ’: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮುಂಬೈ, ಆ. 18: ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ‘ಅನುಭವ ಮಂಟಪ’ ಎನ್ನುವುದನ್ನು ಜಗತ್ತಿಗೆ ಸಾರಿದವರು ಬಸವಣ್ಣನವರು (basavanna) ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನುಡಿದರು
ಡಾ. ಕಾಶೀನಾಥ್ ಗಾಣೇಕರ್ ಸಭಾಗೃಹ, ಮುಂಬೈನ ಠಾಣೆಯಲ್ಲಿ ಸಂಗಮ ಸಮಾವೇಶ ಕನ್ನಡ ಕಲಾ ಕೇಂದ್ರದವರು ಆಯೋಜಿಸಿದ್ದ “ತುಮಾರೆ ಸಿವಾ ಔರ್ ಕೋಯಿ ನಹೀ” ವಚನ (vachana) ಸಂಸ್ಕೃತಿ ಅಭಿಯಾನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಅಜ್ಞಾನ, ಮೌಢ್ಯ, ಷೋಷಣೆ, ಜಾತೀಯತೆ, ಲಿಂಗತಾರತಮ್ಯ ಇವುಗಳನ್ನು ದೂರ ಮಾಡಿ ಸಮಸಮಾಜವನ್ನು ಬಸವಣ್ಣನವರು ನಿರ್ಮಾಣ ಮಾಡಿದರು. ಸ್ಥಾವರವನ್ನು ನಿರಾಕರಿಸಿ ಜಂಗಮವನ್ನು ಅಪ್ಪಿಕೊಂಡರು. ಕಾಯಕವೇ ಕೈಲಾಸ ಅಂತ ಕಾಯಕಕ್ಕೆ ವಿಶೇಷ ಮನ್ನಣೆಯನ್ನು ತಂದುಕೊಟ್ಟವರು. ಬಿಜ್ಜಳನ ರಾಜ್ಯದಲ್ಲಿ ಪ್ರಧಾನಿಯಾಗಿ ಒಬ್ಬ ರಾಜಕಾರಣಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟವರು ಎಂದು ಹೇಳಿದರು.
ಭಾರತದ ಪ್ರಧಾನಿ ಮೋದಿಜಿಯವರು (Narendra Modi) ಪಾರ್ಲಿಮೆಂಟಿನ ಅಸ್ಥಿತ್ವವನ್ನು ಭದ್ರಗೊಳಿಸಿದ ಮಹಾನ್ ಚೇತನ ಬಸವಣ್ಣನವರು ಅಂತ ಪದೇ ಪದೇ ಹೇಳ್ತಾರೆ. ಬಸವಣ್ಣನವರು 12ನೆಯ ಶತಮಾನದಲ್ಲಿ ಮಾಡಿದ ಕಾರ್ಯಗಳನ್ನು ಇವತ್ತು ನಮ್ಮ ಜನರು ಮುಂದುವರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಇವತ್ತಿನ ಪಾರ್ಲಿಮೆಂಟಿಗೂ ಅವತ್ತಿನ ಅನುಭವ ಮಂಟಪಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ.
ಬಸವಣ್ಣನವರ ಸಾಧನೆಗಳು ವಿಶ್ವಮಾನ್ಯವಾದವುಗಳು. ಹಾಗಾಗಿ ಬಸವಣ್ಣನವರನ್ನು ವಿಶ್ವಗುರು ಅಂತ ಸಮಾಜ ಗೌರವಿಸುತ್ತಿದೆ. ಅಂತಹ ವಿಶ್ವಗುರುವಿನ 44 ವಚನಗಳನ್ನು ಹಿಂದಿಯಲ್ಲಿ ಅನುವಾದಿಸಿ ರಾಗಸಂಯೋಜನೆ ಮಾಡಿಸಿ ಇವತ್ತು ನಮ್ಮ ಕಲಾವಿದರು ನಿಮ್ಮ ಮುಂದೆ ಅಭಿನಯಿಸಲಿದ್ದಾರೆ. 2019ರಲ್ಲಿ 100 ಜನ ಸಾಣೇಹಳ್ಳಿಯ ನಮ್ಮ ಶಾಲೆಯ ಮಕ್ಕಳು “ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ಎನ್ನುವ ಶೀರ್ಷಿಕೆಯಡಿಯಲ್ಲಿ ಇದೇ ವಚನಗಳಿಗೆ ಹೆಜ್ಜೆ ಹಾಕಿದ್ದರು. ಇನ್ನು ಹಲವಾರು ಮಂದಿ ಕಾಯಕವೇ ಕೈಲಾಸ ಅಂತ್ಹೇಳಿ ಕರ್ನಾಟಕವನ್ನು ಬಿಟ್ಟು ಮುಂಬೈಗೆ (mumbai) ಬಂದು ಸಾಕಷ್ಟು ದುಡಿಮೆ ಮಾಡಿದ್ದೀರಿ. ನಿಮ್ಮ ದುಡಿಮೆಯ ಸ್ವಲ್ಪ ಭಾಗವನ್ನಾದರೂ ಇಂತಹ ಸತ್ಕಾರ್ಯಗಳಿಗೆ ನೀಡುವಂಥ ಹೃದಯ ಶ್ರೀಮಂತಿಕೆಯನ್ನು ಜನ ಬೆಳೆಸಿಕೊಂಡರೆ ಇನ್ನು ಹೆಚ್ಚು ಹೆಚ್ಚು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಿಕ್ಕೆ ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಹೋಟೆಲ್ ಮಾಲಿಕ ಸಂಘದ ಅಧ್ಯಕ್ಷ ಪುಳ್ಯ ಉಮೇಶ್ ಶೆಟ್ಟಿ, ವರ್ತಕ ನಗರ ಠಾಣೆಯ ಅಧ್ಯಕ್ಷರಾದ ಜಯಂತ್‌ಶೆಟ್ಟಿ, ಮಂಗೇಶ್ ಅವ್ಲಿ ಮಾತನಾಡಿದರು. ರುದ್ರಪ್ಪ ಸ್ವಾಗತಿಸಿದರೆ ಮೋಹನ್ ರೈ ನಿರೂಪಿಸಿದರು. ಡಾ. ಲಲಿತಾ ಸ್ವಾಗತ ಗೀತೆಯನ್ನು ಹಾಡಿದರು. ಉಮಾಪತಿ ಕೆ ಆರ್, ಶ್ರೀನಿವಾಸ ಜಿ ಕಪ್ಪಣ್ಣ ಉಪಸ್ಥಿತರಿದ್ದರು. ಪ್ರೇಕ್ಷಕರು ಭಾಗವಹಿಸಿ ವಚನ ನೃತ್ಯ ಪ್ರದರ್ಶನ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲ ಎದ್ದು ನಿಂತು ಅಭಿನಯಿಸಿದ ಕಲಾವಿದರಿಗೆಲ್ಲ ಚಪ್ಪಾಳೆ ಮೂಲಕ ಶ್ಲಾಘಿಸಿದರು.

Leave a Reply

Your email address will not be published. Required fields are marked *

error: Content is protected !!