ಹೊನ್ನಾಳಿಯ ಮರಳಿನಲ್ಲಿ ಮಾತ್ರ ಬೆಳೆಯುವ ಹಣ್ಣಿನ ವಿಶೇಷತೆ ಏನು ಗೊತ್ತಾ?
ಹೊನ್ನಾಳಿ :ನಿರ್ದಿಷ್ಟ ಕಾಲಮಾನದಲ್ಲಿ ಮಾತ್ರ ಲಭಿಸುವಂಥ, ವಿಶಿಷ್ಟ ರುಚಿ ಹೊಂದಿರುವ ವಿಶೇಷವಾದ ಕರಬೂಜ ಹಣ್ಣುಗಳನ್ನು ಹೊನ್ನಾಳಿ ಸೀಮೆಯ ತುಂಗಭದ್ರಾ ನದಿ ತೀರದ: ನಿರ್ದಿಷ್ಟ ಕಾಲಮಾನದಲ್ಲಿ ಮಾತ್ರ ಲಭಿಸುವಂಥ, ವಿಶಿಷ್ಟ ರುಚಿ ಹೊಂದಿರುವ ವಿಶೇಷವಾದ ಕರಬೂಜ ಹಣ್ಣುಗಳನ್ನು ಹೊನ್ನಾಳಿ ಸೀಮೆಯ ತುಂಗಭದ್ರಾ ನದಿ ತೀರದ ಹೊಳೆ ಮಾದಾಪುರ, ಬೇಲಿಮಲ್ಲೂರು, ಗೊಲ್ಲರಹಳ್ಳಿ ಮತ್ತಿತರ ಗ್ರಾಮಗಳ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.
ಈ ಹಣ್ಣುಗಳು ಮಧ್ಯ ಕರ್ನಾಟಕದ ಅದರಲ್ಲೂ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನದಿ ತಟದಲ್ಲಿ ಮಾತ್ರ ಬೆಳೆಯಲಾಗುತ್ತದೆ.. ವರ್ಷಕ್ಕೊಮ್ಮೆ ಮಾತ್ರ ಇದರ ಸ್ವಾಧ ಸವಿಯಬಹುದು. ಕೃಷಿ ನದಿತೀರದಲ್ಲಿ ಮಾತ್ರ ಇದನ್ನು ಬೆಳೆಯುವ ಕಾರಣ ಮರಳಿನಲ್ಲಿ ಉಳಿದ ನೀರಿನಾಂಶವೆ ಗಿಡಗಳ ಬೆಳವಣೆಗೆಗೆ ಸಾಕಾಗುತ್ತದೆ. ರೈತರೇ ಉತ್ತಮ ಹಣ್ಣುಗಳನ್ನು ಆಯ್ಕೆ ಮಾಡಿ, ತಮ್ಮ ಮುಂದಿನ ಬೆಳೆಗೆ ಬೀಜಗಳನ್ನು ಸಿದ್ದಪಡಿಸಿಟ್ಟುಕೊಳ್ಳುತ್ತಾರೆ. ಮೊಳಕೆ ಕಟ್ಟಿದ ಬೀಜಗಳನ್ನು ಕೊಟ್ಟಿಗೆ ಗೊಬ್ಬರ ಹಾಗೂ ಮರಳು ಮಣ್ಣಿನಲ್ಲಿ ಮಾಡಿದ ಸಸಿಮಡಿಗಳಲ್ಲಿ ಬೆಳೆಸಿ 9 ರಿಂದ 10 ದಿನದ ಸಸಿಗಳನ್ನು ನಾಟಿಮಾಡುತ್ತಾರೆ. ಬೀಜ ಹಾಕಿದ ನಾಲ್ಕು ತಿಂಗಳಿಗೆ ಹಣ್ಣುಗಳು ಮಾರಲು ಲಭ್ಯ. ಒಂದು ಗಿಡಕ್ಕೆ ಎರಡರಿಂದ ನಾಲ್ಕು ಹಣ್ಣುಗಳು ದೊರೆಯುತ್ತವೆ. ಹಣ್ಣುಗಳಿಗೆ ಅವುಗಳ ಗಾತ್ರದ ಅನುಸಾರ ಒಂದು ಹಣ್ಣಿಗೆ 200 ರೂಪಾಯಿ ವರೆಗೂ ಮಾರಾಟಗಾರರಿಗೆ ದೊರೆಯುತ್ತದೆ.
ಒಂದು ಎಕರೆಗೆ 180 ಗುಣಿಗಳನ್ನು ತೋಡಬಹುದಾಗಿದ್ದು, 180 ಸಸಿಗಳನ್ನು ಬೆಳೆಸಬಹುದು. ಎಕರೆಗೆ ಲಕ್ಷ ರೂ. ಖರ್ಚು ಮಾಡಿದರೆ ಮೂರು ಲಕ್ಷ ರೂ.ತನಕ ಲಾಭ ತೆಗೆದುಕೊಳ್ಳಬಹುದು. ಇದೀಗ ವಿಪರೀತ ಬಿಸಿಲಿನಿಂದಾಗಿ ಕರಬೂಜ ಹಣ್ಣುಗಳಿಗೆ ಬೇಡಿಕೆ ಇಮ್ಮಡಿಗೊಂಡಿದೆ.
ಪಟ್ಟಣದ ಪ್ರಮುಖ ವೃತ್ತಗಳು, ರಸ್ತೆಗಳ ಇಕ್ಕೆಲಗಳಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡುವ ರೈತರು, ವ್ಯಾಪಾರಸ್ಥರು ಸಂತಸಗೊಂಡಿದ್ದಾರೆ. ಗ್ರಾಮೀಣ ಭಾಗಗಳ ರೈತರು ಕರಬೂಜ ಹಣ್ಣುಗಳನ್ನು ಅನ್ಯ ಜಿಲ್ಲೆಗಳಿಗೂ ಸಾಗಿಸುತ್ತಿದ್ದಾರೆ. ಕೆಲವರು ತಾವೇ ದರ ನಿಗದಿ ಪಡಿಸಿ ದಲ್ಲಾಳಿಗಳಿಗೆ ಮಾರಾಟ ಮಾಡಿ, ಕಾಸು ಸಂಪಾದಿಸುತ್ತಿದ್ದಾರೆ. ಪಟ್ಟಣದ ತುಂಗಭದ್ರಾ ನದಿ ಸೇತುವೆಯ ಇಕ್ಕೆಲಗಳ ರಸ್ತೆಗಳು, ಪೊಲೀಸ್ ಠಾಣೆಯ ಆಸು-ಪಾಸಿನ ಭಾಗ, ಟಿ.ಬಿ. ವೃತ್ತದ ಮೂಲಕ ಶಿವಮೊಗ್ಗ ಮಾರ್ಗವಾಗಿ ಕಾರುಗಳಲ್ಲಿ ತೆರಳುವವರು ವ್ಯಾಪಾರಿಗಳು ಹೇಳಿದಷ್ಟು ಹಣ ನೀಡಿ ಕರಬೂಜ ಹಣ್ಣುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿದೆ.
ಬೇಸಿಗೆಯ ಬಿಸಿಲಿನ ಝಳ ಶುರುವಾಗುತ್ತಿದ್ದಂತೆ ದೇಹಕ್ಕೆ ತಂಪು ನೀಡುವ ಹಣ್ಣುಗಳಿಗೆ ಅಧಿಕ ಬೇಡಿಕೆ ಇದ್ದು, ತುಂಗಭದ್ರಾ ನದಿ ತೀರದ ಮರಳು ಮಣ್ಣಿನಲ್ಲಿ ತೇವಾಂಶ ಆಧರಿಸಿ ಬೆಳೆಯುವ ಮೆಲನ್ ಜಾತಿಯ ಬನಾಸ್ಪತ್ರೆ, ಗಂಜಾಂ ಹಾಗೂ ಕರಬೂಜ ಎಂದೇ ಕರೆಯುವ ದೇಸಿ ತಳಿಯ ಹಣ್ಣುಗಳು ಸದ್ಯ ಬೇಡಿಕೆಯ ಹಣ್ಣಾಗಿದೆ.
ಮೆಲನ್ ಜಾತಿಗೆ ಸೇರುವ ಈ ಹಣ್ಣುಗಳಲ್ಲಿ ಶೇ. 90ರಷ್ಟು ನೀರಿನಾಂಶವೇ ಇರುತ್ತದೆ. ಅಲ್ಲದೇ ಈ ಹಣ್ಣು ಸೇವನೆ ದೇಹಕ್ಕೆ ತಂಪು ನೀಡುತ್ತದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಲವು ರೈತರು ಮೆಲನ್ ಜಾತಿಯ ಹಣ್ಣನ್ನು ವರ್ಷಾನುವರ್ಷದಿಂದ ಬೆಳೆಯುತ್ತಿದ್ದಾರೆ. ಈ ವರ್ಗದ ಹಣ್ಣುಗಳು ಆಂಧ್ರಪ್ರದೇಶದ ಕಡಪ ಜಿಲ್ಲೆ ಹಾಗೂ ಮಹಾರಾಷ್ಟ್ರದ ಔರಂಗಬಾದ್ ಹಾಗೂ ನಾಗಪುರ ಪ್ರದೇಶದಲ್ಲಿ ಕಂಡು ಬರುತ್ತದೆ. ಕಡಪದಲ್ಲಿ ಬೆಳೆಯುವ ಹಣ್ಣುಗಳಿಗಿಂತ ಗಾತ್ರದಲ್ಲಿ ದೊಡ್ಡದಿರುವ ಹೊನ್ನಾಳಿಯ ಹಣ್ಣುಗಳಲ್ಲಿ ಸಿಹಿಯ ಅಂಶ ಕಡಿಮೆ. ತುಂಬಾ ತೆಳುವಾದ ಹಾಗೂ ನಯವಾದ ಸಿಪ್ಪೆ, ದಪ್ಪನೆಯ ತಿರುಳಿನ, ಸುಮಧುರ ಪರಿಮಳ ಮೂಗಿಗೆ ಬಡಿಯುತ್ತಿರುತ್ತದೆ. ಅದರಲ್ಲೂ ಗಿಡದಲ್ಲಿಯೇ ಹಣ್ಣಾಗಿ ಸೀಳು ಬಿಡುವ ಹಣ್ಣೊಂತು ತಿನ್ನೋದಕ್ಕೆ ಸಖತ್ ಸ್ವಾಧ. ಇವು 6 ರಿಂದ 8 ಕೆಜಿ ವರೆಗೆ ತೂಗುತ್ತವೆ. ಬನಾಸ್ಪತ್ರೆಯ ತಿರುಳು ತಿಳಿ ಕೇಸರಿ ಬಣ್ಣದ್ದಾಗಿದ್ದು ಸಿಪ್ಪೆ ಹಳದಿಯಾಗಿರುತ್ತದೆ. ಗಂಜಾಂ ಹಸಿರು ಮಿಶ್ರಿತ ಬಿಳಿ ಬಣ್ಣದ ತಿರುಳನ್ನು ಹೊಂದಿದ್ದು ಸಿಪ್ಪೆಯು ನಿಂಬೆ ಹಣ್ಣಿನ ಬಣ್ಣದ್ದು. ಈ ಎರಡು ತಳಿಗಳಲ್ಲೂ ಸಿಪ್ಪೆಯ ಮೇಲೆ ಉದ್ದನೆಯ ಪಟ್ಟಿಗಳು ಇರುವುದಿಲ್ಲ. ‘‘ತೆಳುವಾದ ಸಿಪ್ಪೆ ಕಾರಣ ಮಾಗಿದ ಹಣ್ಣುಗಳನ್ನು ಒಂದೆರಡು ದಿನಕ್ಕಿಂತ ಹೆಚ್ಚು ಇಡಲು ಆಗುವುದಿಲ್ಲ.
ಬನಾಸ್ಪತ್ರೆ ಹಾಗೂ ಗಂಜಾಂ ಅಲ್ಲದೇ, ಕರಬೂಜ ಹೆಸರಿನ ಚಂಡಾಲಕ್ ವರ್ಗದ ಹಣ್ಣನ್ನೂ ಹೊನ್ನಾಳಿ ಭಾಗದ ರೈತರು ಬೆಳೆಯುತ್ತಾರೆ. ಕೇಸರಿ ಬಣ್ಣದ ಸಿಪ್ಪೆಯ ಮೇಲೆ ಹಸಿರು ಅಥವಾ ಹಳದಿ ಪಟ್ಟಿಗಳಿದ್ದು ತಿರುಳು ಗಾಢ ಕೇಸರಿ ಬಣ್ಣದ್ದಾಗಿದೆ. ಬನಾಸ್ಪತ್ರೆ ಹಾಗೂ ಗಂಜಾಂ ಗಳಿಗಿಂತ ಈ ಹಣ್ಣನ್ನು ಒಂದೆರಡು ದಿನ ಹೆಚ್ಚಿಗೆ ಇಡಬಹುದಾದ ಕಾರಣ ರೈತರು ಕರಬೂಜ ತಳಿಯನ್ನೇ ಹೆಚ್ಚೆಚ್ಚು ಬೆಳೆಯುತ್ತಿದ್ದಾರೆ. ಹೀಗಾಗಿ ಬನಾಸ್ಪತ್ರೆ ಮತ್ತು ಗಂಜಾಂ ಈಚೆಗೆ ಅಪರೂಪವಾಗುತ್ತಿದೆ.
ಬನಾಸ್ಪತ್ರೆ ಹಾಗೂ ಗಂಜಾಂ ಬೆಳೆಯಲು ನದಿತೀರದ ಮರಳು ಮಿಶ್ರಿತ ಮಣ್ಣೆ ಬೇಕು. ಈ ಸೂಕ್ಷ್ಮ ತಳಿಯನ್ನು ಹಸಿರು ಮನೆ ಅಥವಾ ನೆರಳು ಮನೆಯಲ್ಲಿ ಬೆಳೆಸಲು ಕಷ್ಟ. ಹೊನ್ನಾಳಿಯ ಈ ಮೆಲನ್ ಹಣ್ಣುಗಳು ಸಮೀಪದ ಶಿವಮೊಗ್ಗ, ಅರಸೀಕೆರೆ, ದಾವಣಗೆರೆ ಹಾಗೂ ಹತ್ತಿರದ ಊರುಗಳ ಮಾರುಕಟ್ಟೆಗಳಿಗೆ ಸಾಗಣೆಯಾಗುತ್ತವೆ.
ಈ ಹಣ್ಣಿನಲ್ಲಿ ಸಿಹಿ ಅಂಶ ಕೊಂಚ ಕಡಿಮೆ ಇದ್ದರೂ ತಿನ್ನಲು ಬಹು ರುಚಿಕರ. ಜ್ಯೂಸ್ ಮಾಡಲೂ ಉಪಯೋಗಿಸಲಾಗುತ್ತದೆ. ಸಣ್ಣ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ದೇಸಿ ತಳಿಗಳ ಈ ಹಣ್ಣಿಗಿಂತ ಹೆಚ್ಚುಕಾಲ ಕೆಡದೆ ಇಡಬಲ್ಲ ಹಾಗೂ ದೂರದ ಸಾಗಾಣಿಕೆ ಸಾಧ್ಯವಿರುವ ಸುಧಾರಿತ ತಳಿಗಳು ಈ ಭಾಗದ ರೈತರನ್ನು ಆಕರ್ಷಿಸುತ್ತಿದೆ. ಆದರೆ ನದಿತೀರದ ಮರಳು ಮಾರಾಟ ಹೊನ್ನಾಳಿಯ ದೇಸಿ ತಳಿಗಳ ವೈವಿಧ್ಯತೆಗೆ ಮಾರಕವಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಾಗಿದೆ.